ಹುಲಿ ಉಗುರು ಯಾಕೆ ಧರಿಸುತ್ತಾರೆ ಗೊತ್ತಾ..? ಇಲ್ಲಿದೆ ಸಂಪೂರ್ಣ ಮಾಹಿತಿ

Tiger claw pendant case: ವನ್ಯಜೀವಿ ಸಂರಕ್ಷಣೆಗೆಂದೆ ಕಾನೂನಲ್ಲಿ ಕೆಲವು ನಿಯಮಗಳಿವೆ. ಆದರೆ ಈ ಎಲ್ಲಾ ಕಾನೂನು-ಕಟ್ಟು ಪಾಡುಗಳನ್ನು ಮೀರಿ ಜನರು ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸ, ಚರ್ಮ, ಮೂಳೆ, ಕೊಂಬು, ಉಗುರು, ಕೂದಲು ಇತ್ಯಾದಿ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

Written by - Puttaraj K Alur | Last Updated : Oct 27, 2023, 06:09 PM IST
  • ಪುರಾಣದ ಕತೆಗಳಲ್ಲಿ ರಾಜರೂ ಸಹ ಹುಲಿ ಉಗುರು ಧರಿಸುತ್ತಿದ್ದರು
  • ಸ್ವಾಮೀಜಿಗಳು ತಾವು ಕುಳಿತುಕೊಳ್ಳಲು ಹುಲಿ ಚರ್ಮವನ್ನು ಬಳಕೆ ಮಾಡುತ್ತಿದ್ದರು
  • ಹುಲಿ ಉಗುರನ್ನು ಧರಿಸುವುದರ ಹಿಂದಿನ ಉದ್ದೇಶವೇನು ಗೊತ್ತಾ..?
ಹುಲಿ ಉಗುರು ಯಾಕೆ ಧರಿಸುತ್ತಾರೆ ಗೊತ್ತಾ..? ಇಲ್ಲಿದೆ ಸಂಪೂರ್ಣ ಮಾಹಿತಿ  title=
ಹುಲಿ ಉಗುರು ಧರಿಸುವುದರ ಉದ್ದೇಶ?

ಬೆಂಗಳೂರು: ಹುಲಿ ಉಗುರು ಪ್ರಕರಣದಲ್ಲಿ ‘ಬಿಗ್‍ಬಾಸ್’ ಮನೆಯಿಂದಲೇ ವರ್ತೂರ್​​ ಸಂತೋಷ್​ ಬಂಧನವಾಗುತ್ತಿದ್ದಂತೆ ಈ ಕುರಿತು ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಸ್ವಾಮೀಜಿಗಳು, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಹುಲಿ ಉಗುರು ಧರಿಸಿರುವ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ ಈ ಹುಲಿ ಉಗುರಿನ ಬಗ್ಗೆ ಜನಕ್ಕೆ ಇಷ್ಟೊಂದು ಕ್ರೇಜ್​ ಯಾಕೆ ಎನ್ನುವ ಪ್ರಶ್ನೆ ಸಹ ಮುನ್ನೆಲೆಗೆ ಬಂದಿದೆ.

ವನ್ಯಜೀವಿ ಸಂರಕ್ಷಣೆಗೆಂದೆ ಕಾನೂನಲ್ಲಿ ಕೆಲವು ನಿಯಮಗಳಿವೆ. ಆದರೆ ಈ ಎಲ್ಲಾ ಕಾನೂನು-ಕಟ್ಟು ಪಾಡುಗಳನ್ನು ಮೀರಿ ಜನರು ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸ, ಚರ್ಮ, ಮೂಳೆ, ಕೊಂಬು, ಉಗುರು, ಕೂದಲು ಇತ್ಯಾದಿ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಾಣಿಗಳ ಅವಶೇಷಗಳಿಗೆ ಸಾವಿರಾರು ರೂ. ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಪುರಾತನ ಕಾಲದಿಂದಲೂ ಪ್ರಾಣಿಗಳ ಅವಶೇಷಗಳಿಗೆ ಯಾಕಿಷ್ಟು ಬೇಡಿಕೆ ಇದೆ? ಹಾಗಿದ್ರೆ ಹುಲಿ ಉಗುರು ಅಷ್ಟು ಪವರ್​​ಫುಲ್ ಇದೆಯಾ..? ಎನ್ನುವ ಪ್ರಶ್ನೆ ಹಲವರಿಗೆ. ಪುರಾಣದ ಕತೆಗಳಲ್ಲಿ ರಾಜರೂ ಸಹ ಹುಲಿ ಉಗುರು ಧರಿಸುತ್ತಿದ್ದರು ಎಂದು ನಾವು ಚಿತ್ರದಲ್ಲಿ ನೋಡಿದ್ದೇವೆ ಹಾಗೂ ಕಥೆಗಳಲ್ಲಿ ಕೇಳಿದ್ದೇವೆ. ಅಲ್ಲದೆ ಈ ಹಿಂದೆ ಸ್ವಾಮೀಜಿಗಳು ತಾವು ಕುಳಿತುಕೊಳ್ಳಲು ಹುಲಿ ಚರ್ಮವನ್ನು ಬಳಕೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಹುಲಿ ಉಗುರಿನ ಸಂಕಷ್ಟದಿಂದ ಪಾರಾಗ್ತಾರಾ ವರ್ತೂರು ಸಂತೋಷ್‌

