ಬೆಂಗಳೂರು: ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕು ನಾರಾಯಣಪುರ ಗ್ರಾಮದಲ್ಲಿ ಕೂಲಿಕಾರರಾಗಿರುವ ಪ್ರಕಾಶ್ ಎಂಬವರ ಮೂವರು ಮಕ್ಕಳಿಗೆ ಕಿವುಡುತನ ನಿವಾರಣೆ ಚಿಕಿತ್ಸೆಗೆ ಮುಖ್ಯಮಂತ್ರಿಗಳು ನೆರವಾಗಿದ್ದಾರೆ.
ಪ್ರಕಾಶ್ ಅವರು ತಮ್ಮ ಮೂವರು ಕಿವುಡ, ಮೂಕ ಮಕ್ಕಳ ಚಿಕಿತ್ಸೆಗಾಗಿ ನೆರವಿಗೆ ಜನತಾದರ್ಶನದಲ್ಲಿ ಮನವಿ ಸಲ್ಲಿಸಿದ್ದರು. ಈ ಮಕ್ಕಳ ಸಮಸ್ಯೆ ಹಾಗೂ ಅಗತ್ಯವಿರುವ ಚಿಕಿತ್ಸೆಯ ಕುರಿತು ವಿವರವಾದ ವರದಿ ಒದಗಿಸುವಂತೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮುಖ್ಯಸ್ಥರನ್ನು ಕೋರಲಾಗಿತ್ತು.
ಅದರಂತೆ ಮಕ್ಕಳ ತಜ್ಞ ಡಾ. ಸಂಜಯ್ ಅವರು ಮೂರು ಮಕ್ಕಳನ್ನು ಮಕ್ಕಳ ವೈದ್ಯರು ಹಾಗೂ ಇಎನ್‍ಟಿ ವೈದ್ಯರು ತಪಾಸಣೆ ನಡೆಸಿದ್ದು, ಕಿರಿಯ ಮಕ್ಕಳಿಬ್ಬರಿಗೆ ಕಾಕ್ಲಿಯರ್ ಇಂಪ್ಲಾಂಟ್ ಮೂಲಕ ಗುಣಪಡಿಸಲು ಅವಕಾಶವಿದೆ. ಇದಕ್ಕೂ ಮುನ್ನ ಮೈಸೂರಿನ ವಾಕ್ ಶ್ರವಣ ಸಂಸ್ಥೆಯಲ್ಲಿ ಮೂರು ತಿಂಗಳ ಕಾಲ ಹಿಯರಿಂಗ್ ಏಡ್ ಟ್ರಯಲ್ ನೀಡುವಂತೆ ಸಲಹೆ ನೀಡಿದ್ದರು.
ವೈದ್ಯರ ಸಲಹೆಯಂತೆ ಮುಖ್ಯಮಂತ್ರಿಗಳು ಪ್ರಕಾಶ್ ಅವರ ಆರು ವರ್ಷ, ನಾಲ್ಕೂವರೆ ವರ್ಷ ಹಾಗೂ ಒಂದೂವರೆ ವರ್ಷದ ಮೂವರು ಮಕ್ಕಳಿಗೆ ಮೈಸೂರಿನ ವಾಕ್ ಶ್ರವಣ ಸಂಸ್ಥೆಯಲ್ಲಿ ಉಚಿತವಾಗಿ ಹಿಯರಿಂಗ್ ಏಡ್ ಟ್ರಯಲ್ ನೀಡಲು ಕ್ರಮ ವಹಿಸಿದ್ದಾರೆ.