ಚೆನ್ನೈ-ಬೆಂಗಳೂರು ಮಿಂಚಿನ ಸಂಚಾರ: ಐಐಟಿ ಮದ್ರಾಸಿನ ಹೈಪರ್‌ಲೂಪ್ ಕನಸು!

ಒಂದು ವೇಳೆ, ಹೈಪರ್‌ಲೂಪ್ ಯೋಜನೆ ಯಶಸ್ವಿಯಾದರೆ, ಎರಡು ಪ್ರತ್ಯೇಕ ರಾಜ್ಯಗಳಲ್ಲಿರುವ, 350 ಕಿಲೋಮೀಟರ್ ಅಂತರ ಹೊಂದಿರುವ ಬೆಂಗಳೂರು ಮತ್ತು ಚೆನ್ನೈಗಳ ನಡುವೆ ಕೇವಲ 30 ನಿಮಿಷಗಳ ಅವಧಿಯಲ್ಲಿ ಕ್ರಮಿಸಬಹುದು. ಅತ್ಯಂತ ಕಡಿಮೆ ಗಾಳಿಯ ಒತ್ತಡ ಹೊಂದಿರುವ, ಪ್ರತಿ ಗಂಟೆಗೆ 1,000ದಿಂದ 1,800 ಕಿಲೋಮೀಟರ್ ವೇಗದಲ್ಲಿ ಚಲಿಸುವ ಒಂದು ಪಾಡ್‌ನಲ್ಲಿ (ಸಣ್ಣದಾದ ಪ್ರಯಾಣಿಕರು ಸಾಗುವ ವಿಭಾಗ) ಪ್ರಯಾಣಿಸುವ ಮೂಲಕ ಇದನ್ನು ಸಾಧ್ಯವಾಗಿಸಬಹುದು ಎಂದು ಐಐಟಿ ಮದ್ರಾಸಿನ 'ಆವಿಷ್ಕಾರ್ ಹೈಪರ್‌ಲೂಪ್' ತಂಡ ವಿವರಿಸಿದೆ.

Written by - Girish Linganna | Last Updated : Dec 14, 2024, 07:35 PM IST
    • ಹೈಪರ್‌ಲೂಪ್ ರೈಲು ಎಂದರೇನು?
    • ಹೈಪರ್‌ಲೂಪ್ ಕಾರ್ಯಾಚರಿಸುವ ತತ್ವ
    • ಪೂರ್ಣಗೊಂಡ ಭಾರತದ ಮೊದಲ ಹೈಪರ್‌ಲೂಪ್ ಪರೀಕ್ಷಾ ಪಥ
ಚೆನ್ನೈ-ಬೆಂಗಳೂರು ಮಿಂಚಿನ ಸಂಚಾರ: ಐಐಟಿ ಮದ್ರಾಸಿನ ಹೈಪರ್‌ಲೂಪ್ ಕನಸು! title=
Hyperloop project

ಚೆನ್ನೈನಿಂದ ಬೆಂಗಳೂರಿನ ನಡುವಿನ ಸುದೀರ್ಘ ಅಂತರವನ್ನು ಒಂದು ಶರವೇಗದ ರೈಲ್ವೇ ಪಾಡ್‌ನಲ್ಲಿ ಕುಳಿತು ಕೇವಲ ಮೂವತ್ತು ನಿಮಿಷಗಳ ಒಳಗಾಗಿ ಕ್ರಮಿಸುವುದನ್ನು ಊಹಿಸಿಕೊಳ್ಳಿ! ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) - ಮದ್ರಾಸಿನ 50 ಜನ ಆಸಕ್ತ ವಿದ್ಯಾರ್ಥಿಗಳ ತಂಡ 2023ರ ಸೆಪ್ಟೆಂಬರ್‌ನಿಂದ ಹೈಪರ್‌ಲೂಪ್ ರೈಲಿನ ಮಾದರಿಯ ಮೇಲೆ ಕಾರ್ಯಾಚರಿಸಲು ಆರಂಭಿಸಿದ್ದು, ಒಂದು ದಶಕದ ಅವಧಿಯಲ್ಲಿ ಹೈಪರ್‌ಲೂಪಿನ ಕನಸನ್ನು ನನಸು ಮಾಡುವ ಯೋಜನೆ ಹೊಂದಿದ್ದಾರೆ.

ಇದನ್ನೂ ಓದಿ: ತುಳಸಿ ಗಿಡಕ್ಕೆ ಹಾಕುವ ನೀರಿಗೆ ಇದನ್ನು ಬೆರೆಸಿದರೆ ಸಾಕ್ಷಾತ್‌ ಮಹಾಲಕ್ಷ್ಮೀಯೇ ಬಲಗಾಲಿಟ್ಟು ಮನೆ ಪ್ರವೇಶಿಸದಂತೆ! ಶುಕ್ರದೆಸೆ ಬೆನ್ನೇರಿ ಸಂಪತ್ತಿನ ನಿಧಿಯೇ ತುಂಬಿಬರುವುದು

