ಉಪಚುನಾವಣೆ 2019: ರಾಜ್ಯದ 15 ಕ್ಷೇತ್ರಗಳಲ್ಲಿ ಮತದಾನ ಆರಂಭ

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ.

Last Updated : Dec 5, 2019, 08:07 AM IST
ಉಪಚುನಾವಣೆ 2019: ರಾಜ್ಯದ 15 ಕ್ಷೇತ್ರಗಳಲ್ಲಿ ಮತದಾನ ಆರಂಭ title=
ಫೋಟೋ: ANI

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಬಿಜೆಪಿ ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ಮತ್ತು ಜನತಾದಳ-ಸೆಕ್ಯುಲರ್ (ಜೆಡಿ-ಎಸ್) ಎಲ್ಲಾ 15 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದ್ದು ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.  ಈ ಕ್ಷೇತ್ರಗಳಲ್ಲಿ ಒಟ್ಟು 128 ಸ್ವತಂತ್ರರು ಸೇರಿದಂತೆ 248 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತದಾರರು ಇಂದು ಬೆಳಗ್ಗೆಯಿಂದಲೇ ಉತ್ಸುಕರಾಗಿ ಬಂದು ಮತ ಚಲಾಯಿಸುತ್ತಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಸಾರಿ ಕಾಂಗ್ರೆಸಿನ 14 ಮತ್ತು ಜೆಡಿಎಸ್ ನ 3 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಎರಡೂ ಪಕ್ಷಗಳು ವಿಪ್ ಉಲ್ಲಂಘನೆ ಮಾಡಿರುವುದಾಗಿ ಶಾಸಕರ ವಿರುದ್ಧ ವಿಧಾನಸಭಾ ಸ್ಪೀಕರ್ ಗೆ ದೂರು ನೀಡಿದ್ದರು. ಕಾಂಗ್ರೆಸ್-ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರ ದೂರಿನ ಮೇರೆಗೆ ಹಿಂದಿನ ವಿಧಾನಸಭೆಯ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ತಮ್ಮ ಪಕ್ಷದ ವಿಪ್ ನ್ನು ಧಿಕ್ಕರಿಸಿದ ಕಾರಣಕ್ಕಾಗಿ ಜುಲೈ 25-28ರಂದು 17 ಬಂಡಾಯ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು.

ಸದ್ಯ ಮಸ್ಕಿ (ರಾಯಚೂರು ಜಿಲ್ಲೆ) ಮತ್ತು ಆರ್.ಆರ್.ನಗರ (ಬೆಂಗಳೂರು ನೈಋತ್ಯ) ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಬಾಕಿ ಇರುವ ಕಾರಣ ಈ ಎರಡೂ ಕ್ಷೇತ್ರಗಳ ಉಪ ಚುನಾವಣೆಗಳನ್ನು ತಡೆಹಿಡಿಯಲಾಗಿದೆ. ಈ ಎರಡೂ ಕ್ಷೇತ್ರಗಳನ್ನು ಹೊರತುಪಡಿಸಿ ಅಥಣಿ, ಕಾಗವಾಡ, ಗೋಕಾಕ್, ಯೆಲ್ಲಾಪುರ, ಹಿರೇಕೆರೂರ್, ರಾಣಿಬೆನ್ನೂರ್, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್. ಪುರ, ಯಶ್ವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ ಮತ್ತು ಹುಣಸೂರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆ ನಡೆಯಲಿದೆ. ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ.

ಈ ಉಪಚುನಾವಣೆಯಲ್ಲಿ ಮತದಾರರು ಕ್ಷೇತ್ರದ ಅಭಿವೃದ್ಧಿಗಾಗಿ ನಾವು ರಾಜೀನಾಮೆ ನೀಡಿ ಮತ್ತೆ ನಿಮ್ಮ ಮುಂದೆ ಬಂದಿದ್ದೇವೆ ಎಂದು ಮತಯಾಚನೆ ಮಾಡಿರುವ ಅನರ್ಹರನ್ನು ಕೈ ಹಿಡಿಯುವರೋ ಅಥವಾ ಅನರ್ಹ ಶಾಸಕರು ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿರುವ ವಿರೋಧ ಪಕ್ಷಗಳ ಕೈ ಹಿಡಿಯುವರೋ ಎಂಬುದನ್ನು ಕಾದುನೋಡಬೇಕಿದೆ.

 

Trending News