ಐಪಿಎಲ್ ಟೂರ್ನಿ (IPL 2022) ಅದೆಷ್ಟೊ ಯುವ ಆಟಗಾರರನ್ನು ಹೀರೋಗಳನ್ನಾಗಿ ಮಾಡಿದೆ. ಇಲ್ಲಿ ಮಿಂಚಿದ ಅನೇಕರು ಭಾರತ ಕ್ರಿಕೆಟ್ ತಂಡಕ್ಕೆ ಕಾಲಿಟ್ಟ ಅನೇಕ ಉದಾಹರಣೆಗಳಿವೆ. ಯುಜ್ವೇಂದ್ರ ಚಹಲ್, ಟಿ. ನಟರಾಜನ್, ವೆಂಕಟೇಶ್ ಅಯ್ಯರ್ ಹೀಗೆ ಅನೇಕರು ಐಪಿಎಲ್ ಮೂಲಕ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವ ಮೂಲಕ ಸ್ಟಾರ್ ಆದವರು.
ಈಗ ಇದೇ ರೀತಿ ಮತ್ತೊಬ್ಬ ಆಟಗಾರ ತಮ್ಮ ಚೊಚ್ಚಲ ಐಪಿಎಲ್ (IPL) ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಕುಲ್ದೀಪ್ ಸೇನ್ ಸದ್ಯ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ.
ಇದನ್ನೂ ಓದಿ: IPL 2022: ಲಕ್ನೋ ವಿರುದ್ಧ ರಾಜಸ್ತಾನ ರಾಯಲ್ಸ್ ಗೆ 3 ರನ್ ಗಳ ರೋಚಕ ಜಯ
ಕಳೆದ ಭಾನುವಾರ ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಮೂಲಕ ಐಪಿಎಲ್ಗೆ ಕುಲ್ದೀಪ್ ಸೇನ್ ಪದಾರ್ಪಣೆ ಮಾಡಿದರು. ಚೊಚ್ಚಲ ಮ್ಯಾಚ್ನಲ್ಲೇ ತಂಡಕ್ಕೆ ಗೆಲುವು ತಂದುಕೊಟ್ಟರು.
ಕೊನೆಯ ಓವರ್ ವರೆಗೂ ಕುತೂಹಲ ಕೆರಳಿಸಿದ ಈ ಪಂದ್ಯದಲ್ಲಿ ಅಂತಿಮ 6 ಎಸೆತಗಳಲ್ಲಿ 15 ರನ್ಗಳನ್ನು ಕಟ್ಟಿ ಹಾಕಲು ಸ್ಯಾಮ್ಸನ್ ಇವರಿಗೆ ಬೌಲಿಂಗ್ ನೀಡಿದರು. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಕುಲ್ದೀಪ್ (Kuldeep Sen), ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು. ಬಳಿಕ ಮಾಲಿಂಗ, ಸಂಗಕ್ಕಾರ ಸೇರಿದಂತೆ ಘಟಾನುಘಟಿ ಕ್ರಿಕೆಟಿಗರಿಂದ ಮೆಚ್ಚುಗೆ ಪಡೆದರು. ಐಪಿಎಲ್ನಲ್ಲಿ ಮಿಂಚುತ್ತಿರುವ ಈ ಯುವ ಆಟಗಾರನ ಹಿನ್ನೆಲೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.
25 ವರ್ಷ ವಯಸ್ಸಿನ ಕುಲ್ದೀಪ್ ಸೇನ್, ಮಧ್ಯಪ್ರದೇಶದ ರಾವಾ ಪಟ್ಟಣದ ಸಿರ್ಮೌರ್ ಚೌರಹದಲ್ಲಿ ಸಲೂನ್ ಅಂಗಡಿ (Salon Shop) ನಡೆಸುತ್ತಿರುವ ಒಬ್ಬ ಬಡ ಕ್ಷೌರಿಕನ ಮಗ. ಕುಲ್ದೀಪ್ ಅವರ ತಂದೆಗೆ ನಾಲ್ವರು ಮಕ್ಕಳು. ಚಿಕ್ಕಂದಿನಿಂದಲೇ ಕ್ರಿಕೆಟ್ನಲ್ಲಿ (Cricket) ಆಸಕ್ತಿ ಬೆಳೆಸಿಕೊಂಡ ಕುಲ್ದೀಪ್ ಎಂಟನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು.
