Pre Diabetes control foods : ಮಧುಮೇಹ ಪೂರ್ವ ಎಂದರೆ ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಆಗ ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವ ಮೂಲಕ ಮಧುಮೇಹವಾಗಿ ಪರಿವರ್ತಿಸುವುದನ್ನು ತಡೆಯಬಹುದು. ಹಾಗಿದ್ರೆ ಆಹಾರ ಕ್ರಮದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು..? ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು..? ಬನ್ನಿ ತಿಳಿಯೋಣ..
ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಜನರು, ಯುವಕರು ಮತ್ತು ವೃದ್ಧರು ಮಧುಮೇಹದಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾಗದಿದ್ದಾಗ, ರಕ್ತದಲ್ಲಿ ಗ್ಲೂಕೋಸ್ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದು ಮಧುಮೇಹಕ್ಕೆ ಕಾರಣವಾಗುತ್ತದೆ.
ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದೆ. ವಾಸ್ತವವಾಗಿ, ಇದು ಚಯಾಪಚಯ ಕ್ರಿಯೆಯ ಕಾಯಿಲೆಯಾಗಿದೆ. ತಜ್ಞರು ಇದನ್ನು ಆಹಾರದಿಂದ ನಿಯಂತ್ರಿಸಬಹುದು ಎಂದು ಹೇಳುತ್ತಾರೆ. ವೈದ್ಯಕೀಯ ಪರಿಭಾಷೆಯಲ್ಲಿ, ಮಧುಮೇಹವು ದೀರ್ಘಕಾಲದ ಆರೋಗ್ಯ ಸ್ಥಿತಿಯಾಗಿದ್ದು, ಇದು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಕೊರತೆಯಿಂದ ಮಧುಮೇಹ ಉಂಟಾಗುತ್ತದೆ ಎನ್ನುತ್ತಾರೆ.
ಆದರೆ, ಮಧುಮೇಹ ಬರುವ ಮೊದಲು, ಒಬ್ಬ ವ್ಯಕ್ತಿಯು ಮಧುಮೇಹ ಪೂರ್ವ ಹಂತದಲ್ಲಿರುತ್ತಾನೆ. ರಕ್ತದಲ್ಲಿನ ಸಕ್ಕರೆ ಮಟ್ಟವು 100 ರಿಂದ 125 ಮಿಗ್ರಾಂ/ಡಿಎಲ್ ನಡುವೆ ಇದ್ದರೆ, ಆ ವ್ಯಕ್ತಿಯು ಮಧುಮೇಹ ಪೂರ್ವದಲ್ಲಿದ್ದಾರೆ ಎಂದರ್ಥ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ, ಮಧುಮೇಹವಾಗಿ ಬದಲಾಗುವುದನ್ನು ತಡೆಯಬಹುದು ಎಂದು ತಜ್ಞರು ಹೇಳುತ್ತಾರೆ.
ಮಧುಮೇಹ ಪೂರ್ವ ಸ್ಥಿತಿ ಪತ್ತೆಯಾದ ತಕ್ಷಣ ಕೆಲವು ಕ್ರಮಗಳನ್ನು ತೆಗೆದುಕೊಂಡರೆ ಅದನ್ನು ನಿಯಂತ್ರಿಸಬಹುದು ಅಂತ ತಜ್ಞರು ಹೇಳುತ್ತಾರೆ.. ಅನೇಕ ಬಾರಿ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಇದು ಅವರಿಗೆ ಮಧುಮೇಹ ಕಾಯಿಲೆಗೆ ಒಳಗಾಗುವಂತೆ ಮಾಡುತ್ತದೆ. ನಿಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿ ಬದಲಾವಣೆಯಿಂದ ಮಧುಮೇಹವನ್ನು ನಿಯಂತ್ರಿಸಬಹುದು.
ಮಧುಮೇಹ ಪೂರ್ವ ಸ್ಥಿತಿಯ ಬಗ್ಗೆ ತಿಳಿದ ನಂತರ, ನೀವು ನಿಮ್ಮ ಆಹಾರಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಈ ಸಮಯದಲ್ಲಿ ಹೆಚ್ಚು ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್‌ಗಳನ್ನು ಸೇವಿಸಿ. ಇದು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅಲ್ಲದೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಪ್ರತಿದಿನ ವ್ಯಾಯಾಮ ಮಾಡಿ : ಮಧುಮೇಹ ಪೂರ್ವ ಸ್ಥಿತಿಯ ಸಮಯದಲ್ಲಿ ನೀವು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ನಡಿಗೆ, ಓಟ, ಸೈಕ್ಲಿಂಗ್ ಅಥವಾ ಈಜು ಮುಂತಾದ ವ್ಯಾಯಾಮಗಳು ಇನ್ಸುಲಿನ್‌ಗೆ ನಿಮ್ಮ ದೇಹದ ಸೂಕ್ಷ್ಮತೆಯನ್ನು ಹೆಚ್ಚಿಸುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
ಒತ್ತಡವನ್ನು ಕಡಿಮೆ ಮಾಡಿ : ಇದಲ್ಲದೆ, ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ. ಇದು ನಿಮ್ಮ ದೇಹದಲ್ಲಿನ ಒತ್ತಡದ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ವೈದ್ಯಕೀಯ ಪರೀಕ್ಷೆಗಳು : ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ಇದರಿಂದ ನೀವು ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ನಿಮ್ಮ ವೈದ್ಯರನ್ನು ನಿಯಮಿತವಾಗಿ ಸಂಪರ್ಕಿಸುವುದು ಮತ್ತು ಅವರ ಸಲಹೆಯನ್ನು ಅನುಸರಿಸುವುದು ಸಹ ಮುಖ್ಯ ಎಂದು ತಜ್ಞರು ಹೇಳುತ್ತಾರೆ.