ಹುಣಸೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ವೇಳೆ ಮತದಾರ ಪ್ರಭು ಅನರ್ಹ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾನೆ. ಎಲ್ಲಾ ಕಡೆ ಆಗುತ್ತಿರುವ ಈ ಬೆಳವಣಿಗೆ 'ಹಳ್ಳಿಹಕ್ಕಿ' ಎಂದೇ ಖ್ಯಾತರಾದ ಮಾಜಿ ಸಚಿವ ಎಚ್. ವಿಶ್ವನಾಥ್ ಪ್ರತಿನಿಧಿಸುವ ಹುಣಸೂರಿನಲ್ಲಿ ಜಾಸ್ತಿ ಆಗುತ್ತಿದೆ.
ಮೊದಲಿಗೆ ಕ್ಷೇತ್ರ ವ್ಯಾಪ್ತಿಯ ಶ್ರವಣಹಳ್ಳಿಗೆ ವಿಶ್ವನಾಥ್ ಮತ ಕೇಳಲು ಓದಾಗ ಜನ ತರಾಟೆಗೆ ತೆಗೆದುಕೊಂಡಿದ್ದರು. 'ಯಾರನ್ನು ಕೇಳಿ ರಾಜೀನಾಮೆ ಕೊಟ್ಟಿರಿ? ಏಕೆ ಕೊಟ್ಟಿರಿ? ಎಂದು ಕುಟುಕಿದ್ದರು. ನಂತರ ಹೆಜ್ಜೂರಿನ ಯುವಕರು ಕೂಡ ವಿಶ್ವನಾಥ್ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂಥ ಇನ್ನೂ ಎಷ್ಟೋ ಘಟನೆಗಳು ಬೆಳಕಿಗೆ ಬಂದಿವೆ.
ಈಗ ವಿಶ್ವನಾಥ್ ಅವರ ಪರ ಮತ ಯಾಚಿಸಲು ಹೋಗಿದ್ದ ಮಾಜಿ ಸಂಸದ ವಿಜಯಶಂಕರ್ ಅವರಿಗೂ ಜನ ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದಾರೆ. 'ನೀನು ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಿದ ಮನುಷ್ಯ' ಎಂದು ಏಕವಚನದಲ್ಲೇ ಮೂದಲಿಸಿದ್ದಾರೆ. ಜನರ ಆಕ್ರೋಶ ತಣಿಸಲಾರದೆ ವಿಜಯಶಂಕರ್ ಅಲ್ಲಿಂದ ಕಾಲ್ಕೀಳಬೇಕಾದ ಪರಿಸ್ಥಿತಿ ಎದುರಾಗಿದೆ.