ಕನಕಪುರ, ಫೆ.07: ದೇಶ, ಧರ್ಮ ಯಾವುದೇ ಆಗಿರಲಿ ಮಾನವೀಯತೆ ಮುಖ್ಯ. ಸರಪಳಿ ಕಟ್ಟಿ ನಡೆಸಿಕೊಳ್ಳುವುದು ಸರಿಯಲ್ಲ. ಇದು ಖಂಡನೀಯ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕನಕಪುರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಅಕ್ರಮವಾಗಿ ನೆಲೆಸಿದ್ದಾರೆ ಎಂದು ಕೆಲವು ಭಾರತೀಯರನ್ನು ಅಮೆರಿಕ ಸರ್ಕಾರ ಕೈ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಭಾರತಕ್ಕೆ ವಾಪಸ್ ಕಳಿಸಿರುವ ಬಗ್ಗೆ ಕೇಳಿದಾಗ, "ಈ ಹಿಂದೆ ಕೂಲಿ ಕಾರ್ಮಿಕರಿಗೆ ಸರಪಳಿ ಹಾಕಿ ಕಟ್ಟುತ್ತಿದ್ದದ್ದನ್ನು ನಾವು ನೋಡಿದ್ದೇವೆ. ಅದನ್ನು ತಪ್ಪಿಸಲು ಸರ್ಕಾರ ಕಾನೂನು ತಂದು ಶಿಕ್ಷೆ ನೀಡಿದೆ. ಆದರೆ ಮುಂದುವರಿದ, ಜಾಗೃತಿ ಇರುವ ದೇಶಗಳಲ್ಲಿ ಈ ರೀತಿ ನಡೆದಿರುವುದು ಖಂಡನೀಯ" ಎಂದರು.
"ಅಕ್ರಮವಾಗಿ ಅವರ ದೇಶದಲ್ಲಿ ನೆಲೆಸಿದ್ದರೆ, ಅದಕ್ಕೆ ಯಾವ ಶಿಕ್ಷೆ ನೀಡಬೇಕೋ ನೀಡಲಿ. ಅದನ್ನು ಬಿಟ್ಟು, ಈ ರೀತಿ ಖೈದಿಗಳಿಗೆ ಹಾಕಿದಂತೆ ಸರಪಳಿ ಹಾಕಿರುವುದನ್ನು ಯಾರಿಂದಲೂ ಒಪ್ಪಲು ಸಾಧ್ಯವಿಲ್ಲ. ಇದು ಮಾನವ ಕುಲಕ್ಕೆ ಅಗೌರವ" ಎಂದು ಕಿಡಿಕಾರಿದರು.
ಇದನ್ನೂ ಓದಿ: ಪೊಕ್ಸೊ ಪ್ರಕರಣ: ಬಂಧನ ಭೀತಿಯಿಂದ ಬಿ.ಎಸ್ ಯಡಿಯೂರಪ್ಪ ಪಾರು
ಗ್ಯಾರಂಟಿ ಹೊರೆಯಲ್ಲ, ಜನರ ಶಕ್ತಿ:
ಗ್ಯಾರಂಟಿ ಹೊರೆ ಮಧ್ಯೆ ಬಜೆಟ್ ಮಂಡನೆಗೆ ಸಿದ್ಧತೆ ನಡೆಯುತ್ತಿದೆ ಎಂದು ಕೇಳಿದಾಗ, "ಗ್ಯಾರಂಟಿ ಯೋಜನೆಗಳು ಆರ್ಥಿಕ ಹೊರೆ ಎಂದು ಹೇಳಿದ್ದು ಯಾರು? ಇದು ಜನರ ಬದುಕಿಗೆ ಸರ್ಕಾರ ಕೊಟ್ಟಿರುವ ಶಕ್ತಿ. ಜನರ ಆರ್ಥಿಕ ಹೊರೆ ತಪ್ಪಿಸಲು ನಾವು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಎಲ್ಲಾ ವರ್ಗದವರಿಗೂ ಆರ್ಥಿಕ ಶಕ್ತಿ ತುಂಬಲು ಪ್ರತಿ ಕ್ಷೇತ್ರಕ್ಕೆ ₹ 250 ಕೋಟಿಯಷ್ಟು ಹಣ ನೀಡಲಾಗುತ್ತಿದೆ. ಈ ಯೋಜನೆಗಳಿಗಾಗಿ ₹ 56 ಸಾವಿರ ಕೋಟಿ ಹಣ ನೀಡಲಾಗಿದ್ದು, ಈ ಯೋಜನೆ ಜನರಿಗಾಗಿ ಮಾಡಲಾಗಿದೆ. ಜೀವ ಇದ್ದರೆ ಜೀವನ. ನಮ್ಮ ಸರ್ಕಾರ ಹಸಿದವರು, ಬಡವರ ಬಗ್ಗೆ ಆಲೋಚಿಸಿ ಈ ಕಾರ್ಯಕ್ರಮ ರೂಪಿಸಿದೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, 