ನವದೆಹಲಿ: ಲಾಕ್ ಡೌನ್ ಅವಧಿಯಲ್ಲಿ ಯುವಕನೋರ್ವ ಮುಂಬೈನಿಂದ ಸುಮಾರು 1600 ಕಿ.ಮೀ ಅಂತರವನ್ನು ಪಾದಯಾತ್ರೆಯ ಮೂಲಕ ಕ್ರಮಿಸಿ ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಗೆ ತಲುಪಿದ್ದಾನೆ. ಬಳಿಕ ಅಲ್ಲಿಂದಲೂ ಕೂಡ ನಡೆದುಕೊಂಡೇ ತನ್ನ ಊರಿಗೆ ತಲುಪಿದ್ದಾನೆ. ಆದರೆ, ಲಾಕ್ ಡೌನ್ ಇರುವ ಕಾರಣ ಅಲ್ಲಿನ ಆಡಳಿತದ ಅಧಿಕಾರಿಗಳು ಆತನನ್ನು ಊರಿನ ಒಂದು ಶಾಲೆಯಲ್ಲಿ 14 ದಿನಗಳ ಕ್ವಾರಂಟೀನ್ ಗೆ ಕಳುಹಿಸಿದ್ದಾರೆ. ಆದರೆ, ಕ್ವಾರಂಟೀನ್ ಗೆ ಒಳಗಾದ ಕೇವಲ ಆರೇ ಗಂಟೆಗಳಲ್ಲಿ ರಹಸ್ಯಮಯವಾಗಿ ಯುವಕ ಮೃತಪಟ್ಟಿದ್ದಾನೆ.
ಶ್ರಾವಸ್ತಿ ಜಿಲ್ಲೆಯ, ಮಲ್ಹಿಪುರಾ ಠಾಣಾ ವ್ಯಾಪ್ತಿಯಲ್ಲಿ ಬರುವ ಮಠಖಾನಾ ಗ್ರಾಮದಲ್ಲಿ ಸೋಮವಾರ ಮಹಾರಾಷ್ಟ್ರದಿಂದ ಪಾದಯಾತ್ರೆ ಮಾಡಿ ತಪ್ಪಿಸಿಕೊಂಡು ಊರು ತಲುಪಿರುವ ಯುವಕ ತನ್ನ ಪ್ರಾಣ ತ್ಯಜಿಸಿದ್ದಾನೆ. ಈ ಯುವಕನನ್ನು 14 ದಿನಗಳ ಕಾಲ ಗ್ರಾಮದಲ್ಲಿಯೇ ನಿರ್ಮಿಸಲಾಗಿದ್ದ ಒಂದು ಕ್ವಾರಂಟೀನ್ ಸೆಂಟರ್ ಗೆ ಕಳುಹಿಸಲಾಗಿತ್ತು. ಆದರೆ, 14 ದಿನಗಳು ದೂರದ ಮಾತು, ಆತ 14ಗಂಟೆಗಳೂ ಕೂಡ ಕ್ವಾರಂಟೀನ್ ಸೆಂಟರ್ ನಲ್ಲಿ ಕಳೆಯಲು ವಿಫಲವಾಗಿದ್ದಾನೆ.
ಮುಂಬೈನಿಂದ ಸುಮಾರು 1600 ಕಿ.ಮೀ ಅಂತರವನ್ನು ಪಾದಯಾತ್ರೆ ನಡಸುವ ಮೂಲಕ ಯುವಕ ಸೋಮವಾರ ಬೆಳಗ್ಗೆ 7ಗಂಟೆಗೆ ತನ್ನ ಊರಿಗೆ ತಲುಪಿದ್ದಾನೇ. ಬಳಿಕ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಸಾಮಾನ್ಯವಾಗಿ ಮಾತುಗಳನ್ನು ಆಡುತ್ತಿದ್ದ ಆ ಯುವಕ ರಹಸ್ಯಮಯವಾಗಿಯೇ ಮೃತಪಟ್ಟಿದ್ದಾನೆ.
ಕ್ವಾರಂಟೀನ್ ಸೆಂಟರ್ ನಲ್ಲಿ ಸಾವನ್ನಪ್ಪಿದ ಈ ಯುವಕನ ಸುದ್ದಿ ಕಾಡ್ಗಿಚ್ಚಿನಂತೆ ಪಸರಿಸಿದ್ದು , ಜಿಲ್ಲಾಡಳಿತವೇ ಬೆಚ್ಚಿಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತರಾತುರಿಯಲ್ಲಿ ಗ್ರಾಮಕ್ಕೆ ತಲುಪಿದ್ದು, ಕೊರೊನಾ ವೈರಸ್ ಪ್ರೋಟೋಕಾಲ್ ಅಡಿ ಆತನ ಶವವನ್ನು ವಶಕ್ಕೆ ಪಡೆದು ಪೋಸ್ಟ್ ಮಾರ್ಟಂಗೆ ಕಳುಹಿಸಿದ್ದಾರೆ. ಸದ್ಯ ಆತನ ರಹಸ್ಯಮಯ ಸಾವು ಪೋಲೀಸ್ ಹಾಗೂ ಆರೋಗ್ಯ ಇಲಾಖೆಯ ಆಧಿಕಾರಿಗಳ ಪಾಲಿಗೆ ಯಕ್ಷ ಪ್ರಶ್ನೆಯಾಗಿ ಕಾಡಲಾರಂಭಿಸಿದೆ.
ಇನ್ನೊಂದೆಡೆ ಯುವಕನ ಮೃತದೇಹದ ಬಳಿ ತೆರಳಿದ ಆತನ ಕುಟುಂಬ ಸದಸ್ಯರನ್ನೂ ಕೂಡ ಇದೀಗ ಶಾಲೆಯಲ್ಲಿಯೇ ಕ್ವಾರಂಟೀನ್ ಗೆ ಒಳಪಡಿಸಲಾಗಿದೆ. ಇನ್ನೊಂದೆಡೆ ಯುವಕ ನಡೆದುಕೊಂಡೇ ಗ್ರಾಮ ತಲುಪಿರುವುದು ಆತನನ್ನು ನೋಡಿಯೇ ತಿಳಿಯುತ್ತದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಈ ಎಲ್ಲ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಶ್ರಾವಸ್ತಿ DM ಓ.ಪಿ ಭಾರ್ಗವ್, ಯುವಕನ ಸಾವು ಹೇಗೆ ಸಂಭವಿಸಿದೆ ಎಂಬುದರ ಕುರಿತು ಈಗಲೇ ಸ್ಪಷ್ಟವಾಗಿ ಏನನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಸೋಮವಾರ ಬೆಳಗ್ಗೆ 7 ಗಂಟೆಗೆ ಈ ಯುವಕ ಮಹಾರಾಷ್ಟ್ರದಿಂದ ತನ್ನ ಊರಿಗೆ ಮರಳಿದ್ದಾನೆ. ಇದುವರೆಗೂ ಕೂಡ ಯಾವುದೇ ಸ್ಪಷ್ಟತೆ ಇಲ್ಲದಿರುವುದರ ಕಾರಣ ಏನನ್ನೂ ಹೇಳಲಾಗುವುದಿಲ್ಲ ಎಂದಿದ್ದಾರೆ.