ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎ.ಆರ್ಮುಗಸ್ವಾಮಿ ನೇತೃತ್ವದ ಆಯೋಗವು ಚೆನೈನ ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಏಮ್ಸ್ ಆಸ್ಪತ್ರೆಯ ಮೂವರು ವೈದ್ಯರಿಗೆ ಸಮನ್ಸ್ ಜಾರಿ ಮಾಡಿದ್ದು, ಆಗಸ್ಟ್ 23 ಮತ್ತು 24ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಆದೇಶಿಸಿದ್ದಾರೆ.
ಏಮ್ಸ್ ಆಸ್ಪತ್ರೆಯ ಶ್ವಾಸಕೊಶಶಾಸ್ತ್ರ ವಿಭಾಗದ ಡಾ.ಜಿ.ಸಿ.ಖಿಲ್ನಾನಿ, ಅರಿವಳಿಕೆ ಶಾಸ್ತ್ರ ವಿಭಾಗದ ಡಾ.ಅಂಜನ್ ತ್ರಿಖಾ ಮತ್ತು ಹೃದ್ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನಿತೀಶ್ ನಾಯಕ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದೆ.
2016ರ ಸೆಪ್ಟೆಂಬರ್ 22ರಿಂದ ಡಿಸೆಂಬರ್ 5ರವರೆಗೆ ಅಪೋಲೋ ಆಸ್ಪತ್ರೆಯಲ್ಲಿ ಈ ವೈದ್ಯರು ನಿಯಮಿತವಾಗಿ ಜಯಲಲಿತಾ ಅವರ ಆರೋಗ್ಯ ವಿಚಾರಿಸುತ್ತಿದ್ದರು. ಈಗಾಗಲೇ ಅವರಿಗೆ ಆದೇಶ ತಲುಪಿದ್ದು, ಅವರು ಅದನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಈವರೆಗೆ ಆಯೋಗದ 75 ಸಾಕ್ಷಿದಾರರು ಮತ್ತು ಇತರ ಏಳು ಮಂದಿ ಸ್ವಯಂಪ್ರೇರಿತವಾಗಿ ತನಿಖಾ ಆಯೋಗಕ್ಕೆ ಹೇಳಿಕೆ ನೀಡಿದ್ದಾರೆ. ಇವರಲ್ಲಿ 30 ಮಂದಿಯನ್ನು ಸಮಾಲೋಚಕರು ವಿ.ಕೆ.ಶಶಿಕಲಾ ಅವರ ಬಗ್ಗೆ ವಿಚಾರಿಸಿದ್ದಾರೆ.