ಬೆಂಗಳೂರಿನಲ್ಲಿ ‘ಸಮಷ್ಟಿ’ ತಂಡದಿಂದ ನಾಳೆ “ಕಂತು” ನಾಟಕ ಪ್ರದರ್ಶನ; ರಂಗದ ಮೇಲೆ ವಿವೇಕ ಶಾನಭಾಗರ ಕತೆ

Samashti presents play KANTHU: 90ರ ದಶಕದ ಕಾಲ ಘಟ್ಟದಲ್ಲಿ ನಡೆಯುವ ಈ ನಾಟಕವು ಪ್ರಕೃತಿಯ ಸಹಜ ಕ್ರಿಯೆಗಳ ಜೊತೆಗೆ ಮನುಷ್ಯರ ಬದುಕಿನ ಸಂಕೀರ್ಣತೆ ಮತ್ತು ದ್ವಂದ್ವಗಳನ್ನು, ನವಿರಾದ ಹಾಸ್ಯದೊಂದಿಗೆ ತೆರೆದಿಡುವ ಪ್ರಯತ್ನ ಮಾಡುತ್ತದೆ.

Written by - Puttaraj K Alur | Last Updated : Feb 3, 2025, 07:16 PM IST
  • ಬೆಂಗಳೂರಿನಲ್ಲಿ ‘ಸಮಷ್ಟಿ’ ತಂಡದಿಂದ “ಕಂತು” ನಾಟಕ ಪ್ರದರ್ಶನ
  • ನಾಳೆ ಸಂಜೆ ಸಂಜೆ 7.30ಕ್ಕೆ ಬೆಂಗಳೂರಿನ ರಂಗಶಂಕರದಲ್ಲಿ ನಾಟಕ ಪ್ರದರ್ಶನ
  • ರಂಗದ ಮೇಲೆ ವಿವೇಕ ಶಾನಭಾಗರ ಕತೆಯನ್ನು ನೋಡುವ ಅವಕಾಶ
ಬೆಂಗಳೂರಿನಲ್ಲಿ ‘ಸಮಷ್ಟಿ’ ತಂಡದಿಂದ ನಾಳೆ “ಕಂತು” ನಾಟಕ ಪ್ರದರ್ಶನ; ರಂಗದ ಮೇಲೆ ವಿವೇಕ ಶಾನಭಾಗರ ಕತೆ  title=
ನಾಳೆ “ಕಂತು” ನಾಟಕ ಪ್ರದರ್ಶನ

Samashti presents play KANTHU: ‘ಸಮಷ್ಟಿ’ ಕನ್ನಡ ರಂಗತಂಡವು ನಾಳೆ ಅಂದರೆ ಮಂಗಳವಾರ (ಫೆಬ್ರವರಿ 4) ಸಂಜೆ 7.30ಕ್ಕೆ ಬೆಂಗಳೂರಿನ ರಂಗಶಂಕರದಲ್ಲಿ ‘ಕಂತು’ ನಾಟಕವನ್ನು ಪ್ರದರ್ಶಿಸಲಿದೆ. ನೀನಾಸಂ ಪದವೀಧರ ಮಂಜುನಾಥ ಎಲ್. ಬಡಿಗೇರ ವಿನ್ಯಾಸ ಮತ್ತು ನಿರ್ದೇಶನದ ಈ ನಾಟಕವು ಖ್ಯಾತ ಸಾಹಿತಿ ವಿವೇಕ ಶಾನಭಾಗರ “ಕಂತು” ಕತೆಯನ್ನು ಆಧರಿಸಿದೆ.
ಕಂತು ನಾಟಕದ ಕುರಿತು

