'ಭಿನ್ನಾಭಿಪ್ರಾಯಗಳನ್ನು ಟೂಲ್ಕಿಟ್ ಎಂದು ರಾಜಕೀಯಗೊಳಿಸುತ್ತಿರುವುದು ನಾಡಿಗೆ ಕೇಡಿನ ಲಕ್ಷಣ'

ಹಿಂದಿನ ಪಠ್ಯಪುಸ್ತಕವನ್ನೇ ಮುಂದುವರಿಸಿ ಎಂದು ಕೇಳಿಕೊಂಡರೂ ತಾವು ಅದನ್ನು ಕಾಲುಕಸ ಮಾಡಿ ಲೆಕ್ಕಿಸದಿರುವುದನ್ನು ನೋಡಿದಾಗ ಇದು ನಾಡಿಗೆ ಕೇಡಿನ ಲಕ್ಷಣಗಳು ಎಂದೆನ್ನಿಸುತ್ತದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

Written by - Zee Kannada News Desk | Last Updated : Jun 2, 2022, 09:58 PM IST
  • ಆ ಪತ್ರದಲ್ಲಿ ನಾನು ಒಪ್ಪಿಗೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿದ್ದೇನೆ.
  • ಹೀಗಿದ್ದೂ ನನ್ನ ಮನವಿಯನ್ನು ತಾವು ಪರಿಗಣಿಸದೆ, ಇತ್ತೀಚಿನ ತಮ್ಮ ಹೇಳಿಕೆಯಲ್ಲಿ “ಪರಿಷ್ಕೃತ ಮುದ್ರಣವೇ ಜಾರಿಗೆ ಬರುತ್ತದೆ” ಎಂದಿದ್ದೀರಿ.
  • ಕ್ಷಮಿಸಿ, ನಿಮ್ಮ ಈ ಧೋರಣೆ ನನಗೆ ದಬ್ಬಾಳಿಕೆ ಅನ್ನಿಸಿಬಿಟ್ಟಿತು.
 'ಭಿನ್ನಾಭಿಪ್ರಾಯಗಳನ್ನು ಟೂಲ್ಕಿಟ್ ಎಂದು ರಾಜಕೀಯಗೊಳಿಸುತ್ತಿರುವುದು ನಾಡಿಗೆ ಕೇಡಿನ ಲಕ್ಷಣ' title=
Photo Courtsey: Facebook

ಬೆಂಗಳೂರು: ಭಿನ್ನಾಭಿಪ್ರಾಯಗಳನ್ನು ಟೂಲ್ಕಿಟ್ ಎಂದು ರಾಜಕೀಯಗೊಳಿಸಿ ಪರಾರಿಯಾಗಲು ನೋಡುವುದು ಇವೆಲ್ಲ ಹಾಗೂ ನಾಡಿನ ಗಣ್ಯರು, ಮಠಾಧಿಪತಿಗಳು, ಲೇಖಕರು, ಪ್ರಜ್ಞಾವಂತರು ತಮ್ಮ ನೋವನ್ನು ವ್ಯಕ್ತಪಡಿಸಿ ಹಿಂದಿನ ಪಠ್ಯಪುಸ್ತಕವನ್ನೇ ಮುಂದುವರಿಸಿ ಎಂದು ಕೇಳಿಕೊಂಡರೂ ತಾವು ಅದನ್ನು ಕಾಲುಕಸ ಮಾಡಿ ಲೆಕ್ಕಿಸದಿರುವುದನ್ನು ನೋಡಿದಾಗ ಇದು ನಾಡಿಗೆ ಕೇಡಿನ ಲಕ್ಷಣಗಳು ಎಂದೆನ್ನಿಸುತ್ತದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅವರು 10 ನೇ ತರಗತಿಯಲ್ಲಿ ಸೇರಿಸಿರುವ ತಮ್ಮ ಪಠ್ಯವನ್ನು ಹಿಂತೆಗೆದುಕೊಳ್ಳಬೇಕು ಎಂದು ಹೇಳಿ ಸರ್ಕಾರಕ್ಕೆ ಪತ್ರ ಬರೆದಿದ್ದರು, ಆದರೆ ಸರ್ಕಾರ ಇದಕ್ಕೆ ಸ್ಪಂದಿಸದೇ ತನ್ನ ನಡೆಯನ್ನು ಸಮರ್ಥಿಸಿಕೊಂಡಿರುವ ಬೆನ್ನಲ್ಲೇ ದೇವನೂರು ಮಹದೇವ ಅವರು ಈಗ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರಿಗೆ ಮತ್ತೊಮ್ಮೆ ಪತ್ರ ಬರೆದು ಇದನ್ನು ದಯವಿಟ್ಟು ಮುಂದುವರೆಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Karnataka Textbook Revision: ಪಠ್ಯದಿಂದ ತನ್ನ ಕಥೆ ಕೈಬಿಡಿ ಎಂದು ಸರ್ಕಾರಕ್ಕೆ ದೇವನೂರು ಪತ್ರ

May be an image of text

[ದೇವನೂರ ಮಹಾದೇವ ಅವರಿಂದ ಶಿಕ್ಷಣ ಸಚಿವರಿಗೆ ಮತ್ತೊಂದು ಪತ್ರ]                                                                                                       
                                        02.06.2022

ಸನ್ಮಾನ್ಯ ಶ್ರೀ ಬಿ.ಸಿ.ನಾಗೇಶಪ್ರಾಥಮಿಕ ಮತ್ತು ಪ್ರೌಢಶಿಕ್ಷಣ  ಸಚಿವರು
# 262, 262ಎ, 2ನೇ ಮಹಡಿ,
ವಿಧಾನಸೌಧ, ಬೆಂಗಳೂರು.

