ಚಾಮರಾಜನಗರಕ್ಕೆ 2024ರ ವರ್ಷ ಹಲವು ಸಿಹಿ, ಕೆಲವು ಕಹಿ; ಗಡಿಜಿಲ್ಲೆಯ ಹಿನ್ನೋಟ ಹೇಗಿದೆ ನೋಡಿ

Chamarajanagar District: ಚಾಮರಾಜನಗರ ಜಿಲ್ಲೆಯ ಪಾಲಿಗೆ 2024ರ ವರ್ಷವು ಸಿಹಿ ಕಹಿ ಘನೆಗಳ ಹೂರಣವಾಗಿತ್ತು. ಅತಿವೃಷ್ಟಿ ಅನಾವೃಷ್ಟಿ ಎರಡಕ್ಕೂ ಜಿಲ್ಲೆ ಸಾಕ್ಷಿಯಾಯಿತು. ಈ ವರ್ಷ ಗಡಿ ಜಿಲ್ಲೆಯಲ್ಲಿ ಆಗಿದ್ದೇನು ಅನ್ನೋದರ ಹಿನ್ನೋಟ ಇಲ್ಲಿದೆ ನೋಡಿ...

Written by - Puttaraj K Alur | Last Updated : Dec 31, 2024, 05:20 PM IST
  • ಚಾಮರಾಜನಗರ ಜಿಲ್ಲೆಯ ಪಾಲಿಗೆ 2024 ಸಿಹಿ ಕಹಿ ಘನೆಗಳ ಹೂರಣವಾಗಿತ್ತು
  • ಗಡಿ ಜಿಲ್ಲೆಯಲ್ಲಿ ಅನೇಕ ಏರಿಳಿತಗಳು ಘಟಿಸಿದ್ದು, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲೂ ಇದು ಸಂಭವಿಸಿದೆ
  • 2024ರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಆಗಿದ್ದೇನು ಅನ್ನೋದರ ಹಿನ್ನೋಟ ಇಲ್ಲಿದೆ ನೋಡಿ
ಚಾಮರಾಜನಗರಕ್ಕೆ 2024ರ ವರ್ಷ ಹಲವು ಸಿಹಿ, ಕೆಲವು ಕಹಿ; ಗಡಿಜಿಲ್ಲೆಯ ಹಿನ್ನೋಟ ಹೇಗಿದೆ ನೋಡಿ title=
ಚಾಮರಾಜನಗರ ಹಿನ್ನೋಟ

Chamarajanagar District: ಗಡಿಜಿಲ್ಲೆ ಚಾಮರಾಜನಗರಕ್ಕೆ 2024ರ ವರ್ಷ ಹಲವು ಸಿಹಿ, ಕೆಲವು ಕಹಿ ಉಂಟಾಗಿದೆ. ಈ ವರ್ಷ ದಾಖಲೆಗಳ ಗರಿಯನ್ನು ಹೊತ್ತುತಂದಿತ್ತು. ವಿಶ್ವದ ಅತಿದೊಡ್ಡ ಚುನಾವಣೆಯಾದ ಲೋಕಸಭಾ ಅಖಾಡದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಜೊತೆಗೆ ಮತಗಟ್ಟೆಯ ಧ್ವಂಸ ಮಾಡಿದ ಕಹಿ ಪ್ರಸಂಗವೂ ಜರುಗಿತು.

ʼಕೈʼ ವಶವಾದ ಕಮಲ ಕ್ಷೇತ್ರ: ಚಾಮರಾಜನಗರ ಲೋಕಸಭಾ ಕ್ಷೇತ್ರದ 2019ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು. ಸಿಎಂ ಸಿದ್ದರಾಮಯ್ಯರ ಸ್ವಕ್ಷತ್ರವೂ ಚಾಮರಾಜನಗರ ಕ್ಷೇತ್ರಕ್ಕೆ ಒಳಪಡಲಿದ್ದು, 2024ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸುನಿಲ್ ಬೋಸ್ ದಾಖಲೆಯ ಮತ ಪಡೆದು ಜಯಭೇರಿ ಬಾರಿಸುವ ಮೂಲಕ ಚಾಮರಾಜನಗರ ʼಕೈʼ ವಶವಾಯಿತು.

