ನವದೆಹಲಿ: ಭಾರತೀಯ ಸಂವಿಧಾನದ ವಿಷಯ ಬಂದಾಗಲೆಲ್ಲಾ ಸಾಮಾನ್ಯವಾಗಿ ಕೇಶವಾನಂದ ಭಾರತಿ ಪ್ರಕರಣ ಅತಿ ಹೆಚ್ಚು ಚರ್ಚೆಗೆ ಒಳಗಾಗಿದೆ.ಇಂತಹದೊಂದು ಪ್ರಕರಣಕ್ಕೆ ನಾಂದಿ ಹಾಡಿದ ಕೇರಳದ ಕೇಶವಾನಂದ ಭಾರತಿ ಸ್ವಾಮೀಜಿ ಭಾನುವಾರದಂದು ತಮ್ಮ 80 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಒಂದು ಹೆಗ್ಗುರುತಾಗಿದ್ದರೂ, ಈ ಪ್ರಕರಣದಲ್ಲಿ ಸ್ವಾಮೀಜಿಗಳು ಯಾವುದೇ ಪರಿಹಾರವನ್ನು ಕಾಣಲಿಲ್ಲ.1973 ರಲ್ಲಿ ಅವರು ಪ್ರಶ್ನಿಸಿದ್ದ ಕೇರಳ ಭೂ ಸುಧಾರಣಾ ಕಾನೂನಿನಲ್ಲಿನ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಸ್ವಾಮೀಜಿಯನ್ನು ಪ್ರತಿನಿಧಿಸಿದ ಹಿರಿಯ ವಕೀಲ ನಾನಿ ಪಾಲ್ಖಿವಾಲಾ ಅವರು ಈ ಪ್ರಕರಣದ ವ್ಯಾಪ್ತಿಯನ್ನು ವಿಸ್ತರಿಸಿದರು. ಸಂವಿಧಾನವನ್ನು ಬದಲಿಸಲು ಸಂಸತ್ತಿಗೆ ಅನಿಯಮಿತ ಅಧಿಕಾರವನ್ನು ನೀಡುವ ಇಂದಿರಾ ಗಾಂಧಿ ಸರ್ಕಾರವು ಪರಿಚಯಿಸಿದ ಸಾಂವಿಧಾನಿಕ ತಿದ್ದುಪಡಿಗಳನ್ನು ಪ್ರಶ್ನಿಸಲು ಸ್ವಾಮಿಜಿಯವರ ಈ ಪ್ರಕರಣವನ್ನು ಪಾಲ್ಖಿವಾಲಾ ಬಳಸಿಕೊಂಡರು.
ಹಿರಿಯ ವಕೀಲರಾದ ಸೋಲಿ ಸೊರಬ್ಜಿ ಮತ್ತು ಅರವಿಂದ ದತಾರ್ ಅವರು ನಾಣಿ ಪಾಲ್ಖಿವಾಲಾ ಕುರಿತ ಜೀವನ ಚರಿತ್ರೆ 'ಕೋರ್ಟ್ರೂಮ್ ಜೀನಿಯಸ್' ನಲ್ಲಿ ಸ್ವಾಮಿಜಿ ಪಾಲ್ಖಿವಾಲಾ ಅವರನ್ನು ಎಂದಿಗೂ ಭೇಟಿಯಾಗಿರಲಿಲ್ಲ ಮತ್ತು ಅವರೊಂದಿಗೆ ಯಾವುದೇ ಮಾತುಕತೆ ನಡೆಸಿರಲಿಲ್ಲ ಎನ್ನುವ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ.ಆದರೆ ಸ್ವಾಮೀಜಿ ದಿನಪತ್ರಿಕೆಗಳಲ್ಲಿ ತನ್ನ ಹೆಸರನ್ನು ನೋಡಿದಾಗ ಸಾಕಷ್ಟು ಆಶ್ಚರ್ಯಚಕಿತರಾಗುತ್ತಿದ್ದರು ಮತ್ತು ಕೇರಳದಲ್ಲಿ ಕೆಲವು ಭೂ ಸುಧಾರಣೆಗಳನ್ನು ಮಾತ್ರ ಪ್ರಶ್ನಿಸುವ ಅವರ ಪ್ರಕರಣವು ಏಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಆಶ್ಚರ್ಯಪಟ್ಟಿದ್ದರು.
ಕೇವಲ ಕಾನೂನಿನ ಮಹತ್ವವನ್ನಷ್ಟೇ ಸಾರದೆ ಹಲವು ದಾಖಲೆಗಳನ್ನು ಸಹ ಕೇಶವಾನಂದ ಭಾರತಿ vs ಕೇರಳ ರಾಜ್ಯ ಪ್ರಕರಣ ಹೊಂದಿದೆ.ಈ ಪ್ರಕರಣವನ್ನು 13 ನ್ಯಾಯಾಧೀಶರ ನ್ಯಾಯಪೀಠ ವಿಚಾರಣೆ ನಡೆಸಿತು.ಇದು ಸುಪ್ರೀಂಕೋರ್ಟ್ನಲ್ಲಿ ರಚಿಸಲಾದ ಅತಿ ದೊಡ್ಡ ನ್ಯಾಯಪೀಠವಾಗಿದೆ.ಅಕ್ಟೋಬರ್ 1972 ರಿಂದ ಮಾರ್ಚ್ 1973 ರವರೆಗೆ 68 ಕೆಲಸದ ದಿನಗಳಲ್ಲಿ ಇದರ ವಿಚಾರಣೆಯನ್ನು ನಡೆಸಲಾಯಿತು.ಈ ಪ್ರಕರಣದ ಅಂತಿಮ ತೀರ್ಪು ಒಟ್ಟು 703 ಪುಟಗಳನ್ನು ಹೊಂದಿದೆ ಎನ್ನುವುದು ಇದರ ಮಹತ್ವವನ್ನು ಸಾರುತ್ತದೆ.
