ನವದೆಹಲಿ: ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ತೃಪ್ತಿ ಇಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಮತ್ತು ಸಂಸದ ಅಸದುದ್ದೀನ್ ಒವೈಸಿ ಹೇಳಿದ್ದಾರೆ.
'ಸುಪ್ರೀಂ ಕೋರ್ಟ್ ನಿಜಕ್ಕೂ ಸರ್ವೋಚ್ಚ, ಆದರೆ ದೋಷ ರಹಿತವೇನಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. "ನಾನು ತೀರ್ಪಿನಿಂದ ತೃಪ್ತಿ ಹೊಂದಿಲ್ಲ. ಸುಪ್ರೀಂ ಕೋರ್ಟ್ ನಿಜಕ್ಕೂ ಸರ್ವೋಚ್ಚ ಆದರೆ ದೋಷರಹಿತವಲ್ಲ. ನಮಗೆ ಸಂವಿಧಾನದ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ನಮ್ಮ ಕಾನೂನು ಹಕ್ಕುಗಳಿಗಾಗಿ ನಾವು ಹೋರಾಡುತ್ತಿದ್ದೆವು. ನಮಗೆ ಐದು ಎಕರೆ ಜಮೀನು ದೇಣಿಗೆಯಾಗಿ ಅಗತ್ಯವಿಲ್ಲ" ಎಂದು ಓವೈಸಿ ಹೇಳಿದರು.
ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಕುರಿತು ಪ್ರತಿಕ್ರಿಯಿಸಿದ ಓವೈಸಿ, 'ನಾವು ನಮ್ಮ ಕಾನೂನುಬದ್ಧ ಹಕ್ಕಿಗಾಗಿ ಹೋರಾಡುತ್ತಿದ್ದೆವು. ನನ್ನ ಅಭಿಪ್ರಾಯದಲ್ಲಿ, ಈ ಐದು ಎಕರೆ ಭೂ ಪ್ರಸ್ತಾಪವನ್ನು ನಾವು ತಿರಸ್ಕರಿಸಬೇಕು. ನಮ್ಮನ್ನು ಉತ್ತೇಜಿತಗೋಳಿಸಬೇಡಿ' ಎಂದರು. ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಭೂಮಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರಕ್ಕೆ ನಿರ್ದೇಶನ ನೀಡಿದೆ ಮತ್ತು ಅದೇ ಸಮಯದಲ್ಲಿ ಟ್ರಸ್ಟ್ ರಚಿಸುವ ಮೂಲಕ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿ ಎಂದು ಸೂಚಿಸಿದೆ.