ಒಂದು ವೇಳೆ, ಹೈಪರ್‌ಲೂಪ್ ಯೋಜನೆ ಯಶಸ್ವಿಯಾದರೆ, ಎರಡು ಪ್ರತ್ಯೇಕ ರಾಜ್ಯಗಳಲ್ಲಿರುವ, 350 ಕಿಲೋಮೀಟರ್ ಅಂತರ ಹೊಂದಿರುವ ಬೆಂಗಳೂರು ಮತ್ತು ಚೆನ್ನೈಗಳ ನಡುವೆ ಕೇವಲ 30 ನಿಮಿಷಗಳ ಅವಧಿಯಲ್ಲಿ ಕ್ರಮಿಸಬಹುದು. ಅತ್ಯಂತ ಕಡಿಮೆ ಗಾಳಿಯ ಒತ್ತಡ ಹೊಂದಿರುವ, ಪ್ರತಿ ಗಂಟೆಗೆ 1,000ದಿಂದ 1,800 ಕಿಲೋಮೀಟರ್ ವೇಗದಲ್ಲಿ ಚಲಿಸುವ ಒಂದು ಪಾಡ್‌ನಲ್ಲಿ (ಸಣ್ಣದಾದ ಪ್ರಯಾಣಿಕರು ಸಾಗುವ ವಿಭಾಗ) ಪ್ರಯಾಣಿಸುವ ಮೂಲಕ ಇದನ್ನು ಸಾಧ್ಯವಾಗಿಸಬಹುದು ಎಂದು ಐಐಟಿ ಮದ್ರಾಸಿನ 'ಆವಿಷ್ಕಾರ್ ಹೈಪರ್‌ಲೂಪ್' ತಂಡ ವಿವರಿಸಿದೆ.

ಸಾಮಾನ್ಯವಾಗಿ, ವಿಮಾನಗಳು ಪ್ರತಿ ಗಂಟೆಗೆ ಅಂದಾಜು 800-900 ಕಿಲೋಮೀಟರ್ ವೇಗದಲ್ಲಿ ಚಲಿಸಿದರೆ, ಜಪಾನಿನ ಬುಲೆಟ್ ರೈಲುಗಳು ಗಂಟೆಗೆ 400-500 ಕಿಲೋಮೀಟರ್ ವೇಗದಲ್ಲಿ ಸಾಗುತ್ತವೆ. ಆದರೆ, ಭಾರತ ವಿನ್ಯಾಸಗೊಳಿಸುತ್ತಿರುವ ಹೈಪರ್‌ಲೂಪ್ ವಿಮಾನಗಳು ಚಲಿಸುವ ದುಪ್ಪಟ್ಟು ವೇಗದಲ್ಲಿ ಸಾಗಲಿವೆ. ಇದನ್ನು ಸಾಧಿಸುವ ಸಲುವಾಗಿ, ಇಷ್ಟೊಂದು ಅಪಾರ ಪ್ರಮಾಣದ ವೇಗದಲ್ಲಿ ಸಾಗುವಾಗ ಉಂಟಾಗುವ ಬಲವನ್ನು ಎಷ್ಟರಮಟ್ಟಿಗೆ ಮಾನವ ದೇಹ ತಡೆದುಕೊಳ್ಳಬಹುದು ಎಂಬುದನ್ನು ಅಧ್ಯಯನ ಮಾಡಬೇಕಿದೆ.

"ಉದಾಹರಣೆಗೆ, ಜಿ-ಫೋರ್ಸ್ (ಗುರುತ್ವಾಕರ್ಷಣೆಯ ಪರಿಣಾಮವಾಗಿ ನಾವು ಅನುಭವಿಸುವ ವೇಗವರ್ಧನೆ) 0.7ರಿಂದ 1.1ಜಿ ನಡುವೆ ಇರುತ್ತದೆ. ಭಾರತ ತನ್ನ ಮೊದಲ ಹೈಪರ್‌ಲೂಪ್ ಮೂಲ ಮಾದರಿಯನ್ನು ಮುಂದಿನ ವರ್ಷದ ಆರಂಭದಲ್ಲಿ 400 ಮೀಟರ್ ಉದ್ದದ ಕೊಳವೆಯಲ್ಲಿ ವಸ್ತುಗಳನ್ನು ಸಾಗಿಸುವ ಮೂಲಕ ಪ್ರಯೋಗ ನಡೆಸಲಿದೆ. ಈ ಪ್ರಯೋಗ ನಮಗೆ ಹೈಪರ್‌ಲೂಪ್ ವ್ಯವಸ್ಥೆಯ ಸುರಕ್ಷತೆಯ ಮಟ್ಟವನ್ನು ಅಳೆಯಲು ನೆರವಾಗಲಿದೆ. ಒಂದು ವೇಳೆ ಈ ಪರೀಕ್ಷೆ ಯಶಸ್ವಿಯಾದರೆ, ನಾವು 10 ಕಿಲೋಮೀಟರ್ ಉದ್ದದ ಟ್ಯೂಬ್ ಅನ್ನು ನಿರ್ಮಿಸಿ, ಅದನ್ನು ಕ್ರಮೇಣ ಪ್ರಯಾಣಿಕರ ಬಳಕೆಗೆ ಅನುಕೂಲಕರವಾಗುವಂತೆ ಮೇಲ್ದರ್ಜೆಗೆ ಏರಿಸಲಾಗುತ್ತದೆ" ಎಂದು ಐಐಟಿ ಮದ್ರಾಸ್‌ನ ಮೂರನೇ ವರ್ಷದ ಬಯೋ ಇಂಜಿನಿಯರಿಂಗ್ ವಿದ್ಯಾರ್ಥಿ, ಯೋಜನಾ ತಂಡದ ನಾಯಕ ಪ್ರತೀಕ್ ಶರ್ಮ ವಿವರಿಸಿದ್ದಾರೆ.

