ನವ ದೆಹಲಿ: ಡಿಸೆಂಬರ್ 31ರ ನಂತರ ಎಸ್ ಬಿಐ ಸಹವರ್ತಿ ಬ್ಯಾಂಕ್ ಖಾತೆಗಳ ಚೆಕ್ ಪುಸ್ತಕಗಳು ಅಮಾನ್ಯವಾಗಲಿದೆ.
ಎಸ್ ಬಿಐ ಸಹವರ್ತಿ ಬ್ಯಾಂಕುಗಳಾದ ಭಾರತೀಯ ಜನತಾ ಮಹಿಳಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ರಾಯ್ ಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗಳ ಚೆಕ್ ಪುಸ್ತಕ ಡಿಸೆಂಬರ್ 31ರ ನಂತರ ಅಮಾನ್ಯವಾಗಲಿದೆ ಎಂದು ಆರ್ಬಿಐ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಎಸ್ ಬಿಐ ಸಹವರ್ತಿತ ಬ್ಯಾಂಕ್ ಖಾತೆದಾರರು ನೂತನ ಐಎಫ್ ಎಸ್ ಸಿ ಕೋಡ್ ಹೊಂದಿರುವ ನೂತನ ಚೆಕ್ ಪುಸ್ತಕವನ್ನು ಪಡೆಯುವಂತೆ ಬ್ಯಾಂಕ್ ತಿಳಿಸಿದೆ. ಕೆಲ ತಿಂಗಳ ಹಿಂದೆ ಈ ಬ್ಯಾಂಕ್ ಗಳು ಎಸ್ ಬಿಐನಲ್ಲಿ ವಿಲೀನಗೊಂಡ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರ ಬಳಿಕ ಚೆಕ್ ಪುಸ್ತಕಕ್ಕೆ ಮಾನ್ಯತೆ ಇಲ್ಲ ಎಂದು ತಿಳಿಸಿತ್ತು. ಆದರೆ ಗ್ರಾಹಕರ ಅನುಕೂಲಕ್ಕಾಗಿ ಈ ಅವಧಿಯನ್ನು ಡಿ.31ರ ವರೆಗೆ ವಿಸ್ತರಿಸಲಾಗಿತ್ತು.
ಹೊಸ ಚೆಕ್ ಪುಸ್ತಕ ಪಡೆಯೋದು ಹೇಗೆ?
ಗ್ರಾಹಕರು ಹೊಸ ಚೆಕ್ ಪುಸ್ತಕಗಳನ್ನು ಪಡೆಯಲು ಸಮೀಪದ ಎಸ್ ಬಿಐ ಶಾಖೆಗಳಿಗೆ ಭೇಟಿ ನೀಡಬೇಕು ಅಥವಾ ಎಟಿಎಂ, ಮೊಬೈಲ್ ಆಪ್ ಮೂಲಕ ಚೆಕ್ ಪುಸ್ತಕ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ https://www.onlinesbi.comಗೆ ಭೇಟಿ ನೀಡಬಹುದು.