ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಶಿವಕುಮಾರ್ ಅವರು ಶನಿವಾರ ಮಾತನಾಡಿದರು.
“ಪಾಪ ಕುಮಾರಸ್ವಾಮಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಹಾಗೂ ಇಲ್ಲಿರುವ ಕೆಲವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದೆವು. ಇದು ಕನಕಪುರ ಲೋಕಸಭಾ ಕ್ಷೇತ್ರ ಇತ್ತು. ನಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇದನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಂದು ಮಾಡಿದೆವು. ಈಗ ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಲು ಮುಂದಾಗಿದ್ದು, ಇದನ್ನು ಮಾಡಬಾರದು ಎಂದು ಕೇಂದ್ರ ಸರ್ಕಾರದ ಬಳಿ ಕುಮಾರಸ್ವಾಮಿ ಅರ್ಜಿ ಹಾಕಿದ್ದಾರೆ. ಅವರು ಏನಾದರೂ ಮಾಡಲಿ, ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿಯೇ ಮಾಡುತ್ತೇವೆ. ಅದಕ್ಕೆ ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ” ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದವರಿಗೆಲ್ಲಾ ಸ್ಥಾನಮಾನ ನೀಡಿದ್ದೇವೆ
“ರಾಮಕೃಷ್ಣ ಹೆಗಡೆ ಅವರು ಇಲ್ಲಿಂದ ಚುನಾವಣೆ ಸ್ಪರ್ಧಿಸಿ ಮುಖ್ಯಮಂತ್ರಿಯಾಗಿದ್ದರು. ಟಿಎಪಿಸಿಎಂಎಸ್ ಚುನಾವಣೆ ನಡೆಯಿತು. ಸಾತನೂರು ಕ್ಷೇತ್ರದಿಂದ ನಾನು, ಕನಕಪುರ ಕ್ಷೇತ್ರದಿಂದ ಕಂಠಿ ಅವರು ಸ್ಪರ್ಧಿಸಿದ್ದೆವು. ಆಗ ರಾತ್ರೋರಾತ್ರಿ ಕಾಂಗ್ರೆಸ್ ಜಾಗ ಅತಿಕ್ರಮಣ ಮಾಡಿ ಕಟ್ಟಡ ಕಟ್ಟಿಕೊಂಡಿದ್ದರು. ಸಿಂಧ್ಯಾ ಅವರು ಮಂತ್ರಿಯಾಗಿ, ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದರು. ಆಗ ಅದನ್ನು ಮುಟ್ಟಲು ಆಗುತ್ತಿರಲಿಲ್ಲ. ಆಗ ನಾವಿಬ್ಬರೂ ಗೆದ್ದಿದ್ದೆವು. ಆನಂತರ ನಾನು ಸಹಕಾರ ಸಚಿವನಾದೆ, ನೀರಾವರಿ ಸಚಿವನಾದೆ, ಇಂದು ಡಿಸಿಎಂ ಆಗಿದ್ದೇನೆ. ಪಕ್ಷದ ಅಧ್ಯಕ್ಷನೂ ಆಗಿದ್ದೇನೆ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ಶ್ರಮ ಇದ್ದಲ್ಲಿ ಫಲ ಇದೆ. ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರದಲ್ಲಿ ಬ್ಲಾಕ್ ಅಧ್ಯಕ್ಷರಾಗಿದ್ದವರಿಗೆ ಒಂದಲ್ಲಾ ಒಂದು ಹುದ್ದೆ ನೀಡಿದ್ದೇವೆ” ಎಂದರು.
ಯಾರು ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ
“ನಿಮಗೆ ನೀಡಿರುವ ಸ್ಥಾನಮಾನ ಕಡಿಮೆ ಎಂದು ಭಾವಿಸಬೇಡಿ. ಇಲ್ಲಿ ಆಶ್ರಯ ಸಮಿತಿ ಹಾಗೂ ಬಗರ್ ಹುಕ್ಕುಂ ಸಮಿತಿ ಜವಾಬ್ದಾರಿಯನ್ನು ಸುರೇಶ್ ಅವರಿಗೆ ವಹಿಸಿದ್ದೇವೆ. ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು ನ್ಯಾಯಬದ್ಧವಾಗಿ ಬಡವರಿಗೆ ಸಿಗಬೇಕು ಎಂದು ಈ ತೀರ್ಮಾನ ಮಾಡಲಾಗಿದೆ. ನಿಮಗೆ ನೀಡಿರುವ ಜವಾಬ್ದಾರಿಯನ್ನು ಗೌರವಯುತವಾಗಿ ನಿಭಾಯಿಸಿ. ನೀವೆಲ್ಲರೂ ಸೇರಿ ಯೋಗೇಶ್ವರ್ ಅವರ ಪರವಾಗಿ ಚುನಾವಣೆ ಮಾಡಿದ್ದೀರಿ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ. ಇದು ರಾಜಕಾರಣ. ನಾವು ಒಗ್ಗಟ್ಟಿನಿಂದ ಜನರ ಆಶೋತ್ತರಗಳಿಗೆ ಕೆಲಸ ಮಾಡಬೇಕು” ಎಂದರು.