ಪ್ರಕೃತಿ ಸಹಜ ಘಟನೆಗಳಲ್ಲಿ ಗ್ರಹಣವೂ ಒಂದು. ಮಾವಿನೂರಿನಲ್ಲಿ ನಡೆಯಲಿರುವ ಗ್ರಹಣದ ಹಿನ್ನೆಲೆಯಲ್ಲಿ ನಡೆಯುವ ಘಟನೆಗಳೇ ಈ “ಕಂತು” ನಾಟಕದ ಸಾರ. ಈ ನಾಟಕವು ಕನ್ನಡದ ಖ್ಯಾತ ಕತೆಗಾರ ವಿವೇಕ ಶಾನಭಾಗರ “ಕಂತು” ಕತೆಯ ರಂಗಪ್ರಸ್ತುತಿಯಾಗಿದೆ. ದುಡ್ಡು ಸಿಗುವುದಾದರೆ ತಮ್ಮ ಕಲೆ, ಸಂಸ್ಕೃತಿ, ಆಚಾರ-ವಿಚಾರ, ಮನೆ-ಮಠಗಳನ್ನು ಮಾರಿಬಿಡಲು ಮಾವಿನೂರಿನ ಜನರು ಸಿದ್ಧರಾಗುವುದು, ಅವರ ಮನಸ್ಸಿಗೆ ಹಿಡಿದಿರುವ ಗ್ರಹಣವಾದರೆ, ಜಗನ್ನಾಥನ ಶ್ರೀಮಂತಿಕೆ ಮತ್ತು ಅಧಿಕಾರ ಊರಿನ ಬಡ ಜನರ ಜೀವನದ ಮೇಲೆ ಕವಿದ ಗ್ರಹಣವಾಗಿದೆ. ಇದರ ಜೊತೆಗೆ ಅಣೆಕಟ್ಟು ಕಟ್ಟಿ ಇಡೀ ಊರೇ ಮುಳುಗುವ ಪರಿಸ್ಥಿತಿಯು, ಊರಿಗೇ ಹಿಡಿದ ಗ್ರಹಣವಾಗಿದೆ. ಎಲ್ಲರನ್ನ ಕಂತಿಸಬಲ್ಲ ಮತ್ತು ಎಲ್ಲವನ್ನ ಕಂತಿಸಬಲ್ಲ ಈ ಪರಿಯ ಗ್ರಹಣವೇ ಈ ನಾಟಕ.

ಇದನ್ನೂ ಓದಿ: ಟಾಕೀಸ್ ನಲ್ಲಿ ಮಹಾತ್ಮ ಗಾಂಧೀಜಿ ನೋಡಿದ ಏಕೈಕ ಸಿನಿಮಾ ಯಾವುದು ಗೊತ್ತಾ..?

90ರ ದಶಕದ ಕಾಲ ಘಟ್ಟದಲ್ಲಿ ನಡೆಯುವ ಈ ನಾಟಕವು ಪ್ರಕೃತಿಯ ಸಹಜ ಕ್ರಿಯೆಗಳ ಜೊತೆಗೆ ಮನುಷ್ಯರ ಬದುಕಿನ ಸಂಕೀರ್ಣತೆ ಮತ್ತು ದ್ವಂದ್ವಗಳನ್ನು, ನವಿರಾದ ಹಾಸ್ಯದೊಂದಿಗೆ ತೆರೆದಿಡುವ ಪ್ರಯತ್ನ ಮಾಡುತ್ತದೆ. ಈ ನಾಟಕವು ರಂಗಭೂಮಿ (ರಿ) ಉಡುಪಿ ಇವರು ಆಯೋಜಿಸಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿರುತ್ತದೆ.

ನಾಟಕ ಪ್ರದರ್ಶನ ದಿನಾಂಕ: ಫೆಬ್ರವರಿ 4ರ ಮಂಗಳವಾರ ಸಂಜೆ 7.30ಕ್ಕೆ ರಂಗಶಂಕರದಲ್ಲಿ 

ಲೇಖಕ ವಿವೇಕ ಶಾನಭಾಗ 

ವಿವೇಕ ಶಾನಭಾಗ ಅವರು ಉತ್ತರ ಕನ್ನಡ ಜಿಲ್ಲೆಯವರು. ‘ಅಂಕುರ’, ‘ಲಂಗರು’, ‘ಹುಲಿ ಸವಾರಿ’, ‘ಮತ್ತೊಬ್ಬನ ಸಂಸಾರ’ ಇವರ ಕಥಾ ಸಂಕಲನಗಳು. ‘ಇನ್ನೂ ಒಂದು’ ಮತ್ತು ‘ಒಂದು ಬದಿಯ ಕಡಲು’ ಎಂಬ ಎರಡು ಕಾದಂಬರಿಗಳು ಪ್ರಕಟವಾಗಿವೆ. ‘ಸಕ್ಕರೆ ಗೊಂಬೆ’ ಮತ್ತು ‘ಬಹುಮುಖಿ’ ಇವರ ಪ್ರಕಟಿತ ನಾಟಕಗಳು. ‘ಸಕ್ಕರೆ ಗೊಂಬೆಯು’ ನೀನಾಸಂ ತಿರುಗಾಟದ ಮೂಲಕ ಕರ್ನಾಟಕದ ಅನೇಕ ಊರುಗಳಲ್ಲಿ ಪ್ರದರ್ಶನಗೊಂಡಿದೆ.
ಇಂಗ್ಲಿಷ್ ಪದವೀಧರರಾದ ಇವರು ಈಗ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿ ‘ದೇಶ ಕಾಲ’ ಎಂಬ ವಿಶಿಷ್ಟ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ.

ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಮೌನಿ ಬಾಬಾ ಜೀವಂತ ಸಮಾಧಿ..! ಈ ಕಠಿಣ ನಿರ್ಧಾರದ ಹಿಂದಿನ ಕಾರಣ ಕೇಳಿದ್ರೆ ಶಾಕ್‌ ಆಗ್ತಿರಾ..

