ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾವು ನೀಡಿದ್ದ ಭರವಸೆಯಂತೆ ರೈತರ ಖಾತೆಗೆ ಮೊದಲ ಕಂತಿನ ಹಣ 2000 ರೂ. ವರ್ಗಾವಣೆಗೆ ಚಾಲನೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನಲ್ಲಿ ಬುಧವಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮೊದಲ ಕಂತು 2000 ರೂ.ಗಳನ್ನು ಖಜಾನೆ -2 ರ ಮೂಲಕ ಜಮಾ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಮೂರು ಕಂತುಗಳಲ್ಲಿ ತಲಾ ಎರಡು ಸಾವಿರಗಳಂತೆ ಒಟ್ಟು ಆರು ಸಾವಿರ ರೂಪಾಯಿಗಳನ್ನು ನೀಡುವ ಘೋಷಣೆ ಮಾಡಲಾಗಿತ್ತು. ಇದಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಯಡಿಯೂರಪ್ಪ ಘೋಷಿಸಿದ್ದರು.
ಇದೀಗ ಕೊಟ್ಟ ಮಾತಿನಂತೆ ರೈತರಿಗೆ ಸಿಹಿ ಸುದ್ದಿ ನೀಡಿರುವ ಸಿಎಂ ಬಿಎಸ್ವೈ, ಮೊದಲ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಒಂದು ಲಕ್ಷ ರೈತರ ಖಾತೆಗಳಿಗೆ ಇನ್ನೆರಡು ದಿನಗಳಲ್ಲಿ ಮೊದಲ ಕಂತಿನ 2000 ರೂಪಾಯಿ ಜಮಾ ಆಗಲಿದ್ದು, ಎರಡನೇ ಕಂತಿನ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿ ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ್, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಅಪರ ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ, ವಂದಿತಾ ಶರ್ಮಾ ಉಪಸ್ಥಿತರಿದ್ದರು.