ಜಿ-ಫೋರ್ಸ್ ಮಾನವ ದೇಹದ ಮೇಲೆ ಗುರುತ್ವಾಕರ್ಷಣೆಯ ಬಲವನ್ನು ಅಳೆಯುತ್ತದೆ. ಮಾನವರ ದೇಹ ಸಾಕಷ್ಟು ತರಬೇತಿ ಪಡೆದು, ಉತ್ತಮ ಉಪಕರಣಗಳನ್ನು ಬಳಸಿದರೆ, 9ಜಿ ತನಕದ ಬಲವನ್ನು ಕೆಲಕಾಲ ತಾಳಿಕೊಳ್ಳಬಹುದು. 4-6ಜಿ ನಂತರ, ತರಬೇತಿ ಪಡೆದಿರದ ವ್ಯಕ್ತಿಗಳು ಪ್ರಜ್ಞೆ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಹೈಪರ್‌ಲೂಪ್ ರೈಲು ಎಂದರೇನು?
ಹೈಪರ್‌ಲೂಪ್ ಎನ್ನುವುದು ಒಂದು ಹೊಸದಾದ ಸಾಗಾಣಿಕಾ ಆಲೋಚನೆಯಾಗಿದ್ದು, ಇದರಲ್ಲಿ ಜನರು ಅತ್ಯಂತ ಕಡಿಮೆ ಗಾಳಿ ಹೊಂದಿರುವ ಕೊಳವೆಗಳಲ್ಲಿ ಸಾಗುವ ಸಣ್ಣದಾದ ಪ್ರಯಾಣಿಕರ ಕ್ಯಾಬಿನ್‌ಗಳಲ್ಲಿ (ಪಾಡ್) ಪ್ರಯಾಣಿಸುತ್ತಾರೆ. ಕೊಳವೆಯ ಒಳಗೆ ಅತ್ಯಂತ ಕಡಿಮೆ ಪ್ರಮಾಣದ ಗಾಳಿ ಇರುವುದರಿಂದ, ಅಲ್ಲಿ ಗಾಳಿಯ ಪ್ರತಿರೋಧ ಅತ್ಯಂತ ಕನಿಷ್ಠ ಪ್ರಮಾಣದಲ್ಲಿದ್ದು, ಈ ಪಾಡ್ ಶರವೇಗದಲ್ಲಿ ಸಾಗಲು ಸಾಧ್ಯವಾಗುತ್ತದೆ. ರೈಲುಗಳು ಅಥವಾ ಕಾರುಗಳಿಗೆ ಹೋಲಿಸಿದರೆ, ಹೆಚ್ಚು ವೇಗವಾದ ಮತ್ತು ದಕ್ಷವಾದ ಪ್ರಯಾಣ ವಿಧಾನ ಎನ್ನಲಾಗಿದೆ.

ವಿಮಾನಗಳು, ರೈಲುಗಳು, ಮತ್ತು ಮೆಟ್ರೋಗಳಂತಹ ಸಾಂಪ್ರದಾಯಿಕ ವಾಹನಗಳು ಚಲಿಸುವಾಗ ಗಾಳಿಯ ಪ್ರತಿರೋಧವನ್ನು ಎದುರಿಸುತ್ತವೆ. ಈ ಪ್ರತಿರೋಧ ಅವುಗಳು ಹೆಚ್ಚಿನ ವೇಗದಲ್ಲಿ ಸಾಗುವುದು ಕಷ್ಟಕರವಾಗುವಂತೆ ಮಾಡುತ್ತದೆ.

ಆದರೆ ಹೈಪರ್‌ಲೂಪ್‌ನಲ್ಲಿ, ಪಾಡ್‌ಗಳು ಗಾಳಿಯನ್ನು ಬಹುತೇಕ ಖಾಲಿ ಮಾಡಲಾಗಿರುವ ಕೊಳವೆಯಲ್ಲಿ ಸಾಗುತ್ತವೆ. ಗಾಳಿಯನ್ನು ಖಾಲಿ ಮಾಡುವುದರಿಂದ, ಪ್ರತಿರೋಧ ಅತ್ಯಂತ ಕಡಿಮೆ ಇದ್ದು, ಪಾಡ್‌ಗಳು ವೇಗವಾಗಿ ಸಾಗಲು ಸಾಧ್ಯವಾಗುತ್ತದೆ.

ಸಾಂಪ್ರದಾಯಿಕ ರೈಲುಗಳಲ್ಲಿ, ರೈಲಿನ ಚಕ್ರಗಳು ಮತ್ತು ಹಳಿಗಳ ನಡುವೆ ಉಂಟಾಗುವ ಘರ್ಷಣೆಯ ಪರಿಣಾಮವಾಗಿ ರೈಲಿನ ವೇಗ ಕಡಿಮೆಯಾಗುತ್ತದೆ. ಆದರೆ ಹೈಪರ್‌ಲೂಪ್ ವ್ಯವಸ್ಥೆ ಮ್ಯಾಗ್ನೆಟಿಕ್ ಲೆವಿಟೇಶನ್ ವಿಧಾನವನ್ನು (ಅಯಸ್ಕಾಂತಗಳು ಪಾಡ್‌ಗಳನ್ನು ಎತ್ತಿ ಚಲಿಸುವ ವ್ಯವಸ್ಥೆ) ಅನುಸರಿಸುವ ಮೂಲಕ ಈ ಘರ್ಷಣೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಅಂದರೆ, ಹೈಪರ್‌ಲೂಪ್ ಪಾಡ್‌ಗಳು ಹಳಿಗಳನ್ನು ಸ್ಪರ್ಶಿಸದೆ, ಅವುಗಳ ಮೇಲ್ಭಾಗದಲ್ಲಿ ಚಲಿಸುತ್ತವೆ. ಇದರಿಂದಾಗಿ ಘರ್ಷಣೆ ಕಡಿಮೆಯಾಗಿ, ಅವುಗಳು ಅತ್ಯಂತ ವೇಗವಾಗಿ ಸಾಗುತ್ತವೆ.