2-3 ದಿನಗಳಲ್ಲಿ ದಿನಾಂಕ ಪ್ರಕಟಿಸಲಾಗುವುದು. ಕೇಂದ್ರ ಸರ್ಕಾರದ ಬಜೆಟ್ ರಾಜ್ಯದ ಪಾಲಿಗೆ ಖಾಲಿ ಬುಟ್ಟಿ. ದೇವೇಗೌಡರು, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಮಂತ್ರಿಗಳು, ಸಂಸದರು ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚಕಾರ ಎತ್ತಲಿಲ್ಲ. ನಮ್ಮ ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಆದರೂ ಮಾತು ಮಾತ್ರ ದೊಡ್ಡದಾಗಿ ಆಡುತ್ತಾರೆ. ನಮ್ಮನ್ನು ಟೀಕಿಸಿದರೆ ಅವರಿಗೆ ಆನಂದ. ನಮ್ಮನ್ನು ಟೀಕಿಸಿಯಾದರೂ ಅವರು ಸಂತೋಷ ಪಡುತ್ತಾರಲ್ಲಾ ಅದೇ ನಮಗೆ ತೃಪ್ತಿ" ಎಂದು ತಿಳಿಸಿದರು.
ಬೆಂಗಳೂರಿನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದೇನೆ:
ಬೆಂಗಳೂರಿಗೆ ನೀರು ಕೊಡಿಸುವುದೇ ನನ್ನ ಕೊನೆ ಆಸೆ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ಸಚಿವನಾದ ಬಳಿಕ ಬೆಂಗಳೂರಿಗೆ ಹೆಚ್ಚುವರಿಯಾಗಿ 6 ಟಿಎಂಸಿ ನೀರನ್ನು ಮಂಜೂರು ಮಾಡಿದ್ದೇನೆ. ಆಮೂಲಕ ಬೆಂಗಳೂರಿನ ಇತಿಹಾಸದಲ್ಲಿ ಈ ಡಿ.ಕೆ. ಶಿವಕುಮಾರ್ ಹೊಸ ಅಧ್ಯಾಯ ಬರೆದಿದ್ದಾನೆ. ಬಿಜೆಪಿ ಹಾಗೂ ದಳದ ಸರ್ಕಾರಗಳು ಈ ತೀರ್ಮಾನ ಮಾಡಿರಲಿಲ್ಲ. ನಿಂತುಹೋಗಿದ್ದ 5ನೇ ಹಂತದ ಯೋಜನೆಗೆ ಮತ್ತೆ ಚಾಲನೆ ನೀಡಿ ತೊರೆಕಾಡನಹಳ್ಳಿಯಿಂದ ನೀರು ತರಲಾಗಿದೆ. 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲಾಗುತ್ತಿದೆ. ಎತ್ತಿನಹೊಳೆಯಿಂದ ನೀರನ್ನು ಆಚೆಗೆ ತಂದಿದ್ದೇನೆ. ಈ ವರ್ಷದ ಕೊನೆ ವೇಳೆಗೆ ತುಮಕೂರಿನವರೆಗೂ ಎತ್ತಿನಹೊಳೆ ನೀರನ್ನು ಹರಿಸಲಾಗುವುದು. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ. ನಾನು ಮೇಕೆದಾಟು ಪಾದಯಾತ್ರೆ ಮಾಡಿದಾಗ ಟೀಕೆ ಟಿಪ್ಪಣಿ ಮಾಡಿದರು. ಮೋದಿ ಅವರ ಕೈ ಹಿಡಿದು ಈ ಯೋಜನೆಗೆ ಸಹಿ ಹಾಕಿಸುವುದಾಗಿ ಹೇಳಿದ್ದರು, ಆದರೂ ಈವರೆಗೂ ಯಾಕೆ ಸಹಿ ಹಾಕಿಸಿಲ್ಲ? ಕೇವಲ ಪ್ರಚಾರಕ್ಕೆ ಮಾತನಾಡುವುದಲ್ಲ, ರಾಜಕೀಯ ಬದ್ಧತೆ ಇರಬೇಕು. ಅವರ ಅನುಭವ ಹಾಗೂ ಹಿರಿತನಕ್ಕೆ ನಾವು ಗೌರವಿಸುತ್ತೇವೆ. ಆ ಗೌರವವನ್ನು ಅವರು ಉಳಿಸಿಕೊಳ್ಳಬೇಕು" ಎಂದು ಹೇಳಿದರು.