ಮತಗಟ್ಟೆ ಧ್ವಂಸ: ಮೂಲಸೌಕರ್ಯಕ್ಕೆ ಒತ್ತಾಯಿಸಿ ಮತದಾನ ಬಹಿಷ್ಕಾರ ಮಾಡಿದ್ದ ಹನೂರು ತಾಲೂಕಿನ ಇಂಡಿಗನತ್ತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮತಗಟ್ಟೆಯನ್ನೇ ಧ್ವಂಸ ಮಾಡಲಾಗಿತ್ತು. ಜನತಂತ್ರದ ಹಬ್ಬದಲ್ಲಿ ಇಂಡಿಗನತ್ತ ಪ್ರಕರಣ ದೇಶದಲ್ಲಿ ಸದ್ದು ಮಾಡಿತ್ತು. ಬಳಿಕ ಮರು ಚುನಾವಣೆ ನಡೆಯಿತು.

ಗಜ ಗಣತಿ, ಕಾಡಿಗೆ ಬೆಂಕಿ, ದಾಖಲೆ ಗರಿ: 2024ರಲ್ಲಿ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಗಜ ಗಣತಿ ನಡೆಯಿತು. ಚಾಮರಾಜನಗರದ ಬಂಡೀಪುರ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮದಲ್ಲಿ ಮೂರು ದಿನ ಗಜಗಣತಿ ನಡೆಯಿತು. ಬಂಡೀಪುರದಲ್ಲಿ ಅತ್ಯಧಿಕ ಆನೆಗಳಿರುವ ಹುಲಿ ಸಂರಕ್ಷಿತ ಪ್ರದೇಶವೆಂಬ ಗರಿಮೆಗೆ ಪಾತ್ರವಾಯಿತು. ಜೊತೆಗೆ ದೇಶದಲ್ಲೇ ಎರಡನೇ ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶ ಎಂಬ ಕೀರ್ತಿಗೂ ಬಂಡೀಪುರ 2024ರಲ್ಲಿ ಪಾತ್ರವಾಯಿತು. ಬಂಡೀಪುರದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಮತ್ತು ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ವಿದ್ಯಾರ್ಥಿ ಮಿತ್ರ ಕಾರ್ಯಕ್ರಮ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿತು.

ಬಿಜೆಪಿಗೆ ಹೊಸ ಹುರುಪು- ʼಕೈʼ ಶಾಸಕಗೆ ನಿಗಮ ಮಂಡಲಿ: ಬಿಜೆಪಿ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ಗುಂಡ್ಲುಪೇಟೆ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅಧಿಕಾರ ಸ್ವೀಕರಿಸುವ ಮೂಲಕ ಗಡಿಜಿಲ್ಲೆ ಬಿಜೆಪಿಯಲ್ಲಿ ಹೊಸ ಹುರುಪು 2024ರಲ್ಲಿ ಕಂಡುಬಂದಿತು. ಇನ್ನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ MSIL ನಿಗಮದ ಅಧ್ಯಕ್ಷರನ್ನಾಗಿ ಸಿಎಂ ಸಿದ್ದರಾಮಯ್ಯನವರು ನೇಮಿಸಿದರು.

ಇದನ್ನೂ ಓದಿ: Daily GK Quiz: ಭಾರತದ ಮೊದಲ ಗಗನಯಾತ್ರಿ ಯಾರು..?, ಬುದ್ಧಿವಂತಿಯಿಂದ ಈ ಪ್ರಶ್ನೆಗೆ ಉತ್ತರಿಸಿ

ಗಣರಾಜ್ಯೋತ್ಸವಕ್ಕೆ ಕವಿಗೆ, ಪದಗ್ರಹಣಕ್ಕೆ ಮಹಿಳಾ ಉದ್ಯಮಿಗೆ ಆಹ್ವಾನ: ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ್ದ ಜೋಗುಳ ಪದ ರಚಿಸಿದ್ದ ಕೊಳ್ಳೇಗಾಲ ನಿವಾಸಿ, ಕವಿ ಮಂಜುನಾಥ್ ಅವರಿಗೆ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಲವದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿತ್ತು. ಕೊರೊನಾ ಸಾಂಕ್ರಾಮಿಕದ ವೇಳೆ ʼಮಲಗು ಕಂದ ಮಲಗು ಕೂಸೆ, ಮಲಗು ನನ್ನ ಜಾಣ ಮರಿಯೇ..ʼ ಎಂಬ  ಜೋಗುಳ ಪದವನ್ನು ರಚಿಸಿದ್ದರು.