ಋಷಿ ಮುನಿಗಳು ಏಕೆ ಬಳಸುತ್ತಿದ್ದರು?: ಹುಲಿ ಚರ್ಮವು ಬೆಚ್ಚಗಿರುತ್ತದೆ. ಧ್ಯಾನ ಮಾಡುವಾಗ ನಿಮ್ಮ ಬೆನ್ನುಹುರಿಯ ಉದ್ದಕ್ಕೂ ಶಾಖವನ್ನು ಹೆಚ್ಚಿಸುತ್ತದೆ. ಅಲ್ಲದೆ ಧ್ಯಾನ ಮಾಡುವಾಗ ಇತರ ಪ್ರಾಣಿಗಳನ್ನು ದೂರವಿರಿಸಲು ಇದು ಸಹಾಯ ಮಾಡುತ್ತದೆ. ಇದಕ್ಕಾಗಿ ಘೋರ ಕಾನನದಲ್ಲಿಯೂ ಋಷಿ ಮುನಿಗಳು ತಪಸ್ಸು ಮಾಡುತ್ತಿದ್ದರು ಎನ್ನಲಾಗಿದೆ. ಶಿವನೂ ಸಹ ಹುಲಿ ಚರ್ಮವನ್ನು ಧರಿಸಿದ್ದನ್ನು ನಾವು ಗಮನಿಸಬಹುದು. ರಾಜರು ಅಂದಿನ ಕಾಲದಲ್ಲಿ ಕಾಡಿನ ಪ್ರಾಣಿಗಳನ್ನು ಬೇಟೆಯಾಡಿದ ಪರಾಕ್ರಮಕ್ಕಾಗಿ ಧರಿಸುತ್ತಿದ್ದರು ಎನ್ನುವ ನಂಬಿಕೆ ಇದೆ.

ಹುಲಿ ಉಗುರನ್ನು ಧರಿಸುವುದರ ಹಿಂದಿನ ಉದ್ದೇಶ?: ವ್ಯಾಘ್ರ ಉಗುರನ್ನು ಪದಕವನ್ನಾಗಿ ಧರಿಸುವುದರಿಂದ ಹೃದಯಕ್ಕೆ ಹತ್ತಿರವಾಗಿ ಧರಿಸುವುದು ಅದೃಷ್ಟ ಮತ್ತು ರಕ್ಷಣೆಯನ್ನು ತರುತ್ತದೆ. ಹುಲಿ ಉಗುರಿನ ಲಾಕೆಟ್ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ಈ ಪ್ರಾಣಿಗಳ ಉಗುರುಗಳು ಮಾಂತ್ರಿಕ ಗುಣಗಳನ್ನು ನಕಾರಾತ್ಮಕ ಶಕ್ತಿಗಳು ಹತ್ತಿರ ಸುಳಿಯದಂತೆ ರಕ್ಷಣೆ ನೀಡುತ್ತದೆ. ಅಲ್ಲದೆ ಕಷ್ಟದ ಸಮಯದಲ್ಲಿ ಧೈರ್ಯ-ಶಕ್ತಿ ದೊರೆಯುತ್ತದೆ ಮತ್ತು ರಾಜಯೋಗ ಬರುತ್ತದೆ. ರೋಗ ಅಥವಾ ಅನಾರೋಗ್ಯದಿಂದ ದೂರವಿರಲು ಸಹಾಯ ಮಾಡುವುದರ ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಭಾವಿಸಲಾಗಿದೆ. ಆದರೆ ಈ ಕುರಿತಾಗಿ ಯಾವುದೇ ಖಚಿತ ಮಾಹಿತಿಗಳು ಲಭ್ಯವಿಲ್ಲ.