ಕುಮಾರಸ್ವಾಮಿ ಭೇಟಿ ಮಾಡಲು ಅವರು ವಿತ್ತ ಸಚಿವರೇ?
ಕೇಂದ್ರದಿಂದ ಅನುದಾನ ತರಲು ರಾಜ್ಯದ ಸಚಿವರು ನಮ್ಮ ಜತೆ ಚರ್ಚೆ ಮಾಡುವುದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, "ಮಿಸ್ಟರ್ ಕುಮಾರಸ್ವಾಮಿ ನಿಮಗೆ ಜವಾಬ್ದಾರಿ ಇಲ್ಲವೇ? ಸಚಿವರು ನಿಮ್ಮ ಜತೆ ಚರ್ಚೆ ಮಾಡಬೇಕೆ? ಈ ರಾಜ್ಯಕ್ಕೆ ಜವಾಬ್ದಾರಿ ನೀಡಬೇಕು ಎಂದು ನಿಮಗೆ ಜವಾಬ್ದಾರಿ ಇಲ್ಲವೇ? ನಾವು ಪ್ರಧಾನಿ ಹಾಗೂ ಹಣಕಾಸು ಸಚಿವೆ ಹಾಗೂ ನಮಗೆ ಸಂಬಂಧಿಸಿದ ಇಲಾಖೆಯ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇವೆ. ಕುಮಾರಸ್ವಾಮಿ ಭೇಟಿ ಮಾಡಲು ಅವರು ವಿತ್ತ ಸಚಿವರಲ್ಲ. ಅವರಿಗೆ ರಾಜ್ಯದ ಬಗ್ಗೆ ಆಸಕ್ತಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ. ಅವರಿಗೆ ಅವರ ವೈಯಕ್ತಿಕ ಆಸಕ್ತಿ ಹೊರತಾಗಿ ರಾಜ್ಯದ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ರಾಜ್ಯ ಹಾಗೂ ದೇಶದ ಅಭಿವೃದ್ಧಿ ಬಗ್ಗೆ ಅವರಲ್ಲಿ ನಾನು ಆಸಕ್ತಿ ನೋಡಿಲ್ಲ" ಎಂದು ತಿರುಗೇಟು ನೀಡಿದರು.
ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ನನ್ನನ್ನು ಭೇಟಿ ಮಾಡುತ್ತಾರೆ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ನನ್ನನ್ನು ಭೇಟಿ ಮಾಡುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಕೇಳಿ" ಎಂದರು.
ನವೆಂಬರ್ ನಲ್ಲಿ ಸಿಎಂ ಬದಲಾವಣೆ ಖಚಿತ ಎಂಬ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಅಶೋಕ್ ಅವರು ಜ್ಯೋತಿಷ್ಯ ಕಲಿಯುತ್ತಿರುವ ಬಗ್ಗೆ ಕೇಳಿ ಬಹಳ ಸಂತೋಷವಾಯಿತು. ನನಗೂ ಜ್ಯೋತಿಷ್ಯ ಕೇಳುವ ಚಟ ಇದೆ. ಅವರು ಬಿಡುವಿನ ಸಮಯ ನೀಡಿದಾಗ ನಾನು ಹೋಗಿ ಶಾಸ್ತ್ರ ಕೇಳುತ್ತೇನೆ" ಎಂದರು.
ಯಾರ ಹಣೆಯಲ್ಲಿ ಏನು ಬರೆದಿದೆ ಯಾರಿಗೆ ಗೊತ್ತು:
ಡಿ.ಕೆ. ಸುರೇಶ್ ಅವರು ಬಮೂಲ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ಎಂದು ಕೇಳಿದಾಗ, "ಅವೆಲ್ಲಾ ಸುದ್ದಿ. ನಾನು ಮುಂಚೆಯಿಂದಲೂ ಹಸು ಕಟ್ಟಿದ್ದೆ, ನಮ್ಮ ತಾಯಿ ಹಾಲು ಹಾಕುತ್ತಿದ್ದರು. ಹಾಲು ಹಾಕಿದಾಕ್ಷಣ ಚುನಾವಣೆಯಲ್ಲಿ ಸ್ಪರ್ಧಿಸಬೇಕಾ? ಅದರ ಜತೆಗೆ ಹತ್ತಾರು ಎಕರೆ ರೇಷ್ಮೆ, ನೂರಾರು ಎಕರೆ ವ್ಯವಸಾಯ ಮಾಡುತ್ತಿದ್ದೇವೆ. ಕನಕಪುರದ ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು, ಇಲ್ಲಿನ ರೇಷ್ಮೆಯನ್ನು ಬಳಸಲು ನಮ್ಮ ಮಾವ ಅವರ ರೀಲಿಂಗ್ ಕಾರ್ಖಾನೆಯನ್ನು ಮಾಡಲು ಮುಂದಾಗಿದ್ದೇವೆ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಯಾರಿಗೆ ಗೊತ್ತು? ಈ ಬಗ್ಗೆ ಚರ್ಚೆ ಮಾಡಿದರೆ ಮಾಡಿಕೊಳ್ಳಲಿ, ನೆಮ್ಮದಿ ಕೆಡಿಸಿಕೊಳ್ಳಲಿ" ಎಂದು ಹೇಳಿದರು.