ಹೈಪರ್‌ಲೂಪ್ ತಂತ್ರಜ್ಞಾನದ ಅಭಿವೃದ್ಧಿ

ವೇಗದ ಸಾಗಾಣಿಕಾ ವ್ಯವಸ್ಥೆ ಯಾವತ್ತೂ ಜನರಲ್ಲಿ ಉತ್ಸಾಹ ತುಂಬುತ್ತಿತ್ತು. 1799ರಲ್ಲಿ, ಲಂಡನ್ನಿನ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಜಾರ್ಜ್ ಮೆಧುರ್ಸ್ಟ್ ಎಂಬವರು ಕೊಳವೆಗಳ ಮೂಲಕ ಗಾಳಿಯ ಒತ್ತಡವನ್ನು ಬಳಸಿ ಜನರನ್ನು ಸಾಗಿಸುವ ಯೋಜನೆಯನ್ನು ರೂಪಿಸಿ, ಅದಕ್ಕಾಗಿ ಪೇಟೆಂಟ್ ಸಹ ಮಾಡಿಸಿದರು. ಬಳಿಕ, ನೂರು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಆಧುನಿಕ ಹೈಪರ್‌ಲೂಪ್ ಅನ್ನು ಹೋಲುವಂತೆ ಕಾರ್ಯಾಚರಿಸುವ 'ಅಟ್ಮಾಸ್ಫಿಯರಿಕ್ ರೈಲ್ವೇ' ವ್ಯವಸ್ಥೆಯನ್ನು ಹಲವು ಸ್ಥಳಗಳಲ್ಲಿ ನಿರ್ಮಿಸಲಾಯಿತು. ಆದರೆ, ಇದು ಲಂಡನ್ನಿನ ಟ್ಯೂಬ್ ರೈಲು ಆಗಿರಲಿಲ್ಲ. ಇದು ಗಾಳಿಯ ಒತ್ತಡವನ್ನು ಬಳಸಿ ಸಾಗಾಣಿಕೆ ನಡೆಸುವ ಆರಂಭಿಕ ಯೋಜನೆಯಾಗಿತ್ತು.

20ನೇ ಶತಮಾನದ ಆರಂಭದಲ್ಲಿ, ರಾಕೆಟ್ ವಿಜ್ಞಾನ ಕ್ಷೇತ್ರದ ಕೆಲಸದಿಂದ ಪ್ರಸಿದ್ಧರಾದ ರಾಬರ್ಟ್‌ ಗೊಡ್ಡಾರ್ಡ್ ಎಂಬ ಅಮೆರಿಕನ್ ವ್ಯಕ್ತಿ ನಿರ್ವಾತ ಕೊಳವೆಗಳ ಮೂಲಕ ರೈಲು ಸಾಗುವ ಪರಿಕಲ್ಪನೆಯನ್ನು ನೀಡಿದರು. ಬಳಿಕ, 1981ರಲ್ಲಿ ಗೆರಾರ್ಡ್ ಒ'ನೀಲ್ ಎಂಬವರು ತನ್ನ ಪುಸ್ತಕದಲ್ಲಿ ವಿವಿಧ ಖಂಡಗಳ ನಡುವೆ ರೈಲುಗಳು ಅತ್ಯಂತ ವೇಗವಾಗಿ ಚಲಿಸುವಂತೆ ಮಾಡಲು ಮ್ಯಾಗ್ನೆಟಿಕ್ ಪ್ರೊಪಲ್ಷನ್ (ಅಯಸ್ಕಾಂತಗಳ ನೆರವಿನಿಂದ ರೈಲುಗಳನ್ನು ಚಲಾಯಿಸುವ ವಿಧಾನ) ಕುರಿತು ಬರೆದಿದ್ದರು. ಈ ಪರಿಕಲ್ಪನೆಗಳು ಹೈಪರ್‌ಲೂಪ್ ನಂತಹ ಶರವೇಗದ ಸಾಗಾಣಿಕೆಗೆ ತಳಹದಿಯನ್ನು ನಿರ್ಮಿಸಿದ್ದವು.

2000ನೇ ದಶಕದ ಆರಂಭದಲ್ಲಿ, ಹೈಪರ್‌ಲೂಪ್ ಅನ್ನು ನಿರ್ಮಿಸಲು ಹಲವು ಪ್ರಯತ್ನಗಳನ್ನು ನಡೆಸಲಾಗಿತ್ತು. ಆದರೆ ಅವುಗಳು ಯಶಸ್ಸು ಕಂಡಿರಲಿಲ್ಲ. 2013ರಲ್ಲಿ, ಎಲಾನ್ ಮಸ್ಕ್ ಹೈಪರ್‌ಲೂಪ್ ಕುರಿತ ಪ್ರಬಂಧವೊಂದನ್ನು ಪ್ರಕಟಿಸಿದರು. ಇದರ ಪರಿಣಾಮವಾಗಿ, ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳಿಗೆ ಭವಿಷ್ಯದ ಸಾಗಾಣಿಕಾ ತಂತ್ರಜ್ಞಾನ ಎನ್ನಲಾದ ಹೈಪರ್‌ಲೂಪ್ ಕುರಿತು ಮರಳಿ ಹೊಸ ಉತ್ಸಾಹ ಮೂಡಿತು.