ಇನ್ನು ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಚಾಮರಾಜನಗರದ ಮಹಿಳಾ ಉದ್ಯಮಿ ವರ್ಷಾರಿಗೆ ಆಹ್ವಾನ ಕೊಡಲಾಗಿತ್ತು. ಇವರು ಕಸವೆಂದು ಬಿಸಾಡುವ ಬಾಳೆದಿಂಡಿನಿಂದ ಹಲವು ವಸ್ತು ತಯಾರಿಸಿ ಇನ್ನಿತರ ಮಹಿಳೆಯರಿಗೆ ಉದ್ಯೋಗ ನೀಡಿದ್ದರು. ರಾಜ್ಯದ ಕಟ್ಟ ಕಡೆಯ ರೈಲ್ವೆ ನಿಲ್ದಾಣವಾದ ಚಾಮರಾಜನಗರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ʼಅಮೃತ ಭಾರತ ಸ್ಟೇಷನ್ ಯೋಜನೆʼ ವ್ಯಾಪ್ತಿಗೆ ತರಲಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಸದ್ಯ ಕಾಮಗಾರಿ ಭರದಿಂದ ಸಾಗುತ್ತಿತ್ತು ಹೈಟೆಕ್ ಸ್ಪರ್ಶ ಕೊಡಲಾಗುತ್ತಿದೆ.

ಅತಿವೃಷ್ಠಿ-ಅನಾವೃಷ್ಟಿಗೆ ರೈತರು ತತ್ತರ: 2024ರಲ್ಲಿ ಗಡಿಜಿಲ್ಲೆ ರೈತರು ಅತಿವೃಷ್ಠಿ-ಅನಾವೃಷ್ಠಿಗೆ ತತ್ತರಿಸಿದ್ದರು. ಆರಂಭದಲ್ಲಿ ಬರದಿಂದ ಬೆಳೆ ಕಳೆದುಕೊಂಡಿದ್ದ ರೈತರು ಮುಂಗಾರಿನ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾಗಿ ಕೈಗೆ ಬಂದಿದ್ದ ಫಸಲು ಬಾಯಿಗೆ ಬರದಂತಾಗಿತ್ತು. ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ‌.ಎಸ್.ಪಾಟೀಲ್ ನಡಹಳ್ಳಿ ಹಾಗೂ ಉಪಾಧ್ಯಕ್ಷ ರುದ್ರೇಶ್ ನೇತೃತ್ವದಲ್ಲಿ ಚಾಮರಾಜನಗರ ಜಿಲ್ಲೆಯ ಹಲವೆಡೆ ಬರ ಸಮೀಕ್ಷೆ ನಡೆಸಿ ಮಾಹಿತಿ ಕಲೆ ಹಾಕಿದ್ದರು.

ವೀರಪ್ಪನ್ ಕೇಸ್‌ನಲ್ಲಿ ಖುಲಾಸೆ: ವೀರಪ್ಪನ್ ಕೇಸ್‌ಗಳಲ್ಲಿ ಆರೋಪಿಯಾಗಿದ್ದ ಸ್ಟೆಲ್ಲಾ ಮೇರಿ ಎಲ್ಲಾ ಕೇಸ್‌ಗಳಿಂದ ಖುಲಾಸೆಗೊಂಡರು‌. ವೀರಪ್ಪನ್ ಗ್ಯಾಂಗಿನಲ್ಲಿ ಗುರುತಿಸಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಸ್ಟೆಲ್ಲಾ ಮೇರಿ ಆರೋಪ ಮುಕ್ತರಾದರು. ಚಾಮರಾಜನಗರ ಬಾಲನ್ಯಾಯ ಮಂಡಲಿಯು ಸ್ಟೆಲ್ಲಾ ಮೇರಿ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳಿಂದ ಖುಲಾಸೆಗೊಳಿಸಿತು.

ಅಗಲಿದ ನೇತಾರರು: 5 ದಶಕಗಳ ಸುದೀರ್ಘ ಸಕ್ರಿಯ ರಾಜಕಾರಣದಲ್ಲಿದ್ದು, 2024ರ ಮಾರ್ಚ್‌ನಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದ ವಿ.ಶ್ರೀನಿವಾಸಪ್ರಸಾದ್ ವಯೋಸಹಜ ಖಾಯಿಲೆಗಳಿಂದ ಇಹಲೋಕ ತ್ಯಜಿಸಿದರು‌.

