Adondittu kaala: ವಿನಯ್ ರಾಜ್‍ಕುಮಾರ್ ಮತ್ತು ಅದಿತಿ ಪ್ರಭುದೇವ ಅಭಿನಯದ ‘ಅಂದೊಂದಿತ್ತು ಕಾಲ’ ಚಿತ್ರದ ‘ಮುಂಗಾರು ಮಳೆಯಲ್ಲಿ …’ ಎಂಬ ಹಾಡು ಕೆಲವು ದಿನಗಳ ಹಿಂದೆ ‘ಗೋಲ್ಡನ್ ಸ್ಟಾರ್’ ಗಣೇಶ್ ಮತ್ತು ‘ಮಳೆ ಹುಡುಗಿ’ ಪೂಜಾ ಗಾಂಧಿ ಬಿಡುಗಡೆ ಮಾಡಿದ್ದರು. ಎ2 ಮ್ಯೂಸಿಕ್ ಚಾನಲ್‍ನಲ್ಲಿ ಲಭ್ಯವಿರುವ ಈ ಹಾಡು 1.6 ಮಿಲಿಯನ್ ವೀಕ್ಷಣೆ ಪಡೆಯುವುದರ ಜೊತೆಗೆ ಜನರಿಂದ ಮೆಚ್ಚುಗೆ ಪಡೆದಿದೆ. ಈ ಹಾಡು ಯಶಸ್ವಿಯಾದ ಹಿನ್ನೆಲೆಯಲ್ಲಿ ಚಿತ್ರತಂಡದವರು ಇತ್ತೀಚೆಗೆ ಮಾಧ್ಯಮದವರ ಮುಂದೆ ಬಂದು ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ವಿನಯ್ ರಾಜ್‍ಕುಮಾರ್, ‘’ಮುಂಗಾರು ಮಳೆಯಲ್ಲಿ’ ಹಾಡು ಬಿಡುಗಡೆಯಾಗಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಸಂಗೀತ ನಿರ್ದೇಶಕ ವಿ. ರಾಘವೇಂದ್ರ ಎಲ್ಲಾ ಹಾಡುಗಳಿಗೆ ಬಹಳ ಚೆನ್ನಾಗಿ ಟ್ಯೂನ್ ಮಾಡಿಕೊಟ್ಟಿದ್ದಾರೆ. ಒಳ್ಳೆಯ ಹಾಡುಗಳನ್ನು ಕೊಟ್ಟ ಅವರಿಗೆ ನನ್ನ ಮೊದಲ ಧನ್ಯವಾದಗಳು. ಚಿತ್ರವು ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೊಬ್ಬ ನಿರ್ದೇಶಕನ ಜೀವನದ ಕಥೆ. ನಮ್ಮ ಚಿತ್ರದ ನಿರ್ದೇಶಕ ಕೀರ್ತಿ ಅವರು ಜೀವನದಲ್ಲಿ ಅನುಭವಿಸಿದ ಘಟನೆಗಳು, ಅವರ ಸ್ನೇಹಿತರ ಅನುಭವಗಳನ್ನು ಸೇರಿಸಿ ಒಂದೊಳ್ಳೆಯ ಕಥೆ ಹೇಳಿದ್ದಾರೆ. ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ. ನಿರ್ಮಾಪಕ ಸುರೇಶ್ ಖುಷಿಯಿಂದ ಮತ್ತು ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು. ಅದಿತಿ ಅವರ ಜೊತೆಗೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು. ಚಿತ್ರವನ್ನು ತೀರ್ಥಹಳ್ಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ’ ಎಂದರು.
‘ಅಂದೊಂದಿತ್ತು ಕಾಲ’ ಎಂಬ ಹೆಸರೇ ಬಹಳ ಆಪ್ತವಾಗಿದೆ ಎಂದ ಅದಿತಿ ಪ್ರಭುದೇವ, ‘ನಿರ್ದೇಶಕ ಕೀರ್ತಿ ಮತ್ತು ನಿರ್ಮಾಪಕ ಸುರೇಶ್ ನನಗೆ ಸುಂದರವಾದ ಪಾತ್ರವನ್ನು ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ನನಗೆ ಕಣ್ಣಲ್ಲೇ ಮಾತಾಡುವ ಪಾತ್ರವಿದೆ. ವಿನಯ್ ಅವರ ಜೊತೆಗೆ ಬಹಳ ಖುಷಿಯಿಂದ ಕೆಲಸ ಮಾಡಿದ್ದೇನೆ. ಸಂಗೀತ ನಿರ್ದೇಶಕ ರಾಘವೇಂದ್ರ ಬಹಳ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ. ಅದೇ ಕಾರಣಕ್ಕೆ ಜನ ಮೆಚ್ಚಿದ್ದಾರೆ. ಈ ಹಾಡನ್ನು ಮೆಚ್ಚಿ ಹಲವರು ರೀಲ್ಸ್ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು’ ಎಂದರು.