ಹೈಪರ್‌ಲೂಪ್ ಕಾರ್ಯಾಚರಿಸುವ ತತ್ವ

ಅತ್ಯಂತ ಹೆಚ್ಚಿನ ವೇಗದಲ್ಲಿ ಸಾಗುವ ಎಲ್ಲ ಪ್ರಯತ್ನಗಳನ್ನು ಸಾಗುವಾಗ ಎದುರಾಗುವ ಗಾಳಿಯ ಜೊತೆಗಿನ ಘರ್ಷಣೆ ಕಡಿಮೆಗೊಳಿಸುತ್ತಿತ್ತು. ಗಾಳಿಯ ಒತ್ತಡವನ್ನು ಸೀಳಿ ಸಾಗುವಾಗ, ಅಂದುಕೊಂಡ ವೇಗವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು, ಎಲಾನ್ ಮಸ್ಕ್ ಅವರು ಕೊಳವೆಗಳ ಒಳಗಿರುವ ಬಹುಪಾಲು ಗಾಳಿಯನ್ನು ಇಲೆಕ್ಟ್ರಿಕ್ ಫ್ಯಾನ್ ಮತ್ತು ಕಂಪ್ರೆಸರ್ ಬಳಸಿ ತೆಗೆಯುವ ಸಲಹೆ ನೀಡಿದರು. ಎಲಾನ್ ಮಸ್ಕ್ ಅವರು ಪಾಡ್‌ಗಳು (ಅಥವಾ ಕ್ಯಾಪ್ಸುಲ್‌ಗಳು) ನೆಲದಿಂದ ಮೇಲ್ಭಾಗದಲ್ಲಿ ಏರ್ ಹಾಕಿ ಆಟದ ಪಕ್‌ಗಳಂತೆ (ಪಕ್ ಎಂದರೆ ಏರ್ ಹಾಕಿಯಲ್ಲಿ ಬಳಸುವ ಸಣ್ಣ ತಟ್ಟೆಗಳಂತಹ ರಚನೆಗಳಾಗಿದ್ದು, ಗಾಳಿಯ ಪದರದಲ್ಲಿ ಸುಗಮವಾಗಿ ಚಲಿಸುತ್ತವೆ) ಸಾಗಬೇಕು ಎಂದು ವಿವರಿಸಿದರು. ಈ ರೀತಿ ಮಾಡುವುದರಿಂದ, ಹೆಚ್ಚಿನ ವೇಗವನ್ನು ಸಾಧಿಸಲು ಬಹುದೊಡ್ಡ ಅಡಚಣೆಗಳಾದ ಗಾಳಿಯ ಪ್ರತಿರೋಧ ಮತ್ತು ಘರ್ಷಣೆ ಎರಡನ್ನೂ ಬಹುಮಟ್ಟಿಗೆ ನಿವಾರಿಸಲಾಗುತ್ತದೆ.

ಹೈಪರ್‌ಲೂಪ್ ಕಂಪನಿಗಳು ಏರ್ ಹಾಕಿಯ ಗಾಳಿಯ ಪದರಗಳನ್ನು ಬಳಸುವ ಬದಲು, ಮ್ಯಾಗ್ನೆಟಿಕ್ ಲೆವಿಟೇಶನ್ (ಅಯಸ್ಕಾಂತಗಳು ಪಾಡ್‌ಗಳನ್ನು ಎತ್ತಿ, ಚಲಾಯಿಸುವ ವಿಧಾನ) ವಿಧಾನವನ್ನು ಬಳಸುತ್ತಿವೆ. ಈ ಪಾಡ್‌ಗಳು ವಿಶೇಷವಾಗಿ ವಿನ್ಯಾಸಗೊಂಡಿರುವ, ಪ್ರತಿರೋಧವನ್ನು ತಡೆಯಲು ಬಹುತೇಕ ಗಾಳಿಯನ್ನು ಖಾಲಿ ಮಾಡಲಾಗಿರುವ ಕೊಳವೆಗಳಲ್ಲಿ ಸಾಗುತ್ತವೆ. ವರ್ಜಿನ್ ಹೈಪರ್‌ಲೂಪ್ ವನ್ ಮತ್ತು ಹೈಪರ್‌ಲೂಪ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜೀಸ್‌ ನಂತಹ ಸಂಸ್ಥೆಗಳು ಇದೇ ವಿಧಾನದ ಆಧಾರದಲ್ಲಿ ತಮ್ಮ ವಿನ್ಯಾಸಗಳನ್ನು ಅಭಿವೃದ್ಧಿ ಪಡಿಸುತ್ತಿವೆ. ಇವುಗಳು ಮ್ಯಾಗ್ನೆಟಿಕ್ ಲೆವಿಟೇಶನ್ ಮತ್ತು ಕನಿಷ್ಠ ಗಾಳಿಯ ಕೊಳವೆಗಳನ್ನು ಬಳಸಿ, ವೇಗವಾದ, ಸುಗಮವಾದ ಸಂಚಾರವನ್ನು ಸಾಧಿಸಲು ಪ್ರಯತ್ನಿಸುತ್ತಿವೆ.

ಹೈಪರ್‌ಲೂಪ್ ತಂತ್ರಜ್ಞಾನ, ಪಾಡ್‌ಗಳು ಚಲಿಸುವಂತೆ ಮಾಡಲು ವಿದ್ಯುತ್ ಶಕ್ತಿಯನ್ನು ಬಳಸುತ್ತದೆ. ಈ ಪಾಡ್‌ಗಳು ಲೀನಿಯರ್ ಇಂಡಕ್ಷನ್ ಮೋಟರ್‌ಗಳೆಂದು ಕರೆಯಲಾಗುವ ಬಾಹ್ಯ ಮೋಟರ್‌ಗಳನ್ನು ಬಳಸಿ ಶಕ್ತಿ ಪಡೆಯುತ್ತವೆ. ಇವುಗಳಿಗೆ ಅವಶ್ಯಕವಾದ ವಿದ್ಯುತ್ ಶಕ್ತಿಯನ್ನು ಪೂರೈಸಲು, ಹೈಪರ್‌ಲೂಪ್ ಕೊಳವೆಗಳ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಅಳವಡಿಸುವಂತೆ ಎಲಾನ್ ಮಸ್ಕ್ ಸಲಹೆ ಮಾಡಿದ್ದಾರೆ. ಇದು ಹೈಪರ್‌ಲೂಪ್ ವ್ಯವಸ್ಥೆ ಹೆಚ್ಚು ದಕ್ಷ ಮತ್ತು ಸುಸ್ಥಿರವಾಗುವಂತೆ ಮಾಡುತ್ತದೆ.

ಮ್ಯಾಗ್ನೆಟಿಕ್ ಲೆವಿಟೇಶನ್

ಮ್ಯಾಗ್ನೆಟಿಕ್ ಲೆವಿಟೇಶನ್ ಅಥವಾ ಮ್ಯಾಗ್ಲೆವ್ ಎನ್ನುವುದು ಒಂದು ತಂತ್ರಜ್ಞಾನವಾಗಿದ್ದು, ಇಲ್ಲಿ ವಾಹನಗಳು ತಮ್ಮ ಹಳಿಯನ್ನು ಸ್ಪರ್ಶಿಸದೆ, ಅವುಗಳ ಮೇಲ್ಭಾಗದಲ್ಲಿ ತೇಲುತ್ತಾ ಸಾಗುತ್ತವೆ. ವಾಹನಗಳು ಹೊಂದಿರುವ ಶಕ್ತಿಶಾಲಿ ಅಯಸ್ಕಾಂತಗಳು ಮತ್ತು ನೆಲದಲ್ಲಿರುವ ವಿಶೇಷ ಕಾಯಿಲ್‌ಗಳ ನಡುವೆ ಸೃಷ್ಟಿಯಾಗುವ ಎಲೆಕ್ಟ್ರೋಮ್ಯಾಗ್ನೆಟಿಕ್ ಶಕ್ತಿಯ ಪರಿಣಾಮವಾಗಿ ಈ ರೀತಿಯ ಚಲನೆ ಸಾಧ್ಯವಾಗುತ್ತದೆ. ಈ ಶಕ್ತಿ ವಾಹನವನ್ನು ಮೇಲೆತ್ತಿ, ಅದನ್ನು ಮುಂದಕ್ಕೆ ಸಾಗಿಸುತ್ತದೆ. ಇದರ ಪರಿಣಾಮವಾಗಿ, ವಾಹನಗಳು ಯಾವುದೇ ಘರ್ಷಣೆ ರಹಿತವಾಗಿ, ಅತ್ಯಂತ ವೇಗವಾಗಿ ಚಲಿಸಲು ಸಾಧ್ಯವಾಗುತ್ತದೆ. ಈ ಚಲನೆ ಹಳಿಗಳ ಮೇಲೆ ಸಾಗುವ ಸಾಮಾನ್ಯ ರೈಲುಗಳ ಚಲನೆಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ.

ಪ್ರಯೋಜನಗಳು ಮತ್ತು ಸಮಸ್ಯೆಗಳು

ಹೈಪರ್‌ಲೂಪ್ ಪ್ರಯೋಜನಗಳು

ಹೈಪರ್‌ಲೂಪ್ ಸಾಕಷ್ಟು ಪ್ರಯೋಜನಗಳನ್ನು ಒದಗಿಸಿ, ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. ಇದರ ಪ್ರಮುಖ ಪ್ರಯೋಜನಗಳು ಇಂತಿವೆ:

* ಪ್ರಯಾಣ ಸಮಯದ ಉಳಿತಾಯ: ಹೈಪರ್‌ಲೂಪ್ ಅತ್ಯಂತ ವೇಗವಾದ ಸಂಚಾರವನ್ನು ಕಲ್ಪಿಸಿ, ದೂರದ ಪ್ರಯಾಣವನ್ನು ಅತ್ಯಂತ ಕ್ಷಿಪ್ರ ಪ್ರಯಾಣವಾಗಿಸುತ್ತದೆ.

* ಪರಿಸರ ಸ್ನೇಹಿ: ಹೈಪರ್‌ಲೂಪ್ ವಿಧಾನ ಇಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಬಳಸುತ್ತದೆ. ಇದಕ್ಕೆ ಅವಶ್ಯಕ ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಪಡೆಯಬಹುದು ಎಂದು ಮಸ್ಕ್ ಸಲಹೆ ನೀಡಿದ್ದಾರೆ. ಇದು ಹೈಪರ್‌ಲೂಪ್ ವಿಧಾನವನ್ನು ಪರಿಸರ ಸ್ನೇಹಿಯಾಗಿಸುತ್ತದೆ.

* ಕಡಿಮೆ ಭೂಮಿಯ ಅವಶ್ಯಕತೆ: ಹೈಪರ್‌ಲೂಪ್ ವ್ಯವಸ್ಥೆಯ ನಿರ್ವಾತ ಕೊಳವೆಗಳನ್ನು ಎತ್ತರಿಸಿದ ಸ್ತಂಭಗಳ ಮೇಲೆ ನಿರ್ಮಿಸುವುದರಿಂದ, ಇದಕ್ಕಾಗಿ ಕಡಿಮೆ ಭೂಮಿ ಸಾಕಾಗುತ್ತದೆ. ಭೂ ಖರೀದಿಯ ಖರ್ಚು ಕಡಿಮೆಯಾಗಿ, ನಿರ್ಮಾಣ ವೆಚ್ಚವೂ ಕಡಿಮೆಯಾಗುತ್ತದೆ.