1974ರ ಉಪ ಚುನಾವಣೆಯಿಂದ 2019ರ ಲೋಕಸಭಾ ಚುನಾವಣೆ ತನಕ‌ ಒಟ್ಟು 14 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.‌ ಇದರಲ್ಲಿ‌ 6 ಬಾರಿ ಲೋಕಸಭಾ ಚುನಾವಣೆ ಮತ್ತು ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಚುನಾವಣೆಯಲ್ಲಿ ಸೋಲು-ಗೆಲುವು ಕಂಡಿದ್ದರೂ ಎಂದಿಗೂ ಅವರು ಧೃತಿಗೆಡದೇ ಡಾ.ಬಿ.ಆರ್‌.ಅಂಬೇಡ್ಕರ್ ಚಿಂತನೆ, ದಲಿತಪರ ಹೋರಾಟದ ಮುಖ್ಯ ಧ್ವನಿಯಾಗಿದ್ದರು. ಇನ್ನು ಕೊಳ್ಳೇಗಾಲದ ಮಾಜಿ ಶಾಸಕ ಎಸ್.ಜಯಣ್ಣ ಹೃದಯಾಘಾತದಿಂದ ಕೊನೆಯುಸಿರೆಳೆದರು. ನೂತನ ಗೃಹ ಪ್ರವೇಶದ ಸಡಗರದಲ್ಲಿದ್ದ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಜಯಣ್ಣ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಕಂಪ್ಯೂಟರ್ ತರಬೇತಿ ಪಡೆದ ಜೈಲು ಹಕ್ಕಿಗಳು: ಕಾರಾಗೃಹ ಬಂಧಿಗಳಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡುವ ರಾಜ್ಯದಲ್ಲಿಯೇ ಮೊದಲು ಎನಿಸಿರುವ ವಿನೂತನ ಅರ್ಥಪೂರ್ಣ ಕಾರ್ಯಕ್ರಮ ಚಾಮರಾಜನಗರ ಜಿಲ್ಲೆಯಲ್ಲಿ ಯಶಸ್ಸು ಕಂಡಿತು. ಚಾಮರಾಜನಗರದ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂಧಿಗಳಿಗೆ ಅಲ್ಲಿಯೇ ಕಂಪ್ಯೂಟರ್ ತರಬೇತಿ ನೀಡಿ ಅವರು ಬಿಡುಗಡೆಗೊಂಡ ಬಳಿಕ ಬದುಕು ಕಟ್ಟಿಕೊಳ್ಳಲು ನೆರವಾಗಲಿ ಎಂಬ ಉದ್ದೇಶದಿಂದ ಕಂಪ್ಯೂಟರ್ ತರಬೇತಿ ನೀಡಲು ಯೋಚಿಸಿ ಮೈಸೂರಿನ ಇನ್‍ಫೋಸಿಸ್ ರೋಟರಿ ಪಂಚಶೀಲ ಸಂಸ್ಥೆಗಳೊಂದಿಗೆ PSR ನೆರವಿನೊಂದಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ತರಬೇತಿಗೆ ಈ ಹಿಂದೆ ಚಾಲನೆ ಕೊಟ್ಟು ಹಲವರು ಕೋರ್ಸ್ ಮುಗಿಸಿ ಸರ್ಟಿಫಿಕೇಟ್ ಪಡೆಯುವ ಮೂಲಕ ಬದಲಾವಣೆ ತಂದರು.

ರಥೋತ್ಸವ ಸಡಗರ- ಚಿಕ್ಕಲ್ಲೂರಲ್ಲಿ ಭರ್ಜರಿ ಬಾಡೂಟ: 2024 ರಲ್ಲಿ ಜಿಲ್ಲೆಯಾದ್ಯಂತ ವಿವಿಧ ರಥೋತ್ಸವಗಳು ಸಡಗರ-ಸಂಭ್ರಮದಿಂದ ನಡೆಯಿತು. ಚಾಮರಾಜೇಶ್ವರ ರಥೋತ್ಸವ, ಬಿಳಿಗಿರಿರಂಗನಾಥ, ಹಿಮವದ್ ಗೋಪಾಲಸ್ವಾಮಿ, ಕಂದೇಗಾಲದ ಪಾರ್ವತಾಂಭ, ಮಲೆ ಮಹದೇಶ್ವರನ ರಥೋತ್ಸವಗಳು ಅದ್ಧೂರಿಯಾಗಿ ನೆರವೇರಿತು. ಅದ್ಧೂರಿ ದಸರಾ ನಡೆದ ಪರಿಣಾಮವಾಗಿ ಜಿಲ್ಲಾ ದಸರಾವೂ ಈ ಬಾರಿ ಕಳೆಗಟ್ಟಿತ್ತು. ಪಂಕ್ತಿಸೇವೆಗೆ ಹೆಸರಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ನಿಷೇಧದ ಹೊರತಾಗಿಯೂ ಭಕ್ತರು ಭಕ್ತಿ ಮೆರೆದರು. ಭರ್ಜರಿ ಬಾಡೂಟ ತಯಾರಿಸಿ ನೂರಾರು ವರ್ಷದ ಸಂಪ್ರದಾಯವಾದ ಪಂಕ್ತಿಸೇವೆಯನ್ನು ನಡೆಸಿದರು.

