ನವದೆಹಲಿ: ಸೈದ್ಧಾಂತಿಕ ಹೊಂದಾಣಿಕೆಯಿಲ್ಲದಿದ್ದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಲ್ಲಿ ಶಿವಸೇನೆಗೆ ಬೆಂಬಲ ನೀಡುವುದಕ್ಕೆ ಕಾಂಗ್ರೆಸ್ ಸಿದ್ದತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅಂತಿಮ ಕರೆ ತೆಗೆದುಕೊಳ್ಳಲು ಅಧಿಕಾರ ನೀಡಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷವು ತನ್ನ ಅಂತಿಮ ನಿರ್ಧಾರವನ್ನು ತಿಳಿಸಿದ ನಂತರವಷ್ಟೇ ಶಿವಸೇನಾ ಜೊತೆ ಸರ್ಕಾರ ರಚಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಎನ್ಸಿಪಿಯ ಶರದ್ ಪವಾರ್ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಎಲ್ಲರ ಚಿತ್ತ ಸೋನಿಯಾ ಗಾಂಧಿ ಅವರ ಮೇಲೆ ನೆಟ್ಟಿದೆ. ಎನ್ಸಿಪಿ ಕೋರ್ ಗುಂಪಿನ ಸಭೆಯ ನಂತರ ಮಾತನಾಡಿದ ಶರದ್ ಪವಾರ್ ಅವರು ಕಾಂಗ್ರೆಸ್ [ಪಕ್ಷದ ಜೊತೆ ಚರ್ಚಿಸಿದ ಬಳಿಕವೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಸ್ಪಷ್ಟ ಪಡಿಸಿದರು. ಬಹುಮತದ ಕೊರತೆಯಿರುವ ಬಿಜೆಪಿ ಭಾನುವಾರ ಸರ್ಕಾರ ರಚಿಸುವ ನಿರ್ಧಾರದಿಂದ ಹಿಂದೆ ಸರಿದ ಹಿನ್ನಲೆಯಲ್ಲಿ ಈಗ ಶಿವಸೇನಾ ಎನ್ಸಿಪಿ ಹಾಗೂ ಕಾಂಗ್ರೆಸ್ ಸರ್ಕಾರ ರಚನೆಗೆ ಜೀವ ಬಂದಿದೆ.
ಬಿಜೆಪಿ ಸರ್ಕಾರ ರಚನೆ ಸ್ಪರ್ಧೆಯಿಂದ ನಿರ್ಗಮಿಸಿದ ನಂತರ ಕಾಂಗ್ರೆಸ್ ಪಕ್ಷದ ಸಿಡಬ್ಲ್ಯೂಸಿ ತನ್ನ ಆಯ್ಕೆಗಳನ್ನು ಚರ್ಚಿಸಲು ಸಭೆ ಸೇರಿತು. ಶಿವಸೇನೆಗೆ ಬೆಂಬಲ ನೀಡಲು ಸೋನಿಯಾ ಗಾಂಧಿ ವೈಯಕ್ತಿಕವಾಗಿ ಹಿಂಜರಿತ್ತಿದ್ದಾರೆ ಎನ್ನಲಾಗಿದೆ. ಏಕೆಂದರೆ ಇದು ಕಾಂಗ್ರೆಸ್ಗೆ ದೊಡ್ಡ ಸೈದ್ಧಾಂತಿಕ ಬದಲಾವಣೆಯನ್ನು ಸೂಚಿಸುತ್ತದೆ. ನಮ್ಮ ಮಹಾರಾಷ್ಟ್ರ ನಾಯಕರು ಏನು ಬಯಸುತ್ತಾರೆಂದು ನಾವು ಚರ್ಚಿಸುತ್ತೇವೆ" ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು. ಇದಕ್ಕಾಗಿ ಸೋನಿಯಾ ಗಾಂಧಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳು ಮತ್ತು ಸಿಡಬ್ಲ್ಯೂಸಿ ಸದಸ್ಯರೊಂದಿಗೆ ಸಂಜೆ 4 ಗಂಟೆಗೆ ಮತ್ತೊಂದು ಸಭೆ ಕರೆದಿದ್ದಾರೆ.