ದೊಡ್ಡಬಳ್ಳಾಪುರ: ಮುಂಬರುವ ಬೇಸಿಗೆಯ ಗರಿಷ್ಟ ಬೇಡಿಕೆ ಅವಧಿಯಲ್ಲಿ 19,000 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ ಎಂದು ನಿರೀಕ್ಷಿಸಲಾಗಿದ್ದು, ಅದನ್ನು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ಸದ್ಯಕ್ಕೆ ಲೋಡ್ ಶೆಡಿಂಗ್ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಇಂಧನ ಇಲಾಖೆಗೆ ಸಂಬಂಧಿಸಿದಂತೆ ಇಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲೆಯ ಜನಪ್ರತಿನಿಧಿಗಳು, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳೊಂದಿಗಿನ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ ಅಗತ್ಯವಿರುವ ವಿದ್ಯುತ್ ಪೂರೈಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೆ ತಕ್ಕಂತೆ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಕಳೆದ ಬೇಸಿಗೆಯಲ್ಲಿ 17,000 ಮೆಗಾವ್ಯಾಟ್ ಗರಿಷ್ಠ ಬೇಡಿಕೆ ಬಂದಿತ್ತು. ಅದರಂತೆ ಮುಬರುವ ಬೇಸಿಗೆಯಲ್ಲಿ ಎಷ್ಟು ವಿದ್ಯುತ್ ಬೇಕಾಗಬಹುದು ಎಂಬ ಬಗ್ಗೆ ಕೃತಕ ಬುದ್ಧಿಮತ್ತೆ (ಐಎ) ತಂತ್ರಜ್ಞಾನ ಬಳಸಿಕೊಂಡು ಕೆಪಿಟಿಸಿಎಲ್, ಪಿಸಿಕೆಎಲ್ ಮತ್ತು ಎಸ್ ಎಲ್ ಡಿಸಿ ವತಿಯಿಂದ ನಡೆಸಿದ ಸಮೀಕ್ಷೆ ಪ್ರಕಾರ ಗರಿಷ್ಠ ಬೇಡಿಕೆ ಅವಧಿಯಲ್ಲಿ 19,000 ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಬರಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ-ಬಿಗ್ ಬಾಸ್ ಮನೆಯಿಂದ ಭವ್ಯಾಗೌಡ ಔಟ್..!? ಸ್ಟ್ರಾಂಗ್ ಸ್ಪರ್ಧಿ, ಈ ವಾರ ಎಲಿಮಿನೇಟ್ ಆಗಲು ಕಾರಣ?
ಅದರಂತೆ ಅಗತ್ಯ ವಿದ್ಯುತ್ ಪೂರೈಸಲು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದದ ಮೂಲಕ ಹೆಚ್ಚುವರಿ ಅಗತ್ಯವಿರುವ ವಿದ್ಯುತ್ಅನ್ನು ಕಡಿಮೆ ದರಕ್ಕೆ ಖರೀದಿಸಲು ಅನ್ಯ ರಾಜ್ಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಲೋಡ್ ಶೆಡಿಂಗ್ ಮಾಡುವ ಪ್ರಶ್ನೆ ಉದ್ಭವವಾಗುವುದಿಲ್ಲ ಎಂದರು.
ಜಿಲ್ಲೆಯಲ್ಲಿ ಅಗತ್ಯ ವಿದ್ಯುತ್ ಪೂರೈಕೆಗೆ ಕ್ರಮ:
ಇದಕ್ಕೂ ಮುನ್ನ ಪರಿಶೀಲನಾ ಸಭೆಯಲ್ಲಿ ಮತನಾಡಿದ ಸಚಿವ ಕೆ.ಜೆ.ಜಾರ್ಜ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕೃಷಿ ಚಟುವಟಿಕೆ ಜತೆಗೆ ಕೈಗಾರಿಕೆಗಳಿಗೂ ಸಮರ್ಪಕ ವಿದ್ಯುತ್ ಪೂರೈಸಬೇಕಾಗಿದ. ಹೀಗಾಗಿ ಸುಗಮ ವಿದ್ಯುತ್ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಫೀಡರ್ ಗಳು, ಟ್ರಾನ್ಸ್ ಫಾರ್ಮರ್ ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಫೀಡರ್ ಮಟ್ಟದ ಸೌರೀಕರಣದ ಮೂಲಕ ರೈತ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ಕುಸುಮ್- ಸಿ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಅನುಷ್ಠಾನಗೊಳಿಸಲಾಗುತ್ತಿದೆ. ಬೇಸಿಗೆಯಲ್ಲಿ ರೈತರಿಗೆ ಸಮಸ್ಯೆಯಾಗದಂತೆ ಈ ಫೀಡರ್ ಮಟ್ಟದ ಸೌರೀಕರಣ ಕಾಮಗಾರಿಯನ್ನು ಎಲ್ಲಾ ಕಡೆ ಏಕಕಾಲದಲ್ಲಿ ಕೈಗೊಂಡು ನಿಗದಿತ ಗಡುವಿನಲ್ಲಿ ಪೂರ್ಣಗೊಳಿಸಬೇಕು ಎಂದು ಅನುಷ್ಟಾನ ಏಜನ್ಸಿಗಳಿಗೆ ಸಚಿವರು ಸೂಚನೆ ನೀಡಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕೃಷಿ ಪಂಪ್ ಸೆಟ್ ಗಳ ಅಕ್ರಮ- ಸಕ್ರಮ ಯೋಜನೆಯಡಿ 4.5 ಲಕ್ಷ ಅರ್ಜಿಗಳು ಬಾಕಿ ಇದ್ದವು. ಕಳೆದ ಒಂದೂವರೆ ವರ್ಷದಲ್ಲಿ 2.5 ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ. ಇನ್ನುಳಿದ ಪಂಪ್ ಸೆಟ್ ಗಳನ್ನು ಮುಂದಿನ ಒಂದು ವರ್ಷದೊಳಗೆ ಸಕ್ರಮಗೊಳಿಸಲಾಗುವುದು. ವಿದ್ಯುತ್ ಫೀಡರ್ ಗಳಿಂದ 500 ಮೀಟರ್ ಗಿಂತ ಹೆಚ್ಚು ದೂರದಲ್ಲಿರುವ ಪಂಪ್ ಸೆಟ್ ಗಳನ್ನು ಸೌರೀಕರಣಗೊಳಿಸಲು ಆದ್ಯತೆ ನೀಡಲಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರದ ಸಬ್ಸಿಡಿಯನ್ನು ಶ. 50ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರಶೇ. 30ರಷ್ಟು ಸಬ್ಸಿಡಿ ನೀಡುತ್ತಿದ್ದು, ರೈತರು ಶೇ. 20ರಷ್ಟು ಮೊತ್ತ ಭರಿಸಿದರೆ ಸಾಕು ಎಂದರು.
ಟ್ರಾನ್ಸ್ ಫಾರ್ಮರ್ ಗಳಲ್ಲಿ ಸಮಸ್ಯೆ ಉದ್ಭವವಾದರೆ ತಕ್ಷಣ ಅದನ್ನು ಬದಲಾಯಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ 213 ಟ್ರಾನ್ಸ್ ಫಾರ್ಮರ್ ಗಳು ಲಭ್ಯವಿದೆ. ಜತೆಗೆ ವಿದ್ಯುತ್ ಕಂಬಗಳು, ಕಂಡಕ್ಟರ್ ಗಳನ್ನು ಕೂಡ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದೆ ಎಂದರು.
ನಲಮಂಗಲ ನಗರದಲ್ಲಿ ವಿದ್ಯುತ್ ತಂತಿಗಳನ್ನು ಭೂಗತವಾಗಿ ಅಳವಡಿಸಬೇಕು ಎಂಬ ಶಾಸಕ ಎನ್.ಶ್ರೀನಿವಾಸ್ ಅವರ ಮನವಿಗೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಯೋಜನೆ ರೂಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹೊಸಕೋಟೆ ತಾಲೂಕಿನಲ್ಲಿ ಕುಸುಮ್-ಸಿ ಯೋಜನೆಯಡಿ ಕೆರೆಗಳ ಅಂಗಳಗಳಲ್ಲಿ ನಡೆಯುತ್ತಿರುವ ಫೀಡರ್ ಸೌರೀಕರಣ ಕಾಮಗಾರಿಗಳನ್ನು ತ್ವರಿತವಗಿ ಪೂರ್ಣಗೊಳಿಸೇಕು ಎಂಬ ಶಾಸಕ ಶರತ್ ಬಚ್ಚೇಗೌಡ ಅವರ ಮನವಿಗೆ ಪ್ರತಿಕ್ರಿಯಿಸಿ, ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಭೆಯಲ್ಲಿ ಬೆಂಗಳೂರು ಗ್ರಮಾಂತರ ಜಿಲ್ಲಾ ಉಸ್ತುವಾರಿಯೂ ಆಗಿರುವ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕರಾದ ಶರತ್ ಬಚ್ಚೇಗೌಡ, ಎನ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಬಯಪಾ ಅಧ್ಯಕ್ಷ ಶಾಂತಕುಮಾರ್, ಗ್ಯಾರಂಟಿಗಳ ಅನುಷ್ಟಾನ ಸಮಿತಿ ಅಧ್ಯಕ್ಷ ರಾಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.