ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತಾಗಿ ಶಿವಸೇನಾ ಮತ್ತು ಬಿಜೆಪಿ ನಡುವಿನ ಮುಸುಕಿನ ಗುದ್ದಾಟ ತಾರಕ್ಕೇರಿದೆ.
ಈ ನಡುವೆ ಶಿವಸೇನಾ ಅಚಲ ನಿಲುವವನ್ನು ತಾಳಿದೆ.ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಿವಸೇನಾ ಪಕ್ಷದ ನೂತನ ಶಾಸಕರು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಗುರುವಾರ ಹೇಳಿದ್ದಾರೆ ಎನ್ನಲಾಗಿದೆ.
ಶಿವಸೇನಾ ಮುಖ್ಯಸ್ಥರ ನಿವಾಸ 'ಮಾತೋಶ್ರೀ'ಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಶಾಸಕರು ಉದ್ಧವ್ ಅವರಿಗೆ ಮಿತ್ರ ಪಕ್ಷ ಬಿಜೆಪಿಯೊಂದಿಗಿನ ಮಾತುಕತೆ ವೇಳೆ 50:50 ಸೂತ್ರದ ಸಿಎಂ ಬೇಡಿಕೆಯ ಬಗ್ಗೆ ಧೃಡವಾಗಿರಲು ಕೇಳಿಕೊಂಡಿದ್ದಾರೆ. ಸದ್ಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಶಿವಸೇನಾ ಪಕ್ಷದ ಬಾಗಿಲು ಮುಚ್ಚಲಾಗಿದೆ ಎಂದು ಸೇನಾ ಶಾಸಕರು ಹೇಳಿದ್ದಾರೆ
ಸುಮಾರು ಒಂದು ಗಂಟೆಗಳ ಕಾಲ ಮಾತೋಶ್ರಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಹುದ್ದೆ ಸಹಿತ 50-50 ಅಧಿಕಾರ ಹಂಚಿಕೆ ಸೂತ್ರವನ್ನು ಒಪ್ಪಿಕೊಳ್ಳದ ಹೊರತು ಶಿವಸೇನೆ ಬಿಜೆಪಿಯೊಂದಿಗೆ ಮಾತುಕತೆ ಇಲ್ಲ ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎಂದು ಶಿವಸೇನಾ ಮೂಲಗಳು ತಿಳಿಸಿವೆ.ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಾರ್ಯ ಉಭಯಪಕ್ಷಗಳ ನಡುವೆ ಒಮ್ಮತ ಮೂಡದ ಹಿನ್ನಲೆಯಲ್ಲಿ ವಿಳಂಬವಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗುವವರೆಗೂ ಪಕ್ಷದ ಎಲ್ಲ ಶಾಸಕರು ಮತ್ತು 8 ಸ್ವತಂತ್ರ ಶಾಸಕರು ಬಾಂದ್ರಾದ ರಂಗ್ ಶಾರದಾ ಹೋಟೆಲ್ನಲ್ಲಿ ಉಳಿಯುತ್ತಾರೆ ಎಂದು ಶಿವಸೇನೆ ಶಾಸಕ ಅಬ್ದುಲ್ ಸತ್ತಾರ್ ಸುದ್ದಿಗಾರರಿಗೆ ತಿಳಿಸಿದರು.