ಸಂವಿಧಾನದ ಮೂಲಭೂತ ರಚನೆ ಸಿದ್ಧಾಂತ (Basic Structure doctrine) ಪರಿಚಯಿಸಿದ ಪ್ರಕರಣ:
ಕೇಶವಾನಂದ ಭಾರತಿ ತೀರ್ಪು ಮೂಲಭೂತ ರಚನೆ ಸಿದ್ಧಾಂತ(Basic Structure doctrine)ವನ್ನು ಪರಿಚಯಿಸಿತು, ಇದು ಸಂವಿಧಾನದಲ್ಲಿ ಜಾತ್ಯತೀತತೆ ಮತ್ತು ಒಕ್ಕೂಟ ವ್ಯವಸ್ಥೆಯ ಪ್ರಮುಖ ಮೌಲ್ಯಗಳ ಮೇಲೆ ಪರಿಣಾಮ ಬೀರುವಂತಹ ತೀವ್ರವಾದ ತಿದ್ದುಪಡಿಗಳನ್ನು ಮಾಡುವ ಸಂಸತ್ತಿನ ಅಧಿಕಾರವನ್ನು ಸೀಮಿತಗೊಳಿಸಿತು.ಈ ತೀರ್ಪು ಸಂಸತ್ತಿನ ಕಾನೂನುಗಳನ್ನು ನ್ಯಾಯಾಂಗವಾಗಿ ಪರಿಶೀಲಿಸುವ ಸುಪ್ರೀಂ ಕೋರ್ಟ್ನ ಅಧಿಕಾರವನ್ನು ಎತ್ತಿಹಿಡಿದಿದೆ.ಇದು ಆಡಳಿತದ ಮೂರು ಶಾಖೆಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಅಧಿಕಾರವನ್ನು ಬೇರ್ಪಡಿಸುವ ಪರಿಕಲ್ಪನೆಗೆ ನಾಂದಿ ಹಾಡಿತು.
13 ನ್ಯಾಯಾಧೀಶರ ನ್ಯಾಯಪೀಠದ ವಿಚಾರಣೆಯಲ್ಲಿ 7: 6 ಅನುಪಾತದ ಮೂಲಕ ಈ ಪ್ರಕರಣ ಗೆದ್ದಿತು, ಆ ಮೂಲಕ ಪ್ರಜಾಪ್ರಭುತ್ವಕ್ಕೆ ಒಂದು ಹೊಸ ಮೈಲುಗಲ್ಲಾಗಿ ಈ ಪ್ರಕರಣ ಉಳಿಯಿತು.ವಿಶೇಷವೆಂದರೆ 13 ನೇ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರು ಸಂವಿಧಾನದ ತಿದ್ದುಪಡಿಗಳು ಸಂವಿಧಾನದ ಮೂಲ ರಚನೆಯನ್ನು ಬದಲಿಸುವಂತಾಗಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಈ ತೀರ್ಪಿನ ನಂತರ ಸುಪ್ರೀಂ ಕೋರ್ಟ್ನ ಮೂವರು ನ್ಯಾಯಾಧೀಶರಾದ ಜೆ.ಎಂ.ಶೆಲಾತ್, ಎ.ಎನ್. ಗ್ರೋವರ್ ಮತ್ತು ಕೆ.ಎಸ್. ಹೆಗ್ಡೆ ಮೂವರೂ ನ್ಯಾಯಪೀಠದ ಬಹುಮತದ ತೀರ್ಪಿನ ಭಾಗವಾಗಿದ್ದರು. ಸಾರ್ವಜನಿಕರ ಕೋಲಾಹಲದ ನಡುವೆ ಪ್ರತಿಭಟನೆಯಲ್ಲಿ ಅವರು ರಾಜೀನಾಮೆ ನೀಡಿದರು.
ಏಪ್ರಿಲ್ 24, 1973 ರಂದು ತೀರ್ಪು ನೀಡಿದ ಕೆಲವೇ ದಿನಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಕೇಶವಾನಂದ ಭಾರತಿ ತೀರ್ಪು ಸಮಯೋಚಿತವೆಂದು ಸಾಬೀತಾಯಿತು ಮತ್ತು ಆ ಕರಾಳ ವರ್ಷಗಳಲ್ಲಿ ಪ್ರಜಾಪ್ರಭುತ್ವ ಮತ್ತು ವ್ಯಕ್ತಿಯ ಘನತೆಯ ಕುರಿತಾದ ಅನೇಕ ಪ್ರಯತ್ನಗಳನ್ನು ಈ ಪ್ರಕರಣದ ತೀರ್ಪು ತಡೆಯಿತು.