ಬೆಚ್ಚಿ ಬೀಳಿಸಿದ ಆತ್ಮಹತ್ಯೆಗಳು: ಚಾಮರಾಜನಗರ ಜಿಲ್ಲೆಯ ಕೆಲವು ಆತ್ಮಹತ್ಯೆ ಪ್ರಕರಣಗಳು ಬೆಚ್ಚಿ ಬೀಳಿಸಿದವು‌. ಸಾಲಬಾಧೆಯಿಂದ ಗುಂಡ್ಲುಪೇಟೆ ರೈತ, ಪಿಯು ಕಾಲೇಜಿಗೆ ಸೀಟ್ ಸಿಗಲಿಲ್ಲವೆಂದು ಚಾಮರಾಜನಗರದ ವಿದ್ಯಾರ್ಥಿನಿ ನೇಣಿಗೆ ಕೊರಳೊಡ್ಡಿದ್ದರು. ಯುವಕನ ಕಾಟದಿಂದ ಬೇಸತ್ತ ಮೈಸೂರಿನ ಕುಟುಂಬವೊಂದು ಸಾಮೂಹಿಕವಾಗಿ ಮಲೆ‌ ಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ಮೃತಪಟ್ಟಿದ್ದರು. ತಾಯಿಯೊಬ್ಬಳು ತನ್ನ ಎರಡು ಮಕ್ಕಳ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊರೆಯಾಲ ಗ್ರಾಮದಲ್ಲಿ ನಡೆದಿತ್ತು. 
ಕೊಳ್ಳೇಗಾಲದಲ್ಲಿ ಸಾಲಬಾಧೆಗೆ ಬೇಸತ್ತು ದಂಪತಿ ನೇಣಿಗೆ ಕೊರಳೊಡ್ಡಿದ್ದರು.

ಚಲಿಸುತ್ತಿದ್ದ ಬಸ್‌ಗೆ ವ್ಯಕ್ತಿಯೋರ್ವ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಚಾಮರಾಜನಗರದ KSRTC ಬಸ್ ನಿಲ್ದಾಣದ ಮುಂಭಾಗ ನಡೆದಿತ್ತು. 34 ವರ್ಷದ ವ್ಯಕ್ತಿಯೋರ್ವ ಚಲಿಸುತ್ತಿದ್ದ ಬಸ್‌ನ ಹಿಂಬದಿ ಚಕ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಸಿ.ಪಿ.ಯೋಗೇಶ್ವರ್ ಅವರ ಮಾವನನ್ನು ಅಪಹರಿಸಿ ಕೊಲೆ ಮಾಡಿ ಹನೂರು ತಾಲೂಕಿನ ರಾಮಾಪುರದ ರಸ್ತೆ ಸಮೀಪದ ಕಮರಿಗೆ ದುಷ್ಕರ್ಮಿಗಳು ಬಿಸಾಡಿದ್ದರು. 2024ರಲ್ಲಿ ಪೋಸ್ಕೊ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತಾರು ಮಂದಿಗೆ ಶಿಕ್ಷೆ ಕೂಡ ಪ್ರಕಟವಾಗಿತ್ತು. ಸುಳ್ವಾಡಿ ವಿಷ ಪ್ರಸಾದ ದುರಂತದ ಮೊದಲನೇ ಆರೋಪಿ ಇಮ್ಮಡಿ ಮಹಾದೇವಸ್ವಾಮಿಗೆ ಜಿಲ್ಲಾ ನ್ಯಾಯಾಲಯ ಎರಡನೇ ಬಾರಿ ಜಾಮೀನು ನಿರಾಕರಿಸಿತ್ತು.

ಇದನ್ನೂಓದಿ: ಹೊಸ ವರ್ಷ ಸಂಭ್ರಮಾಚರಣೆ ಬಳಿಕ ನಶೆ ಏರಿಸಿ ವಾಹನ ಚಲಾಯಿಸುವ ಅಗತ್ಯವಿಲ್ಲ ! ಒಂದು ಕರೆ ಮಾಡಿದರೆ ಸಾಕು ಪಿಕ್ ಮಾಡಲು ಬರುತ್ತದೆ ಫ್ರೀ ಕ್ಯಾಬ್, ಬೈಕ್ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News