ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭಯದಿಂದ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧಿಸುತ್ತಿದ್ದಾರೆ ಎಂಬ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, "ಚಾಮುಂಡೇಶ್ವರಿಯಲ್ಲಿ ಸೋಲಿನ ಭಯದಿಂದ ಸಿದ್ದರಾಮಯ್ಯ ಬಾದಾಮಿ ಕಡೆ ಮುಖ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದರೆ ಸಿಎಂ ಸೋಲಿನ ಭಯದಿಂದ ಕುಮಾರಸ್ವಾಮಿ ಎರಡು ಕಡೆ ನಿಲ್ಲುತ್ತಿದ್ದಾರಾ? ಮೋದಿ ಸೋಲಿನ ಭಯದಿಂದ ಎರಡು ಕಡೆ ಸ್ಪರ್ಧೆ ಮಾಡಿದ್ರಾ? ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರಲ್ಲದೆ ಜೆಡಿಎಸ್ನವರಂತೆ ಕೀಳು ಮಟ್ಟದ ಟೀಕೆ ಮಾಡುವುದಿಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.
ಬಾದಾಮಿ ಕ್ಷೇತ್ರದಲ್ಲಿ ಏ.24ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಆ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾವ ಸ್ಪರ್ಧಿ ಸ್ಪರ್ಧಿಸಿದರೂ ನನಗೆ ಯಾವುದೇ ಭಯವಿಲ್ಲ. ಸೋಲು ಗೆಲುವಿನ ಬಗ್ಗೆ ರಾಜ್ಯದ ಜನತೆ ನಿರ್ಧರಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಇಂದು ಬೆಳಿಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರದಲ್ಲಿ ನಿರತರಾಗಿರುವ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಹಾಗಾಗಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಬಾದಾಮಿ ಕ್ಷೇತ್ರದಲ್ಲಿ ಬಾದಾಮಿ ಅಲ್ಲ, ಗೋಡಂಬಿ ಸಿಗೋದು ಗ್ಯಾರೆಂಟಿ ಎಂದು ವ್ಯಂಗ್ಯವಾಡಿದ್ದರು.