ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಯುವ ದಸರಾ ಕಾರ್ಯಕ್ರಮಕ್ಕಾಗಿ ಶುಕ್ರವಾರ ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಓಪನ್ ಟಾಪ್ ಬಸ್ ಮೇಲೆ ಸಂಚರಿಸಿ, ವಿದ್ಯುತ್ ದೀಪಾಲಂಕೃತ ಮೈಸೂರನ್ನು ನೋಡಿ ಖುಷಿಪಟ್ಟರು.
ಸರ್ಕಾರಿ ಅತಿಥಿ ಗೃಹದಿಂದ ಯುವ ದಸರಾ ನಡೆಯುವ ಮಹಾರಾಜ ಕಾಲೇಜು ಮೈದಾನಕ್ಕೆ ಓಪನ್ ಟಾಪ್ ಬಸ್ ನಲ್ಲೇ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮಾರ್ಗ ಮಧ್ಯದಲ್ಲಿ ಇರ್ವಿನ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಕೆ.ಆರ್. ವೃತ್ತ, ಜಯಚಾಮರಾಜ ಒಡೆಯರ್ ವೃತ್ತ, ನೂರಡಿ ರಸ್ತೆ, ರಾಮಸ್ವಾಮಿ ವೃತ್ತ ಮೂಲಕ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿದರು.
ಸಯ್ಯಾಜಿರಾವ್ ರಸ್ತೆ ಸೇರಿದಂತೆ ರಸ್ತೆಯುದ್ದಕ್ಕೂ ದೀಪಾಲಂಕಾರದ ಸೊಬಗು, ಜಗಮಗಿಸುವ ಅರಮನೆಯ ಬೆಳಕು, ಫಲಪುಷ್ಪ ಪ್ರದರ್ಶನದ ಬೆಡಗು ಮುಂತಾದ ಸ್ಥಳಗಳ ಸೌಂದರ್ಯ ನೋಡಿ ಪುಳಕಿತರಾದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾದ ಸಾ.ರಾ. ಮಹೇಶ್, ಕೃಷಿ ಸಚಿವರಾದ ಶಿವಶಂಕರ್ ರೆಡ್ಡಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಂತಾದ ಗಣ್ಯರು ಸಹ ಪ್ರಯಾಣಿಸಿದರು.