ಮಾನ್ಯರೆ,
ಈ ಹಿಂದೆ, ಹತ್ತನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ನನ್ನ ಪಠ್ಯವನ್ನು ಕೈ ಬಿಡಬೇಕೆಂದು ತಮಗೆ ವಿನಂತಿಸಿ ದಿನಾಂಕ 26.05.2022ರಂದು ಪತ್ರ ಬರೆದು ಕೊರಿಯರ್ ಮುಖಾಂತರ ರವಾನಿಸಿದ್ದೆ. ಅದನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರವರಿಗೂ ಬರೆದು ಕೊರಿಯರ್ ಮಾಡಿದ್ದೆ. ಆ ಪತ್ರದಲ್ಲಿ ನಾನು ಒಪ್ಪಿಗೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿದ್ದೇನೆ. ಹೀಗಿದ್ದೂ ನನ್ನ ಮನವಿಯನ್ನು ತಾವು ಪರಿಗಣಿಸದೆ, ಇತ್ತೀಚಿನ ತಮ್ಮ ಹೇಳಿಕೆಯಲ್ಲಿ “ಪರಿಷ್ಕೃತ ಮುದ್ರಣವೇ ಜಾರಿಗೆ ಬರುತ್ತದೆ” ಎಂದಿದ್ದೀರಿ. ಕ್ಷಮಿಸಿ, ನಿಮ್ಮ ಈ ಧೋರಣೆ ನನಗೆ ದಬ್ಬಾಳಿಕೆ ಅನ್ನಿಸಿಬಿಟ್ಟಿತು.

ಮತ್ತೂ  ಹೇಳಬೇಕೆಂದರೆ, ಚತುರ್ವರ್ಣ ವಿರೋಧಿ ಬಸವಣ್ಣನವರ ಪಾಠವನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕತ್ತು ಹಿಚುಕಿರುವುದು, ಕುವೆಂಪು, ಅಂಬೇಡ್ಕರ್ ಅವರನ್ನು ಗೇಲಿ ಮಾಡುವ ಮನಸ್ಥಿತಿಯ ವ್ಯಕ್ತಿಯನ್ನೇ ಪಠ್ಯಪುಸ್ತಕ ಪರಿಷ್ಕರಣೆಗೆ ಅಧ್ಯಕ್ಷನನ್ನಾಗಿಸಿರುವುದು ಹಾಗೂ ಒಂದು ಒಕ್ಕೂಟ ಸರ್ಕಾರದಲ್ಲಿ ಆ ಒಕ್ಕೂಟದ ಅಂಗವಾಗಿರುವ ಕರ್ನಾಟಕ ರಾಜ್ಯವು ತನಗೂ ಒಂದು ಧ್ವಜವೂ ಬೇಕು ಎಂದು ದನಿ ಎತ್ತಿದ ಸಂದರ್ಭದಲ್ಲಿ ಆ ಪರಿಕಲ್ಪನೆಯನ್ನುತನ್ನ ಲಂಗೋಟಿಗೆ ಹೋಲಿಕೆ ಮಾಡಿದ ಹೀನ ಅಭಿರುಚಿಯ ವ್ಯಕ್ತಿಯನ್ನು ಮಕ್ಕಳ ಪಠ್ಯ ಪರಿಷ್ಕರಣೆ ಮಾಡಲು ಅಧ್ಯಕ್ಷನನ್ನಾಗಿಸಿರುವುದು ಮತ್ತು ಸಮರ್ಥಿಸುತ್ತಿರುವುದು, ಭಿನ್ನಾಭಿಪ್ರಾಯಗಳನ್ನು ಟೂಲ್ಕಿಟ್ ಎಂದು ರಾಜಕೀಯಗೊಳಿಸಿ ಪರಾರಿಯಾಗಲು ನೋಡುವುದು ಇವೆಲ್ಲ ಹಾಗೂ ನಾಡಿನ ಗಣ್ಯರು, ಮಠಾಧಿಪತಿಗಳು, ಲೇಖಕರು, ಪ್ರಜ್ಞಾವಂತರು ತಮ್ಮ ನೋವನ್ನು ವ್ಯಕ್ತಪಡಿಸಿ ಹಿಂದಿನ ಪಠ್ಯಪುಸ್ತಕವನ್ನೇ ಮುಂದುವರಿಸಿ ಎಂದು ಕೇಳಿಕೊಂಡರೂ ತಾವು ಅದನ್ನು ಕಾಲುಕಸ  ಮಾಡಿ ಲೆಕ್ಕಿಸದಿರುವುದನ್ನು ನೋಡಿದಾಗ ಇದು  ನಾಡಿಗೆ ಕೇಡಿನ ಲಕ್ಷಣಗಳು ಎಂದೆನ್ನಿಸುತ್ತದೆ.

 ಕೊನೆಯದಾಗಿ ತಮ್ಮಲ್ಲಿ ಒಂದು ವಿನಂತಿ- ಇದು ಮುಂದುವರಿಯಬಾರದು, ದಯವಿಟ್ಟು ಮುಂದುವರಿಯಬಾರದು.

 ವಂದನೆಗಳೊಂದಿಗೆ,  
                                                                                                                                      ತಮ್ಮ ವಿಶ್ವಾಸಿ
ದೇವನೂರ ಮಹಾದೇವ
                            
ಮನೆ ನಂ. 53, 11ನೇ ಕ್ರಾಸ್, 
ನವಿಲುರಸ್ತೆ, ಕುವೆಂಪುನಗರ,
ಮೈಸೂರು-570023

Trending News