ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿರುವ ಬೆನ್ನಲ್ಲೇ ಈಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಶನಿವಾರ ಬಿಜೆಪಿಗೆ ಸರ್ಕಾರ ರಚನೆ ಆಹ್ವಾನ ನೀಡಿದ್ದರು. ಈ ಹಿನ್ನಲೆಯಲ್ಲಿ ಈಗ ಮುಂದಿನ ಕಾರ್ಯಸೂಚಿಗಳ ವಿಚಾರವಾಗಿ ಬಿಜೆಪಿ ಭಾನುವಾರ ಸಭೆ ಸೇರಿ ಚರ್ಚಿಸಲಿದೆ ಎನ್ನಲಾಗಿದೆ.ನೂತನ ಸರ್ಕಾರದಲ್ಲಿ 50:50 ಸೂತ್ರದ ಅಳವಡಿಕೆಗೆ ಶಿವಸೇನಾ ಪಟ್ಟು ಹಿಡಿದ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಮೈತ್ರಿಕೂಟದ ಸರ್ಕಾರ ರಚನೆ ಕಗ್ಗಂಟಾಗಿದೆ.ಈ ಹಿನ್ನಲೆಯಲ್ಲಿ ಈಗ ರಾಜ್ಯಪಾಲರು ನಿಯಮಾವಳಿಯಂತೆ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಯನ್ನು ಸರ್ಕಾರ ರಚನೆಗೆ ಕೋರಿದ್ದಾರೆ.
ಇನ್ನೊಂದೆಡೆ ಸರ್ಕಾರ ರಚನೆಗೆ ಬಿಜೆಪಿಯನ್ನು ಆಹ್ವಾನಿಸಿರುವ ಮಹಾರಾಷ್ಟ್ರ ರಾಜ್ಯಪಾಲರ ನಿರ್ಧಾರವನ್ನು ಶಿವಸೇನೆ ಮುಖಂಡ ಸಂಜಯ್ ರೌತ್ ಶನಿವಾರ ಸ್ವಾಗತಿಸಿದ್ದಾರೆ. ರಾಜ್ಯಪಾಲರು ಸರ್ಕಾರ ರಚನೆಗೆ ಅನ್ವೇಷಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಬಿಜೆಪಿ ಏಕೈಕ ದೊಡ್ಡ ಪಕ್ಷ ಮತ್ತು ಅದು ಮೊದಲು ಸರ್ಕಾರ ರಚಿಸುವ ಹಕ್ಕುದಾರ' ಎಂದು ರೌತ್ ಹೇಳಿದರು.
ಏತನ್ಮಧ್ಯೆ, ಶಿವಸೇನಾ ಹಿರಿಯ ಮುಖಂಡರು ಪಕ್ಷದ ಶಾಸಕರು ಉಳಿದುಕೊಂಡಿರುವ ಮಲಾದ್ನ ಮಾಧ್ ದ್ವೀಪ ಪ್ರದೇಶದ ರೆಸಾರ್ಟ್ಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಿದ ಮರುದಿನ, ರಾಜ್ಯಪಾಲ ಕೊಶ್ಯರಿ ಅವರು ಶನಿವಾರ ಸಂಜೆ ಕಾರ್ಯಕಾರಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.ಮಹಾರಾಷ್ಟ್ರದಲ್ಲಿನ ಅಕ್ಟೋಬರ್ 21 ರ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆದ್ದಿದೆ, ಸರ್ಕಾರ ರಚನೆ ಮ್ಯಾಜಿಕ್ ಸಂಖ್ಯೆ 145 ಆಗಿದೆ.