ಮಹದಾಯಿ ವಿವಾದ ಬಗೆಹರಿಸುವ ಇಚ್ಛಾಶಕ್ತಿ ನಮ್ಮ‌ ಪ್ರಧಾನಿಗಳಲ್ಲಿ ಇಲ್ಲ- ಸಿದ್ಧರಾಮಯ್ಯ

ಮಹದಾಯಿ ವಿವಾದದ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮಹದಾಯಿ ವಿವಾದವನ್ನು ಬಗೆಹರಿಸುವ ಇಚ್ಛಾಶಕ್ತಿಯೇ ನಮ್ಮ‌ ಪ್ರಧಾನಿಗಳಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Last Updated : Jan 9, 2020, 09:29 PM IST
ಮಹದಾಯಿ ವಿವಾದ ಬಗೆಹರಿಸುವ ಇಚ್ಛಾಶಕ್ತಿ ನಮ್ಮ‌ ಪ್ರಧಾನಿಗಳಲ್ಲಿ ಇಲ್ಲ- ಸಿದ್ಧರಾಮಯ್ಯ    title=

ಬೆಂಗಳೂರು: ಮಹದಾಯಿ ವಿವಾದದ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮಹದಾಯಿ ವಿವಾದವನ್ನು ಬಗೆಹರಿಸುವ ಇಚ್ಛಾಶಕ್ತಿಯೇ ನಮ್ಮ‌ ಪ್ರಧಾನಿಗಳಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

"ಪ್ರಧಾನಿ ನರೇಂದ್ರ ಮೋದಿ ಅವರು ಈಗಲೂ ಮನಸ್ಸು ಮಾಡಿದರೆ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಮಹದಾಯಿ ವಿವಾದವನ್ನು ನ್ಯಾಯಾಧೀಕರಣದ ಹೊರಗೆ ಬಗೆಹರಿಸಬಹುದು. ಆದರೆ ಈ ಇಚ್ಛಾಶಕ್ತಿಯೇ ನಮ್ಮ‌ ಪ್ರಧಾನಿಗಳಲ್ಲಿ ಇಲ್ಲ.ಮಹದಾಯಿ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ ಒಂದೇ ಒಂದು ಮಾತಾದರೂ ಈಡೇರಿದೆಯೇ? ಎಂದು ಅವರು ಪ್ರಶ್ನಿಸಿದರು.

ಇದೇ ವೇಳೆ ದೇಶದಲ್ಲಿ ನಡೆಯುತ್ತಿರುವ ಪೌರತ್ವ ಕಾಯ್ದೆ ವಿವಾದ ಕುರಿತಾಗಿ ಮಾತನಾಡಿದ ಸಿದ್ಧರಾಮಯ್ಯ 'ಸಿಎಎ ಹಾಗೂ ಎನ್‌ಆರ್‌ಸಿ ಇವು ಅಸಂವಿಧಾನಿಕವಾದುವು, ಹಾಗಾಗಿ ಬಿಜೆಪಿ ಪಕ್ಷ ತಾವು ಮಾಡುತ್ತಿರುವ ತಪ್ಪಿಗೆ ಜನಬೆಂಬಲ ಪಡೆದು, ಅದನ್ನೇ ಸರಿ ಎಂದು ಸಾಬೀತುಪಡಿಸಲು ಸಾರ್ವಜನಿಕ ಸಭೆ, ಸಮಾರಂಭ ಮಾಡುತ್ತಿದೆ. ಈ ಕಾಯ್ದೆಯಿಂದಾಗಿ ಸಂವಿಧಾನದ ಮೂಲ ಆಶಯಗಳಾದ ಸಮಾನತೆ ಮತ್ತು ಜಾತ್ಯಾತೀತತೆಗೆ ಧಕ್ಕೆಯಾಗಲಿದೆ 'ಎಂದರು.'ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ತಿಕ್ಕಿ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿದೆ. ದೇಶಾದ್ಯಂತ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕರ ಮೇಲೆ ಸರ್ಕಾರಿ ಪ್ರಯೋಜಿತ ದಾಳಿಗಳು ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ. ಜನತೆ ಭಯದಲ್ಲಿ ದಿನ ದೂಡುವಂತಹ ಪರಿಸ್ಥಿತಿ ಇದೆ ಎಂದು ದೂರಿದರು.

ರಾಜ್ಯಕ್ಕೆ ಕೇಂದ್ರದಿಂದ ಬರದಿರುವ ಪರಿಹಾರದ ವಿಚಾರವಾಗಿ ಗಮನ ಸೆಳೆದ ಅವರು 'ಹಿಂಗಾರು ಮಳೆ ನಷ್ಟದಿಂದಾಗಿ ಸುಮಾರು 45 ತಾಲೂಕುಗಳು ಭೀಕರ ಬರ ಎದುರಿಸುತ್ತಿವೆ. ಈವರೆಗೆ ಬರಪರಿಹಾರಕ್ಕಾಗಿ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ. ರಾಜ್ಯದ ಪಾಲಿನ ಹಲವು ಅನುದಾನಗಳು ಬಂದಿಲ್ಲ.ಕೇಂದ್ರ ತಾನು ದಿವಾಳಿಯಾಗುವ ಜೊತೆಗೆ ರಾಜ್ಯಗಳನ್ನು ದಿವಾಳಿ ಎಬ್ಬಿಸುತ್ತಿದೆ.ಮುಂದಿನ ವರ್ಷದಲ್ಲಿ ನಮ್ಮ ರಾಜ್ಯದಿಂದ ಸಂಗ್ರಹವಾದ ವಿವಿಧ ತೆರಿಗೆಗಳಲ್ಲಿ ರಾಜ್ಯದ ಪಾಲಿನ ಅನುದಾನ ಕನಿಷ್ಠ ರೂ.5000 ಕೋಟಿ ಕಡಿತವಾಗಲಿದೆ. ಹೀಗಾದರೆ ಅಭಿವೃದ್ಧಿ ಕಾರ್ಯಗಳು ನಡೆಯುವುದಾದರೂ ಹೇಗೆ? ನನ್ನದೇ ಕ್ಷೇತ್ರದಲ್ಲಿ ಸಂಪುಟ ಅನುಮೋದನೆ ಪಡೆದ ರೂ.500 ಕೋಟಿ ವೆಚ್ಚದ ಕೆರೂರು ಏತ ನೀರಾವರಿ ಯೋಜನೆ ಹಣವಿಲ್ಲದೆ ಮೂಲೆಸೇರಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

 

Trending News