ನವದೆಹಲಿ: ಲೋಕಸಭಾ ಚುನಾವಣೆ 2019ರ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಬಿಜೆಪಿ ವಕ್ತಾರ, ಸಂಸದ ಜಿವಿಎಲ್ ನರಸಿಂಹ ರಾವ್ ಹಾಗೂ ಭೂಪೇಂದ್ರ ಯಾದವ್ ಮೇಲೆ ವ್ಯಕ್ತಿಯೋರ್ವ ಶೂ ಎಸೆದ ಘಟನೆ ಗುರುವಾರ ನಡೆದಿದೆ.
ಪತ್ರಿಕಾಗೋಷ್ಠಿಯಲ್ಲಿ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಹೇಳಿಕೆಗೆ ಇಬ್ಬರೂ ನಾಯಕರು ಪ್ರತಿಕ್ರಿಯಿಸುತ್ತಿದ್ದ ವೇಳೆ ಆ ವ್ಯಕ್ತಿ ಶೂ ಎಸೆದಿದ್ದಾನೆ. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಪತ್ರಿಕಾಗೋಷ್ಠಿಯಿಂದ ಹೊರಗೆ ಕರೆದೊಯ್ದಿದ್ದಾರೆ. ಆದರೆ ಈವರೆಗೆ ಆತ ಯಾರು ಎಂಬುದು ತಿಳಿದುಬಂದಿಲ್ಲ. ಸದ್ಯ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.
#WATCH Delhi: Shoe hurled at BJP MP GVL Narasimha Rao during a press conference at BJP HQs .More details awaited pic.twitter.com/7WKBWbGL3r
— ANI (@ANI) April 18, 2019
ಮಾಧ್ಯಮ ವರದಿಗಳ ಪ್ರಕಾರ ಆತ ಕಾನ್ಪುರದ ನಿವಾಸಿಯಾಗಿದ್ದು ಆತನ ಹೆಸರು ಡಾ. ಶಕ್ತಿ ಭಾರ್ಗವ್ ಎನ್ನಲಾಗಿದೆ. ಕಾನ್ಪುರದಲ್ಲಿ ಆಸ್ಪತ್ರೆ ನಡೆಸುತ್ತಿರುವ ಭಾರ್ಗವ್ ಮೆಡಿಕಲ್ ನಲ್ಲಿ ಎಂಎಸ್ ಪದವಿ ಹೊಂದಿದ್ದಾರೆ.
ಘಟನೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿವಿಎಲ್ ನರಸಿಂಹ ರಾವ್ ಅವರು, "ಇದು ವಿಪಕ್ಷಗಳ ಕುತಂತ್ರ. ಇಂತಹ ನಡೆಗೆ ನಾವು ಹೆದರುವುದಿಲ್ಲ" ಎಂದಿದ್ದಾರೆ.