ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಮತ್ತೊಮ್ಮೆ ಚರ್ಚೆಯಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ದರ್ಶನ್ ತಾಯಿ ನಮ್ಮ ಪಕ್ಷದ ಕಾರ್ಯದರ್ಶಿಯಾಗಿದ್ದಾರೆ. ದರ್ಶನ್ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ಅಷ್ಟೇಯಲ್ಲದೆ ಖ್ಯಾತ ನಟರಾದ ಶಿವರಾಜಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರನ್ನು ಪ್ರಚಾರಕ್ಕೆ ಕರೆತರುವ ಬಗ್ಗೆಯೂ ಅಲ್ಲಗೆಳೆದಿದ್ದಾರೆ.
ಆದರೆ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತ್ರ ದರ್ಶನ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸುಳಿವು ನೀಡಿದ್ದಾರೆ. ಪಕ್ಷದ ವೇದಿಕೆಯಲ್ಲಿ ಹಲವು ಮಂದಿ ದರ್ಶನ್ ಸೇರ್ಪಡೆ ಕುರಿತು ಚರ್ಚಿಸಿದ್ದಾರೆ. ಅವರೊಂದಿಗೂ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳುವ ಮೂಲಕ ಪಕ್ಷ ಸೇರ್ಪಡೆಯನ್ನು ಖಚಿತಗೊಳಿಸಿದ್ದಾರೆ.
ದರ್ಶನ್ ಅವರು ನಾಡು ನುಡಿಗೋಸ್ಕರ ಹಲವು ಭಾರಿ ಧ್ವನಿ ಎತ್ತಿದ್ದಾರೆ. ಜನಪ್ರಿಯ ನಟರಾಗಿದ್ದಾರೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂಬುದಾಗಿಯೂ ದಿನೇಶ್ ಹೇಳಿದ್ದಾರೆ.ನಟ, ಮಾಜಿ ಸಚಿವ ಅಂಬರೀಷ್ ಕೂಡ ಈಗಾಗಲೇ ಸಕ್ರೀಯ ರಾಜಕಾರಣದಲ್ಲಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿದ್ದಾರೆ. ಮೊದಲಿಂದಲೂ ಅಂಬರೀಷ್ ಮತ್ತು ದರ್ಶನ್ ಆತ್ಮೀಯರಾಗಿದ್ದು ಈಗ ಅಂಬರೀಶ್ ಅವರಂತೆ ದರ್ಶನ್ ಕೂಡ ರಾಜಕೀಯ ಪ್ರವೇಶ ಮಾಡುತ್ತಾರೆ, ಕಾಂಗ್ರೆಸ್ ಪಕ್ಷವನ್ನೇ ಸೇರುತ್ತಾರೆ ಎಂದು ಹೇಳಲಾಗುತ್ತಿದೆ.
ನಟ ಉಪೇಂದ್ರ ರಾಜಕೀಯ ಪಕ್ಷ ಹುಟ್ಟುಹಾಕಿದ ಬೆನ್ನಲ್ಲೇ ದರ್ಶನ್ ರಾಜಕೀಯ ಪ್ರವೇಶ ಕೂಡ ಚರ್ಚೆಯಾಗುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಇನ್ನೂ ಒಂದಿಷ್ಟು ಸಿನಿಮಾ ಮಂದಿ ರಾಜಕೀಯ ಪ್ರವೇಶ ಮಾಡುವ ಸಾಧ್ಯತೆಯೂ ಕಂಡು ಬರುತ್ತಿದೆ.