ಇದನ್ನೂ ಓದಿ: ಆಂಗ್ಲಮಯವಾದ ಬಂಡೀಪುರ: ಕನ್ನಡ ಬಳಸುವಂತೆ ಪ್ರಾಧಿಕಾರದಿಂದ ಪತ್ರ

ಹುಲಿ ಉಗುರು ಲಾಕೆಟ್‌ಗಳ ಮೇಲೆ ಯಾಕಿಷ್ಟು ಒಲವು?: ಇಂದಿನ ಕಾಲದಲ್ಲಿ ಅಪರೂಪವಾದ್ದು ಹಾಗೂ ವಿಶೇಷವಾದದ್ದು ಯಾವುದಾದರು ವಸ್ತು ನಮ್ಮ ಬಳಿಯಿದ್ದರೆ ಅದು ನಮ್ಮ ವರ್ಚಸ್ಸು ಹೆಚ್ಚಿಸುತ್ತದೆ ಎನ್ನುವುದು ಹಲವರ ವಾದ. ಹುಲಿ ಉಗುರು ಅತ್ಯಂತ ವಿಶಿಷ್ಟ ಹಾಗೂ ವಿಶೇಷವಾದ್ದರಿಂದ ಇದನ್ನು ಡಾಲರ್​​ ಮಾಡಿಕೊಂಡು ಧರಿಸುವವರಿಗೆ ವಿಶಿಷ್ಟವಾದ ಆಕರ್ಷಣೆಯನ್ನು ನೀಡುತ್ತದೆ. ಜನರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಬಹುದು. ಫ್ಯಾಷನ್​​ ಆಗಿ ಕೂಡ ಕಾಣುತ್ತದೆ.

ಈಗ ಕಾನೂನು ಬಿಗಿಯಾಗಿದೆ, ಅಷ್ಟೇ ಅಲ್ಲ ವನ್ಯಜೀವಿಗಳ ರಕ್ಷಣೆಗೆ ಜನರಲ್ಲಿ ಅರಿವನ್ನು ಸಹ ಮೂಡಿಸಲಾಗುತ್ತಿದೆ. ಆದರೆ ಇವತ್ತಿಗೂ ಹುಲಿ ಉಗುರು, ಹಲ್ಲು, ಆನೆ ಬಾಲದ ಕೂದಲು, ದಂತ ಇವುಗಳನ್ನು ಇಟ್ಟುಕೊಂಡರೆ ತಮಗೊಂದು ಅಗೋಚರ ಶಕ್ತಿ ಸಿಕ್ಕಿಬಿಡುತ್ತದೆ ಎಂದು ಜನರಲ್ಲಿ ವನ್ಯಪ್ರಾಣಿಗಳ ಬಗ್ಗೆ ವಿಚಿತ್ರ ಹಾಗೂ ಯಾವುದೇ ಆಧಾರ ಇಲ್ಲದ ನಂಬಿಕೆಯೊಂದು ಬೆಳೆದು ಹೋಗಿದೆ. ಇನ್ನು ಬದಲಾದ ಕಾಲಮಾನದಲ್ಲಿ ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿರುವ ಬಿಗಿಯಾದ ಕಾನೂನುಗಳ ಬಗ್ಗೆ ತಿಳುವಳಿಕೆ ಇರುವಂಥವರು ಯಾರೂ ಇಂಥ ಮೂರ್ಖತನದ ಕೆಲಸಕ್ಕೆ ಕೈ ಹಾಕಲ್ಲ. ಆದ್ದರಿಂದ ಉಗುರಿನ ಆಸೆಗೆ ಬಿದ್ದು, ಮೂಕ ಪ್ರಾಣಿಗಳ ಪ್ರಾಣಕ್ಕೆ ಕುತ್ತು ತರುವ ಕೆಲಸ ಮಾಡುವುದು ಅಪರಾಧವಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972: ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಅಸಲಿ ಹುಲಿ ಉಗುರುಗಳ ಆಭರಣ ಮಾಡುವುದು, ಮಾರಾಟ ಮಾಡುವುದು, ಧರಿಸುವುದು ಎಲ್ಲವೂ ಅಪರಾಧ. ಯಾವುದೇ ವನ್ಯಜೀವಿಗೆ ಸಂಬಂಧಿಸಿದ ವಸ್ತುಗಳು ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10,000 ರೂ ದಂಡ ವಿಧಿಸುವ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News