2018-19ರಲ್ಲಿ ಮಧ್ಯಪ್ರದೇಶಕ್ಕಾಗಿ ರಣಜಿ ಟ್ರೋಫಿ (Ranaji Trophy) ಮೂಲಕ ಪದಾರ್ಪಣೆ ಮಾಡಿದರು ಕುಲ್ದೀಪ್ ಸೇನ್, 2018 ರಲ್ಲಿ ಪಂಜಾಬ್ ವಿರುದ್ಧ ಮೊದಲ ಬಾರಿಗೆ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದರು. ಅಷ್ಟೇ ಅಲ್ಲದೆ ಮೊದಲ ರಣಜಿ ಸೀಸನ್ನಲ್ಲಿ ಎಂಟು ಪಂದ್ಯಗಳಲ್ಲಿ 25 ವಿಕೆಟ್ಗಳನ್ನು ಪಡೆದು ಸೈ ಎನಿಸಿಕೊಂಡರು. ಇದೀಗ ಐಪಿಎಲ್ ಅಂಗಳಕ್ಕೆ ಕುಲ್ದೀಪ್ ಸೇನ್ ಎಂಬ ಯುವ ಪ್ರತಿಭೆ ಬಂದಿದ್ದಾರೆ. ತಾವಾಡಿದ ಮೊದಲ ಪಂದ್ಯದಲ್ಲೇ ಮಿಂಚಿದ್ದಾರೆ.
ಇದನ್ನೂ ಓದಿ: SRH vs GT, IPL 2022: ಗುಜರಾತ್ ಟೈಟಾನ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಹೈದರಾಬಾದ್?
ಕಳೆದ ಪಂದ್ಯದಲ್ಲಿ 146kmh ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಕುಲ್ದೀಪ್ ಎಲ್ಲರ ಚಿತ್ತ ಸೆಳೆದಿದ್ದರು. ಇವರ ಬೌಲಿಂಗ್ ಪ್ರದರ್ಶನವನ್ನು ಇಡೀ ವಿಶ್ವವೇ ಕಣ್ತುಂಬಿಕೊಂಡಿತು. ಆದರೆ ತಮ್ಮ ಮಗನಿಗೆ ಪ್ರತಿಷ್ಠಿತ ಐಪಿಎಲ್ ಲೀಗ್ನಲ್ಲಿ ಆಡುವ ಅವಕಾಶ ಸಿಕ್ಕಿದ್ದರೂ ಸಹ ಭಾನುವಾರ ಗ್ರಾಹಕರ ಸಂಖ್ಯೆ ಹೆಚ್ಚಿದ್ದರಿಂದ ಕುಲ್ದೀಪ್ ತಂದೆ ರಾಮ್ ಪಾಲ್ ಅಂಗಡಿಯಲ್ಲಿ ತಮ್ಮ ಕಾಯಕದಲ್ಲಿ ತೊಡಗಿದ್ದರಂತೆ. ತಮ್ಮ ಹಳ್ಳಿಯಿಂದ ಅಂಗಡಿಗೆ 6 ಕಿ.ಮೀ ದೂರ ಸೈಕಲ್ನಲ್ಲಿ ತೆರಳುತ್ತಾರೆ ರಾಮ್ ಪಾಲ್. ರಾತ್ರೋರಾತ್ರಿ ತಮ್ಮ ಮಗ ದೇಶಾದ್ಯಂತ ಪ್ರಸಿದ್ಧಿ ಪಡೆದರೂ ತಮ್ಮ ದಿನಚರಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಹೇಳುತ್ತಾರೆ.
ಬಡಕುಟುಂಬದಿಂದ ಬಂದಂತಹ ಕುಲದೀಪ್ ಸೇನ್, ಇಂದು ಕ್ರಿಕೆಟಿಗನಾಗಿ ಬೆಳೆದಿರುವ ಸಂಪೂರ್ಣ ಶ್ರೇಯ ಕೋಚ್ ಆಂಟೋನಿ ಅವರಿಗೆ ಸಲ್ಲುತ್ತದೆ. ಅವರು ಕುಲದೀಪ್ ಅವರ ಡಯಟ್, ಸ್ಪೈಕ್ ಶೂಗಳು ಮತ್ತು ತರಬೇತಿಯ ಸಂಪೂರ್ಣ ವೆಚ್ಚ ಭರಿಸಿದ್ದಾರೆ ಎಂದು ಕುಲ್ದೀಪ್ ತಂದೆ ರಾಮ್ ಪಾಲ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.