ಬೆಂಗಳೂರು: "ಬಡವರ ರಕ್ಷಣೆ ನಮ್ಮ ಸರ್ಕಾರದ ಕರ್ತವ್ಯ. ಸಾಲ ವಸೂಲಿ ಹೆಸರಲ್ಲಿ ಮೈಕ್ರೊಫೈನಾನ್ಸ್ ಗಳಿಂದ ಬಡವರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ನಮ್ಮ ಸರ್ಕಾರ ಸುಗ್ರೀವಾಜ್ಞೆ ರೂಪಿಸಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ಸಾಲ ವಸೂಲಿ ಹೆಸರಲ್ಲಿ ಬಡವರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಸುಗ್ರೀವಾಜ್ಞೆ ಬಗ್ಗೆ ಕೇಳಿದಾಗ, "ಸಾಲ ವಸೂಲಿ ಮಾಡಲು ರೌಡಿಗಳ ಮೂಲಕ ಬೆದರಿಸಿ, ಕಾನೂನು ಕೈಗೆ ತೆಗೆದುಕೊಂಡು, ಬಡವರ ಮೇಲೆ ದಬ್ಬಾಳಿಕೆ ನಡೆಸಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಇದನ್ನು ನಿಯಂತ್ರಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು" ಎಂದು ತಿಳಿಸಿದರು.
ಎಚ್ಚರಿಕೆ ನೀಡಿದ್ದರೂ ಕಿರುಕುಳ ಮುಂದುವರಿದಿದೆ ಎಂದು ಕೇಳಿದಾಗ, "ಈಗಾಗಲೇ ಬೆಳಗಾವಿ, ಬೀದರ್, ಮೈಸೂರು, ರಾಮನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳಲ್ಲಿ ಎಫ್ ಐಆರ್ ದಾಖಲಾಗಿವೆ. ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಹಾಗೂ ಸಹಕಾರ ಸಚಿವರು ಸೂಚಿಸಿದ್ದಾರೆ. ಇದನ್ನು ನಿಯಂತ್ರಿಸಲು ಸುಗ್ರೀವಾಜ್ಞೆ ಸಿದ್ಧಪಡಿಸಲಾಗಿದ್ದು, ಒಂದೆರಡು ದಿನಗಳಲ್ಲಿ ರಾಜ್ಯಪಾಲರಿಗೆ ಕಳುಹಿಸಲಾಗುವುದು. ಪ್ರತಿ ಜಿಲ್ಲಾ ಕಚೇರಿಯಲ್ಲಿ ಇಂತಹ ಕಿರುಕುಳ ಪ್ರಕರಣಗಳಿಗೆ ದೂರು ನೀಡಲು ಸಹಾಯವಾಣಿ ಆರಂಭಿಸಲಾಗಿದೆ. ಇಂತಹ ಪ್ರಕರಣಗಳು ನಿಮ್ಮ ಗಮನಕ್ಕೆ ಬಂದರೆ ಕೂಡಲೇ ಈ ಸಹಾಯವಾಣಿಗೆ ಸಂಪರ್ಕಿಸಿ, ಬಡವರಿಗೆ ನೆರವಾಗಬೇಕು ಎಂದು ಕಾಂಗ್ರೆಸ್ ಪಕ್ಷ ಹಾಗೂ ಇತರ ಪಕ್ಷಗಳ ಕಾರ್ಯಕರ್ತರಿಗೂ ಮನವಿ ಮಾಡುತ್ತೇನೆ. ಮುಖ್ಯಮಂತ್ರಿಗಳು ತಮ್ಮ ವಿಶ್ರಾಂತಿ ಬಳಿಕ ಸಧ್ಯದಲ್ಲೇ ಪೊಲೀಸ್ ಅಧಿಕಾರಿಗಳು, ಆಯುಕ್ತರ ಜತೆ ಸಭೆ ನಡೆಸಲಿದ್ದಾರೆ. ನಂತರ ಜಿಲ್ಲಾಧಿಕಾರಿಗಳ ಜತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ" ಎಂದು ತಿಳಿಸಿದ್ದಾರೆ.
ವಿತ್ತ ಸಚಿವೆ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳ ಪಟ್ಟಿ ನೀಡಲಿ
ಕರ್ನಾಟಕ ದಿವಾಳಿಯಾಗಿದೆ ಎಂಬ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಕೇಂದ್ರ ಸರ್ಕಾರ ಎಷ್ಟು ಲಕ್ಷ ಕೋಟಿಗಟ್ಟಲೆ ಸಾಲ ಮಾಡಿದೆ ಎಂಬುದನ್ನು ಅರಿಯಬೇಕು. ನಮ್ಮ ರಾಜ್ಯ ಸರ್ಕಾರ ಅಷ್ಟು ದೊಡ್ಡ ಪ್ರಮಾಣದ ಸಾಲ ಮಾಡಿಲ್ಲ. ನಾವು ಈ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದಾಗ ಪ್ರಧಾನಮಂತ್ರಿಗಳು ಕೂಡ ನಮ್ಮ ರಾಜ್ಯ ದಿವಾಳಿಯಾಗಲಿದೆ ಎಂದು ಹೇಳಿದ್ದರು. ನಂತರ ನಡೆದ ಎಲ್ಲಾ ರಾಜ್ಯಗಳ ಚುನಾವಣೆಯಲ್ಲಿ ಅವರು ಗ್ಯಾರಂಟಿ ಯೋಜನೆ ನಕಲು ಮಾಡಿ ಯೋಜನೆಗಳನ್ನು ಘೋಷಿಸಿದ್ದಾರೆ. ನಮ್ಮ ಸರ್ಕಾರ ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಬಳಲಿದ್ದ ಜನಸಾಮಾನ್ಯರಿಗೆ ನೆರವಾಗಲು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆಯೇ ಹೊರತು, ಮತಕ್ಕಾಗಿ ಅಲ್ಲ. ನಮ್ಮ ಸರ್ಕಾರದ ಆರ್ಥಿಕ ಪರಿಸ್ಥಿತಿ ಹಾಗೂ ದಿವಾಳಿ ವಿಚಾರ ಪಕ್ಕಕ್ಕಿರಲಿ. ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಅವರು ಯಾವ ಕೊಡುಗೆ ನೀಡಿದ್ದಾರೆ ಎಂದು ಮೊದಲು ಪಟ್ಟಿ ನೀಡಲಿ" ಎಂದು ತಿರುಗೇಟು ನೀಡಿದರು.
