ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರಿಗೆ ವರ್ಗಾಯಿಸುವಂತೆ ಕೋರಿ ನಟಿ ರಿಯಾ ಚಕ್ರವರ್ತಿ ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಪಾಟ್ನಾದಲ್ಲಿ ಸುಶಾಂತ್ ಅವರ ತಂದೆ ಎಫ್ಐಆರ್ ದಾಖಲಿಸಿದ ನಂತರ ರಿಯಾ ಈ ಹೆಜ್ಜೆ ಇಟ್ಟಿದ್ದಾರೆ.
ಎಫ್ಐಆರ್ ನಂತರ, ಮುಂಬೈ ಪೊಲೀಸರನ್ನು ಹೊರತುಪಡಿಸಿ, ಬಿಹಾರ ಪೊಲೀಸರು ಸಹ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತನಿಖೆ ನಡೆಸಲು ನಾಲ್ಕು ಸದಸ್ಯರ ಪೊಲೀಸ್ ತಂಡ ಇಂದು ಮುಂಬೈ ತಲುಪಿದೆ.ನಟಿ ಇಂದು ಉನ್ನತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ, ಪ್ರಕರಣವನ್ನು ಎರಡು ತಂಡಗಳು ತನಿಖೆ ಮಾಡಲಾಗುವುದಿಲ್ಲ ಎಂದು ಉಲ್ಲೇಖಿಸಿ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಲು ಕೋರಿದ್ದಾರೆ.
ಈಗಾಗಲೇ ಮುಂಬಯಿಯಲ್ಲಿ ತನಿಖೆ ನಡೆಯುತ್ತಿರುವಾಗ ಮತ್ತು ಅದರ ವಿವರಗಳನ್ನು ಜನರಿಗೆ ಲಭ್ಯವಾಗುತ್ತಿರುವಾಗ, ಅದೇ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವುದು ಕಾನೂನುಬಾಹಿರ ಎಂದು ರಿಯಾ ವಕೀಲರು ಹೇಳಿದ್ದಾರೆ.
ನಟಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ದೂರು ದಾಖಲು
ಏತನ್ಮಧ್ಯೆ, ಈ ಪ್ರಕರಣದಲ್ಲಿ ಇಂದು ಇನ್ನೂ ಆರು ಜನರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಬಿಹಾರ ಪೊಲೀಸ್ ತಂಡ ಪ್ರಸ್ತುತ ಸುಶಾಂತ್ ಅವರ ಬ್ಯಾಂಕ್ ಖಾತೆಗಳ ವಹಿವಾಟಿನ ಬಗ್ಗೆ ತನಿಖೆ ನಡೆಸುತ್ತಿದೆ.
ಜೂನ್ 14 ರಂದು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸುಶಾಂತ್ ಮತ್ತು ರಿಯಾ ಸಂಬಂಧ ಹೊಂದಿದ್ದರು. ಎಫ್ಐಆರ್ನಲ್ಲಿ ಸುಶಾಂತ್ ಅವರ ತಂದೆ ರಿಯಾ ವಿರುದ್ಧ ವಿವಿಧ ಆರೋಪಗಳನ್ನು ಹೊರಿಸಿದ್ದಾರೆ. ರಿಯಾ ಮತ್ತು ಆಕೆಯ ಕುಟುಂಬವು ಸುಶಾಂತ್ನನ್ನು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ದುರುಪಯೋಗಪಡಿಸಿಕೊಂಡಿದೆ, ಅವನನ್ನು ತನ್ನ ಕುಟುಂಬದಿಂದ ದೂರವಿರಿಸಿದೆ ಇದು ಆತ್ಮಹತ್ಯೆಗೆ ಪ್ರಚೋದಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಪಾಟ್ನಾದಲ್ಲಿ ದಾಖಲಾದ ಎಫ್ಐಆರ್ ಸುಶಾಂತ್ ಸಾವಿನ ನಂತರ ದಾಖಲಾದ ಪ್ರಕರಣವಾಗಿದೆ. ಇದಕ್ಕೂ ಮುನ್ನ ಮುಂಬೈ ಪೊಲೀಸರು ಜೂನ್ 14 ರಂದು ಆಕಸ್ಮಿಕ ಸಾವಿನ ವರದಿ (ಎಡಿಆರ್) ದಾಖಲಿಸಿದ್ದರು.
ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 174 ರ ಅಡಿಯಲ್ಲಿ ಎಡಿಆರ್ ದಾಖಲಿಸಲಾಗಿದೆ. ಪಾಟ್ನಾದಲ್ಲಿ ತಂದೆ ಎಫ್ಐಆರ್ ದಾಖಲಿಸುವವರೆಗೆ ಸುಶಾಂತ್ ಅವರ ಸಾವಿಗೆ ಸಂಬಂಧಿಸಿದಂತೆ ಯಾವುದೇ ಔಪಚಾರಿಕ ದೂರು ದಾಖಲಾಗಿರಲಿಲ್ಲ.