ಇದನ್ನೂ ಓದಿ: ಕಳಸದಲ್ಲಿ ಕಾಡುಕೋಣ ದಾಳಿಗೆ ರೈತ ಬಲಿ: ಮೃತನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ
ಸಮೀಕ್ಷೆ ಮಾಡಿ ವಿಮಾನ ನಿಲ್ದಾಣ ಜಾಗ ತೀರ್ಮಾನ
2ನೇ ಏರ್ರ್ಪೋರ್ಟ್ ಸ್ಥಳದ ಚರ್ಚೆ ಬಗ್ಗೆ ಕೇಳಿದಾಗ, "ವಿಮಾನ ನಿಲ್ದಾಣ ನಿರ್ಮಾಣದ ಜಾಗ ನಿಗದಿ ಮಾಡುವುದು ನಮ್ಮ ಕೈಯಲ್ಲಿ ಇಲ್ಲ. ನಾವು ಸಲಹೆ ನೀಡಬಹುದು, ಅಂತಿಮವಾಗಿ ವಿಮಾನಯಾನ ಪ್ರಾಧಿಕಾರ ತೀರ್ಮಾನ ಮಾಡುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಾಗ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ 2034ರವರೆಗೂ ನಾವು ಮತ್ತೊಂದು ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲು ಸಾಧ್ಯವಿಲ್ಲ. ಆದರೆ ನಾವು ಸಿದ್ಧತೆ ಮಾಡಿಕೊಳ್ಳಬಹುದು. ಈ ಸಿದ್ಧತೆಗಾಗಿ 3-4 ಜಾಗಗಳ ಪ್ರಸ್ತಾವನೆ ನೀಡಿದ್ದೇವೆ. ದಕ್ಷಿಣ, ಉತ್ತರ ಪೂರ್ವ ಭಾಗದಲ್ಲಿ ಸಲಹೆ ನೀಡಿದ್ದೇವೆ. ವಿಮಾನ ನಿಲ್ದಾಣ ತಾಂತ್ರಿಕ ವಿಚಾರವಾಗಿದ್ದು, ಸಮೀಕ್ಷೆ ಮಾಡಿ ತೀರ್ಮಾನ ಮಾಡಲಾಗುವುದು" ಎಂದು ತಿಳಿಸಿದರು.
ಸಿಬಿಐ ತನಿಖೆಗೆ ಯಾಕೆ ನೀಡಬೇಕು?
ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವ ಬಗ್ಗೆ ಹೈಕೋರ್ಟ್ ಇಂದು ತೀರ್ಪು ನೀಡಲಿರುವ ಬಗ್ಗೆ ಕೇಳಿದಾಗ, "ಯಾವ ಕಾರಣಕ್ಕೆ ಸಿಬಿಐ ತನಿಖೆಗೆ ನೀಡಬೇಕು? ಲೋಕಾಯುಕ್ತ ತನಿಖೆ ನಡೆಯುತ್ತಿರುವಾಗ, ಇಡಿ ಕೂಡ ತನಿಖೆ ಮಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಮೂರನೇ ಸಂಸ್ಥೆ ತನಿಖೆ ಮಾಡಲು ಯಾಕೆ ನೀಡುತ್ತಾರೆ? ಈ ರೀತಿ ನೀಡಲು ಅವಕಾಶ ಇಲ್ಲ. ಈ ಬಗ್ಗೆ ಅನೇಕ ನ್ಯಾಯಾಲಯದ ತೀರ್ಪುಗಳಿವೆ. ನನ್ನ ವಿರುದ್ಧವೂ ಇದೇ ರೀತಿ ಕೇಸ್ ದಾಖಲಿಸಿರುವುದರ ವಿರುದ್ಧ ನಾನು ಬಡಿದಾಡುತ್ತಿದ್ದೇನೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇನೆ" ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