ಚಂಡೀಗಢ: ಅಮೃತಸರದ ನಿರಂಕಾರಿ ಪಂಥದ ಪ್ರಾರ್ಥನಾ ಮಂದಿರದ ಮೇಲೆ ಭಾನುವಾರ ನಡೆದ ಗ್ರಾನೆಡ್ ದಾಳಿ ನಡೆಸಿದವರ ಬಗ್ಗೆ ಮಾಹಿತಿ ನೀಡಿದವರಿಗೆ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.
ಭಾನುವಾರ ನಡೆದ ಗ್ರಾನೈಡ್ ದಾಳಿಗೆ ಮೂವರು ಬಲಿಯಾಗಿದ್ದು, 20 ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದರು. ಈ ಬೆನ್ನಲ್ಲೇ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ಬಹುಮಾನ ಘೋಷಣೆ ಮಾಡಿದ್ದು, ದಾಳಿಕೋರರ ಬಗ್ಗೆ ಮಾಹಿತಿ ಲಭ್ಯವಿದ್ದಲ್ಲಿ ಪೊಲೀಸ್ ಸಹಾಯವಾಣಿ 181ಗೆ ಕರೆ ಮಾಡಬಹುದು. ಅಷ್ಟೇ ಅಲ್ಲದೆ, ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದರೊಂದಿಗೆ ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ದಾಳಿ ಘಟನಾ ಸ್ಥಳಕ್ಕೆ ಭಾನುವಾರ ಸಿಬಿಐ ಪೊಲೀಸರ ತಂಡ ತೆರಳಿ ತನಿಖೆ ಆರಂಭಿಸಿದ್ದು, ಅಗತ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಜತೆಗೆ ಡಿಜಿಪಿ, ಗುಪ್ತಚರ ಇಲಾಖೆ ಡಿಜಿ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರು ಸೋಮವಾರ ತಿಳಿಸಿದ್ದಾರೆ.