ನಂತರ ಮಾತನಾಡಿದ ಸಂಗೀತ ನಿರ್ದೇಶಕ ರಾಘವೇಂದ್ರ, ‘ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಜನರ ಪ್ರೀತಿ ಸಿಕ್ಕಿದೆ. ಇದಕ್ಕೆ ಸೂತ್ರಧಾರರು ನಿರ್ಮಾಪಕ ಭುವನ್ ಸುರೇಶ್. ಅವರ ಪ್ರೋತ್ಸಾಹವಿಲ್ಲದಿದ್ದರೆ, ಹಾಡು ಈ ಮಟ್ಟಿಗೆ ಯಶಸ್ವಿಯಾಗುತ್ತಿರಲಿಲ್ಲ. ಈ ಹಾಡು ಪ್ರತೀ ದಿನ ಯೂಟ್ಯೂಬ್‍ನಲ್ಲಿ ಒಂದೂವರೆ ಲಕ್ಷ ವೀಕ್ಷಣೆ ಕಾಣುತ್ತಿದೆ. ಪ್ರತಿ ದಿನ 300 ರೀಲ್‍ಗಳಾಗುತ್ತಿದೆ. ನಾವೇನೇ ಸಂಗೀತ ಸಂಯೋಜಿಸಿದರೂ, ಅದನ್ನು ತೆರೆಯ ಮೇಲೆ ಚೆನ್ನಾಗಿ ತರುವುದು ಬಹಳ ಮುಖ್ಯ. ವಿನಯ್ ಮತ್ತು ಅದಿತಿ ಅವರ ನಡುವಿನ ಕೆಮಿಸ್ಟ್ರಿ ಅದ್ಭುತವಾಗಿದ್ದು, ಅವರಿಬ್ಬರ ಅಭಿಮಾನಿಯಾಗಿದ್ದೇನೆ’ ಎಂದರು.
ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಕೀರ್ತಿ ಕೃಷ್ಣ ಮಾತನಾಡಿ, ‘ನಿರ್ಮಾಪಕರು ಕರೆದು ನನಗೆ ಈ ಅವಕಾಶ ಕೊಟ್ಟರು. ಅವರಿಗೆ ಯಾವತ್ತೂ ನಾನು ಚಿರಋಣಿ. ಈ ಹಾಡಿನ ಕಂಪೋಸಿಂಗ್ ಸ್ವಲ್ಪ ನಿಧಾನವಾಗುತ್ತಿತ್ತು. ಹಾಡಿನ ಚಿತ್ರೀಕರಣವಾಗಬೇಕಿದ್ದರಿಂದ, ಯಾವಾಗ ಕೊಡುತ್ತೀರಾ ಎಂದು ಕೇಳಿದಾಗ, ಅವರು ಕೋಪದಲ್ಲಿ ಒಂದು ಬಿಟ್ ಹಾಡಿದರು. ಅದು ಚೆನ್ನಾಗಿದೆ ಎಂದನಿಸಿ ಮುಂದುವರೆಸುವುದಕ್ಕೆ ಹೇಳಿದೆ. ಈ ಹಾಡನ್ನು ಸಿದ್ ಶ್ರೀರಾಮ್ ಅವರಿಂದ ಹಾಡಿಸಬೇಕು ಎಂಬ ಆಸೆ ಇತ್ತಾದರೂ, ಅವರ ಸಂಭಾವನೆ ದುಬಾರಿಯಾಗಿತ್ತು. ಆದರೆ, ಆ ಹಾಡನ್ನು ಸಿದ್ ಅವರೇ ಹಾಡಬೇಕು ಎಂದು ನಿರ್ಮಾಪಕರು ಹಾಡಿಸಿದರು. ಹಾಗಾಗಿ, ಈ ಹಾಡು ಯಶಸ್ವಿಯಾಗುವುದಕ್ಕೆ ನಿರ್ಮಾಪಕರೇ ಕಾರಣ’ ಎಂದರು.
‘ಅಂದೊಂದಿತ್ತು ಕಾಲ’ ಚಿತ್ರದಲ್ಲಿ ವಿನಯ್ ರಾಜ್‍ಕುಮಾರ್ ಮತ್ತು ಅದಿತಿ ಜೊತೆಗೆ ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರದ ಚಿತ್ರೀಕರಣವಾಗಿದೆ. ಈ ಚಿತ್ರವನ್ನು ಭುವನ್ ಸಿನಿಮಾಸ್ ಅಡಿ ಸುರೇಶ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್