ನಿರ್ದೇಶಕ ಮಂಜುನಾಥ ಎಲ್ ಬಡಿಗೇರ 

ಮಂಜುನಾಥ ಎಲ್ ಬಡಿಗೇರ ಅವರು ನೀನಾಸಂ ರಂಗಶಿಕ್ಷಣ ಕೇಂದ್ರದ ಪದವೀಧರರಾಗಿದ್ದು, ತಿರುಗಾಟದಲ್ಲಿ ನಟರಾಗಿ, ನಿರ್ದೇಶಕರಾಗಿ ದುಡಿದಿದ್ದಾರೆ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಶಾಸ್ತ್ರೀಯವಾಗಿ ಯಕ್ಷಗಾನವನ್ನು ಅಭ್ಯಾಸ ಮಾಡಿರುವ ಇವರು ರಾಮನಗರದ ಜಾನಪದ ಲೋಕದಲ್ಲಿ ಜಾನಪದ ಡಿಪ್ಲೊಮಾ ಮಾಡಿರುತ್ತಾರೆ. ಪ್ರಸ್ತುತ ಬೆಂಗಳೂರಿನ ಸಮಷ್ಟಿ ತಂಡದಲ್ಲಿ ನಟರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದುವರೆಗೆ ಇವರು ʼಹರಿಣಾಭಿಸರಣʼ, ʼಮಿಸ್. ಸದಾರಮೆʼ, ʼಬೊಮ್ಮನಹಳ್ಳಿಯ ಕಿಂದರಿ ಜೋಗಿʼ, ʼಕಥನʼ, ʼಸಾಫಲ್ಯʼ, ʼಪರಿತ್ಯಕ್ತʼ, ʼಸತ್ಯಾಗ್ರಹʼ, ʼಕೈದಿʼ, ʼಸಾಂಬಶಿವ ಪ್ರಹಸನʼ, ʼಚಿತ್ರಪಟ ರಾಮಾಯಣʼ, ʼದಶಾನನ ಸ್ವಪ್ನ ಸಿದ್ಧಿʼ, ʼಸೀತಾ ಸ್ವಯಂವರʼ, ʼಪ್ರಮೀಳಾರ್ಜುನೀಯಂʼ, ʼಚಿರಕುಮಾರ ಸಭಾʼ, ʼವಿಶಾಕೇʼ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರು ಕಳೆದ 20 ವರ್ಷಗಳಿಂದ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಮಷ್ಟಿ ರಂಗ ತಂಡ

ಸಮಷ್ಟಿ 2000ದಲ್ಲಿ ಹುಟ್ಟಿಕೊಂಡ ರಂಗ ತಂಡ. ಹೊಸ ಪ್ರತಿಭೆಗಳನ್ನು ಹುಡುಕಿ ಅವರಲ್ಲಿ ರಂಗಾಸಕ್ತಿಯನ್ನು ಬೆಳೆಸುವುದು ಈ ತಂಡದ ಉದ್ದೇಶ. ಈವರೆಗೆ ಇದು ‘ಆಷಾಡದ ಒಂದು ದಿನ’, ‘ಸಾಂಬಶಿವ ಪ್ರಹಸನ’, ‘ಮೃಚ್ಛಕಟಿಕ’, ‘ಹದ್ದು ಮೀರಿದ ಹಾದಿ’, ‘ಅಲೆಗಳಲ್ಲಿ ರಾಜಹಂಸಗಳು’, ‘ಹರಿಣಾಭಿಸರಣ’, ‘ಕಥನ’, ‘ಮಿಸ್. ಸದಾರಮೆ’ ‘ಕಥೆ ಹೇಳತೀವಿ’ ‘ಸಾಫಲ್ಯ’, ‘ಅವಾಂತರ’, ‘ಶಾಂಡಿಲ್ಯ ಪ್ರಹಸನ’ ‘ನಾಯೀಕತೆ’, ‘ಪ್ರಮೀಳಾರ್ಜುನೀಯಂ’, ‘ಚಿರಕುಮಾರ ಸಭಾ’, ‘ವಿಶಾಕೇ’, ‘ಚಿತ್ರಪಟ’ ‘ನೀರು ಕುಡಿಸಿದ ನೀರೆಯರು’, `ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ’ ಮುಂತಾದ ನಾಟಕಗಳನ್ನು ಯಶಸ್ವಿಯಾಗಿ ರಂಗಕ್ಕೆ ತಂದಿದೆ. ಹೆಚ್ಚಿನ ಮಾಹಿತಿಗೆ 9845163380 ಸಂಪರ್ಕಿಸಬಹುದು ಅಥವಾ www.samashti.com ಗೆ ಭೇಟಿ ನೀಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News