ನವದೆಹಲಿ: ಕೋರ್ಟ್ ಆದೇಶದ ಬಳಿಕ ದೇಶದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಒಂದೇ ಒಂದು ಹಲ್ಲೆ ಕೂಡ ನಡೆದಿಲ್ಲ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸುಪ್ರೀಂಕೋರ್ಟಿಗೆ ತಿಳಿಸಿದ್ದಾರೆ.
ಪುಲ್ವಾಮ ದಾಳಿ ಬಳಿಕ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂಕೋರ್ಟ್ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಫೆಬ್ರವರಿ 22 ರಂದು ಕೋರ್ಟ್ ಆದೇಶದ ಬಳಿಕ ದೇಶದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಒಂದೇ ಒಂದು ಹಲ್ಲೆ ಕೂಡ ನಡೆದಿಲ್ಲ ಎಂದು ತಿಳಿಸಿದ್ದಾರೆ. ಆದಾಗ್ಯೂ, ಸುಪ್ರೀಂ ಕೋರ್ಟ್ ಈ ವಿಷಯಕ್ಕೆ ಸಂಬಂಧಿಸದಂತೆ ಉತ್ತರ ಸಲ್ಲಿಸಲು ರಾಜ್ಯಗಳಿಗೆ ಇನ್ನೂ 7 ದಿನ ಕಾಲಾವಕಾಶ ನೀಡಿದೆ.
ವಾಸ್ತವವಾಗಿ, ಕಾಶ್ಮೀರಿ ಯುವಕರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ವಿಚಾರಣೆಯಲ್ಲಿ ಕಾಶ್ಮೀರಿಗಳ ಹಲ್ಲೆ ಕುರಿತಾದ ವರದಿಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು 11 ರಾಜ್ಯಗಳು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ತಿಳಿಸಿತ್ತು. ಅದೇ ಸಮಯದಲ್ಲಿ ದೇಶಾದ್ಯಂತ ಕಾಶ್ಮೀರಿ ವಿದ್ಯಾರ್ಥಿಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳಿಗೆ ಆದೇಶ ನೀಡಿತ್ತು. ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಹರಿಯಾಣ, ಮೇಘಾಲಯ, ಛತ್ತೀಸಗಢ, ಪಶ್ಚಿಮ ಬಂಗಾಳ , ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯ (ಎನ್ಸಿಆರ್)ಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
ಎಲ್ಲಾ 11 ರಾಜ್ಯಗಳ ಡಿಜಿಪಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದ ನ್ಯಾಯಾಲಯ, ಆಯಾ ರಾಜ್ಯಗಳಲ್ಲಿರುವ ಕಾಶ್ಮೀರಿಗಳ ಭದ್ರತೆ ಆಯಾ ರಾಜ್ಯ ಸರ್ಕಾರದ್ದೇ ಆಗಿರುತ್ತದೆ. ಅವರ ಮೇಲೆ ಹಲ್ಲೆ, ಬೆದರಿಕೆ ಮತ್ತು ಸಾಮಾಜಿಕ ಬಹಿಷ್ಕಾರದಂತಹ ಕೃತ್ಯಗಳಿಂದ ಅವರನ್ನು ರಕ್ಷಿಸುವುದು ರಾಜ್ಯ ಸರ್ಕಾರಗಳ ಹೊಣೆಯಾಗಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸಾಂವಿಧಾನಿಕ ಪೀಠ ಹೇಳಿತ್ತು.