* ನಗರಗಳ ದಟ್ಟಣೆ ಕಡಿಮೆ: ಹೈಪರ್‌ಲೂಪ್ ವ್ಯವಸ್ಥೆಯಿಂದಾಗಿ ವೇಗದ ಸಂಚಾರ ಸಾಧ್ಯವಾಗುವುದರಿಂದ, ಜನರಿಗೆ ತಮ್ಮ ಕಚೇರಿಗಳ ಬಳಿಯೇ ಜೀವಿಸುವ ಅನಿವಾರ್ಯತೆ ಇರುವುದಿಲ್ಲ. ಈ ವ್ಯವಸ್ಥೆ ಜನರಿಗೆ ನಗರಗಳ ದಟ್ಟಣೆಯನ್ನು ತಪ್ಪಿಸಿ, ಹೊರವಲಯಗಳಲ್ಲಿ ಜೀವಿಸಲು ಉತ್ತೇಜಿಸುತ್ತದೆ.

* ಎಲ್ಲ ಹವಾಮಾನಗಳಲ್ಲೂ ಸೇವೆ: ಹೈಪರ್‌ಲೂಪ್ ವ್ಯವಸ್ಥೆ ಮುಚ್ಚಿರುವ ಕೊಳವೆಗಳ ಮೂಲಕ ಸಂಚರಿಸುವುದರಿಂದ, ಇದು ಮಳೆ, ಗಾಳಿ, ಹಿಮ ಸೇರಿದಂತೆ ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲೂ ಸುಗಮವಾಗಿ ಕಾರ್ಯಾಚರಿಸಬಲ್ಲದು.

* ಕಡಿಮೆ ಸಂಚಾರ ವೆಚ್ಚ ಮತ್ತು ಸಮಯ: ಹೈಪರ್‌ಲೂಪ್ ವ್ಯವಸ್ಥೆ ಸರಕುಗಳನ್ನು ಬಹಳ ವೇಗವಾಗಿ, ಕಡಿಮೆ ಸಮಯದಲ್ಲಿ, ಕಡಿಮೆ ವೆಚ್ಚದಲ್ಲಿ ಸಾಗಿಸಬಲ್ಲದು. ಆದ್ದರಿಂದ, ವೈಮಾನಿಕ ಸಾಗಾಣಿಕಾ ವೆಚ್ಚವನ್ನು ಕಡಿಮೆಗೊಳಿಸಬಹುದು.

* ಅಪಾಯಕಾರಿ ಅನಿಲಗಳ ಹೊರಸೂಸುವಿಕೆ ಕಡಿತ: ಹಸಿರು ತಂತ್ರಜ್ಞಾನ ಮತ್ತು ಮರುಬಳಕೆಯ ತಂತ್ರಜ್ಞಾನಗಳನ್ನು ಬಳಸುವುದರಿಂದ, ಹೈಪರ್‌ಲೂಪ್ ತಂತ್ರಜ್ಞಾನ ಹಸಿರುಮನೆ ಅನಿಲಗಳ (ಗ್ರೀನ್ ಹೌಸ್ ಗ್ಯಾಸಸ್ - ಜಿಎಚ್ಎಸ್) ಹೊರಸೂಸುವಿಕೆಯನ್ನು ಕಡಿಮೆಗೊಳಿಸುತ್ತದೆ. ಆ ಮೂಲಕ, ಹೈಪರ್‌ಲೂಪ್ ವ್ಯವಸ್ಥೆ ಪರಿಸರ ಸ್ನೇಹಿ ವ್ಯವಸ್ಥೆಯಾಗಿದೆ.

ಹೈಪರ್‌ಲೂಪ್ ಸಮಸ್ಯೆಗಳು:

ಹೈಪರ್‌ಲೂಪ್ ವ್ಯವಸ್ಥೆ ಬಹಳಷ್ಟು ಪ್ರಯೋಜನಗಳನ್ನು ಹೊಂದಿದ್ದರೂ, ಒಂದಷ್ಟು ಪರಿಹರಿಸಬೇಕಾದ ಸಮಸ್ಯೆಗಳನ್ನೂ ಹೊಂದಿದೆ.

* ನೇರ ರಸ್ತೆಗಳ ಅವಶ್ಯಕತೆ: ಹೈಪರ್‌ಲೂಪ್ ವ್ಯವಸ್ಥೆ ಅತ್ಯಂತ ವೇಗವಾಗಿ ಸಾಗಲು ಕನಿಷ್ಟ ಪ್ರಮಾಣದ ತಿರುವುಗಳನ್ನು ಹೊಂದಿರುವ, ನೇರವಾದ ಪಥಗಳ ಅವಶ್ಯಕತೆ ಇರುತ್ತದೆ. ಇಂತಹ ನಿರ್ಮಾಣ ಕಾರ್ಯವನ್ನು ಯೋಜಿಸುವುದು ಕಷ್ಟಕರವಾಗಿದೆ.

* ಪ್ರಯಾಣಿಕರ ಸೌಕರ್ಯ: ಅತ್ಯಂತ ವೇಗದಲ್ಲಿ ಸಾಗುವುದರಿಂದ ತಲೆ ಸುತ್ತುವಿಕೆ ಕಾಣಿಸಿಕೊಳ್ಳಬಹುದು. ಇದರಿಂದ ಪ್ರಯಾಣಿಕರಿಗೆ ಕಷ್ಟವಾಗಬಹುದು. ಇದರಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು, ಹೆಚ್ಚು ಮಾನವ ಸಹಿತ ಪ್ರಯೋಗಗಳನ್ನು ನಡೆಸಿ, ಸಮಸ್ಯೆಗಳನ್ನು ಅರ್ಥೈಸಿಕೊಳ್ಳಬೇಕು.