ಮಾತು ಕೊಟ್ಟಂತೆ ನಡೆಯಬೇಕು
ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ಅನುದಾನ ನೀಡಲಿಲ್ಲ ಎಂದು ಕೇಳಿದಾಗ, "ನಾಲಿಗೆಯಿಂದ ಒಂದು ಮಾತು ಬಂದರೆ ಅದನ್ನು ಉಳಿಸಿಕೊಂಡು, ಅದರಂತೆ ನಡೆಯಬೇಕು. ಇದನ್ನು ನೋಡಿದರೆ ನನಗೆ ನಾಚಿಕೆಯಾಗುತ್ತದೆ. ಅವರು ಮೊದಲು ತಮ್ಮ ಮಾತನ್ನು ಉಳಿಸಿಕೊಳ್ಳಲಿ" ಎಂದು ತಿಳಿಸಿದರು.
ಯಾವ ಶಾಸಕರೂ ಸಂಪರ್ಕಿಸಿಲ್ಲ:
ಜೆಡಿಎಸ್ ಶಾಸಕರು ನಿಮ್ಮ ಸಂಪರ್ಕದಲ್ಲಿ ಇದ್ದಾರಾ ಎಂದು ಕೇಳಿದಾಗ, "ನಾನು ಜೆಡಿಎಸ್ ಶಾಸಕರ ವಿಚಾರವಾಗಿ ಮಾತನಾಡಿಲ್ಲ, ಜೆಡಿಎಸ್ ಕಾರ್ಯಕರ್ತರು ತಮ್ಮ ಭವಿಷ್ಯವನ್ನು ತಾವು ನೋಡಿಕೊಳ್ಳಬೇಕು ಎಂದು ಕರೆ ನೀಡಿದ್ದೇನೆ. ಆ ಕಾರ್ಯಕರ್ತರು ಕೂಡ ಎಷ್ಟು ದಿನ ಎಂದು ಕಾಯಲು ಸಾಧ್ಯ? ಅವರಿಗೂ ಜಾತ್ಯಾತೀತ ಸಿದ್ಧಾಂತದ ರಾಷ್ಟ್ರೀಯ ಪಕ್ಷದ ಅಗತ್ಯವಿದೆ. ಅನೇಕ ಕಾರ್ಯಕರ್ತರು ನಮ್ಮ ಪಕ್ಷ ಸೇರಲು ಮುಂದಾಗಿದ್ದಾರೆ" ಎಂದು ತಿಳಿಸಿದರು.
ಶಾಸಕರು ನಿಮ್ಮ ಪಕ್ಷ ಸೇರಲು ಮುಂದೆ ಬಂದರೆ ಎಂದು ಕೇಳಿದಾಗ, "ಆ ವಿಚಾರ ಮುಂದೆ ನೋಡೋಣ. ನಾನು ಅದರ ಬಗ್ಗೆ ಆಲೋಚನೆ ಮಾಡಿಲ್ಲ. ಯಾವ ಶಾಸಕರು ನಮ್ಮ ಸಂಪರ್ಕದಲ್ಲಿ ಇಲ್ಲ. ನಾನು ಯಾರ ಜತೆಗೂ ಮಾತನಾಡಿಲ್ಲ. ಇದೆಲ್ಲವೂ ಸುಳ್ಳು ಸುದ್ದಿ" ಎಂದು ತಿಳಿಸಿದರು.
ಅಶೋಕ್ ಬಳಿ ಶಾಸ್ತ್ರ ಕೇಳಲು ಹೋಗುತ್ತೇನೆ
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಬದಲಾವಣೆಯ ದಿನಾಂಕ ಘೋಷಣೆ ಮಾಡಿರುವ ಬಗ್ಗೆ ಕೇಳಿದಾಗ, "ನನಗೂ ಜ್ಯೋತಿಷ್ಯ ಕೇಳುವ ಚಟ ಇದೆ. ಈಗ ಅಶೋಕ್ ಅವರು ಜ್ಯೋತಿಷ್ಯ ಹೇಳುವ ಬೋರ್ಡ್ ಹಾಕಿಕೊಂಡಿದ್ದಾರೆ. ಸಮಯ ಬಿಡುವು ಮಾಡಿಕೊಂಡು ನಾನು ಅವರ ಬಳಿ ಹೋಗಿ ಶಾಸ್ತ್ರ ಕೇಳುತ್ತೇನೆ" ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: 'ನನ್ನ ಮೇಲಿನ ರಾಜಕೀಯ ಹಗೆತನಕ್ಕೆ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದೆ ಕಾಂಗ್ರೆಸ್'
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.