* ಆಧುನಿಕ ತಂತ್ರಜ್ಞಾನದ ಅವಶ್ಯಕತೆ: ಅತ್ಯಂತ ಕಡಿಮೆ ಒತ್ತಡವನ್ನು (ಬಹುತೇಕ ನಿರ್ವಾತ) ಹೊಂದಿರುವ ಕೊಳವೆಗಳನ್ನು ನಿರ್ಮಿಸಲು ಅತ್ಯಂತ ಆಧುನಿಕ ಮತ್ತು ವಿಶೇಷ ತಂತ್ರಜ್ಞಾನದ ಅವಶ್ಯಕತೆ ಇದೆ.

* ಹೆಚ್ಚಿನ ನಿರ್ಮಾಣ ವೆಚ್ಚ: ಹೈಪರ್‌ಲೂಪ್ ವ್ಯವಸ್ಥೆಯ ಆರಂಭಿಕ ನಿರ್ಮಾಣ ಅತ್ಯಂತ ವೆಚ್ಚದಾಯಕವಾಗಿದ್ದು, ಇದರ ನಿರ್ಮಾಣ ಪ್ರಕ್ರಿಯೆಯನ್ನು ಕಷ್ಟಕರವಾಗಿಸಬಹುದು.

* ಕೊಳವೆ ನಿರ್ವಹಣಾ ಸವಾಲುಗಳು: ಸುದೀರ್ಘ ಕೊಳವೆಗಳನ್ನು ಸಂಪೂರ್ಣ ಸುರಕ್ಷಿತವಾಗಿ ನಿರ್ವಹಿಸುವುದು ಮತ್ತು ಸೋರಿಕೆಗಳನ್ನು ತಡೆಗಟ್ಟುವುದು ಬಹುದೊಡ್ಡ ಸವಾಲಾಗಿದೆ.

* ತುರ್ತು ದ್ವಾರಗಳು: ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸುವುದು ಮತ್ತು ಸಮಸ್ಯೆಗಳು ಎದುರಾದರೆ ಕೊಳವೆಗಳಿಂದ ಹೊರ ಹೋಗಲು ಮಾರ್ಗಗಳನ್ನು ಒದಗಿಸುವುದು ಹೇಗೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಪೂರ್ಣಗೊಂಡ ಭಾರತದ ಮೊದಲ ಹೈಪರ್‌ಲೂಪ್ ಪರೀಕ್ಷಾ ಪಥ: ಭವಿಷ್ಯದ ಸಂಚಾರದತ್ತ ಬಹುದೊಡ್ಡ ಹೆಜ್ಜೆ

ಭಾರತ ತನ್ನ ಮೊದಲ ಹೈಪರ್‌ಲೂಪ್ ಪರೀಕ್ಷಾ ಪಥವನ್ನು ಪೂರ್ಣಗೊಳಿಸಿದ್ದು, ಇದು ಭಾರತದ ಸಂಚಾರ ತಂತ್ರಜ್ಞಾನದಲ್ಲಿ ಬಹುದೊಡ್ಡ ಮೈಲಿಗಲ್ಲಾಗಿದೆ. ಈ 410 ಮೀಟರ್‌ಗಳ ಪರೀಕ್ಷಾ ಪಥ ಭಾರತೀಯ ರೈಲ್ವೇ ಮತ್ತು ಐಐಟಿ ಮದ್ರಾಸ್‌ಗಳ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಈ ನಿರ್ಮಾಣ ಪೂರ್ಣಗೊಂಡಿರುವುದನ್ನು ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಘೋಷಿಸಿದ್ದಾರೆ. ಅವರು ಈ ಸಾಧನೆಗೆ ಭಾರತೀಯ ರೈಲ್ವೇ ತಂಡ ಮತ್ತು ಐಐಟಿ ಮದ್ರಾಸ್‌ನ ಆವಿಷ್ಕಾರ್ ಹೈಪರ್‌ಲೂಪ್ ತಂಡ, ಮತ್ತು ಐಐಟಿ ಮದ್ರಾಸಿನ ಸ್ಟಾರ್ಟಪ್‌ ಆದ ಟುಟ್ರ್ ಕಾರಣ ಎಂದಿದ್ದಾರೆ.

ಇದನ್ನೂ ಓದಿ: ಈ ಐದು ಆಸನಗಳನ್ನು ಮಾಡಿದರೆ ತಕ್ಷಣ ನಿಮ್ಮ ದೇಹದಲ್ಲಿನ ಕೊಬ್ಬು ಕರಗುತ್ತದೆ...!

ಈ ಯೋಜನೆಯಲ್ಲಿ ಐಐಟಿ ಮದ್ರಾಸ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ನಡೆಸುತ್ತಿರುವ 76 ವಿದ್ಯಾರ್ಥಿಗಳು ಆವಿಷ್ಕಾರ್ ಹೈಪರ್‌ಲೂಪ್ ತಂಡದ ಭಾಗವಾಗಿದ್ದಾರೆ. ಅವರು ಐಐಟಿ ಮದ್ರಾಸ್‌ ನಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಟುಟ್ರ್ ಸ್ಟಾರ್ಟಪ್ ಜೊತೆ ಸಹಯೋಗ ಸಾಧಿಸಿ ಕಾರ್ಯ ನಿರ್ವಹಿಸಿ, ಭಾರತದ ಈ ಮಹತ್ವಾಕಾಂಕ್ಷಿ ಕನಸನ್ನು ನನಸಾಗಿಸಲು ಪ್ರಯತ್ನ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News