ಜಿಲ್ಲೆಯ ಜನ ಸ್ಮರಿಸುವಂತೆ ನಾವು ಕೆಲಸ ಮಾಡಬೇಕು
“ಇಲ್ಲಿ ಬಾಲಕೃಷ್ಣ, ಯೋಗೇಶ್ವರ್, ಇಕ್ಬಾಲ್ ಹುಸೇನ್ ಇದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 100 ಎಕರೆ ಪ್ರದೇಶದಲ್ಲಿ ಬಡವರಿಗೆ ನಿವೇಶನ ಹಂಚುವ ಕೆಲಸ ಮಾಡಬೇಕು ಎಂದು ಈ ಮೂವರು ಶಾಸಕರಿಗೆ ಹೇಳುತ್ತೇನೆ. ಸರ್ಕಾರಿ ಜಮೀನಿನಲ್ಲಿ ಅಥವಾ ಖಾಸಗಿ ಜಮೀನು ಖರೀದಿ ಮಾಡಿ ಆ ಕೆಲಸ ಮಾಡಲೇಬೇಕು. ನಮ್ಮ ಕಾಲ ಇಂತಹ ಕೆಲಸ ಆಯಿತು ಎಂದು ನಾವು ಕುಮಾರಸ್ವಾಮಿ ಅವರಿಗೆ ಹೇಳಬೇಕು.
ನಮ್ಮ ಜನ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು ಎಂದು ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಇಂದು ಬೆಳಗ್ಗೆ ಎರಡು ಕಡೆಗಳಲ್ಲಿ ಪ್ರೆಸ್ಟೀಜ್ ಹಾಗೂ ಟೊಯೋಟಾ ಸಂಸ್ಥೆಗಳಿಂದ ಶಾಲಾ ಕಟ್ಟಡ ನಿರ್ಮಿಸುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ರಾಜ್ಯಕ್ಕೆ ಮಾದರಿಯಾಗುವಂತೆ ಈ ತೀರ್ಮಾನ ಮಾಡಿದ್ದೇವೆ. ರಾಜ್ಯದಲ್ಲಿ ಈ ರೀತಿ 2 ಸಾವಿರ ಶಾಲೆ ನಿರ್ಮಿಸುವ ಘೋಷಣೆ ಮಾಡಿದ್ದು, ಅದಕ್ಕೆ ಹೊಸ ರೂಪ ನೀಡುತ್ತಿದ್ದೇವೆ” ಎಂದು ತಿಳಿಸಿದರು.
ಜಿಲ್ಲೆಯ ಯೋಜನೆಗಳ ಬಗ್ಗೆ ಶೀಘ್ರದಲ್ಲಿ ಸಭೆ
“ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ, ರಾಮನಗರಕ್ಕೆ ಯಾವ ನೀರಾವರಿ ಯೋಜನೆ ಮಾಡಬೇಕು ಎಂದು ಗೊತ್ತಿದೆ. ಎಷ್ಟೇ ಕಷ್ಟ ಆದರೂ ನಮ್ಮ ಅವಧಿಯಲ್ಲಿ ಜಿಲ್ಲೆಯ ಕೆರೆಗಳನ್ನು ತುಂಬಿಸಿ ನಮ್ಮ ಜನ ಇಲ್ಲೇ ಬದುಕು ಕಟ್ಟಿಕೊಳ್ಳಲು ಕಾರ್ಯಕ್ರಮ ರೂಪಿಸಿದ್ದೇವೆ. ಅತ್ಯಾಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ನೀವು ವ್ಯವಸಾಯ ಮಾಡಿ ಬದುಕು ಕಟ್ಟಿಕೊಳ್ಳಬಹುದು. ಹುಬ್ಬಳ್ಳಿ, ಧಾರವಾಡ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದಾರೆ. ಕನಕಪುರದಲ್ಲಿ ಮಾಡಿರುವ ಹಾಲಿನ ಡೈರಿ ಅಮೂಲ್ ಡೈರಿ ಮಾದರಿಯಲ್ಲಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕೆಲಸ ಮಾಡಿ ನಾವು ವಿರೋಧ ಪಕ್ಷದವರಿಗೆ ತೋರಿಸುವುದಕ್ಕಿಂತ ನಮ್ಮ ಆತ್ಮಸಾಕ್ಷಿಗೆ ತೃಪ್ತಿಪಡಿಸುವಂತೆ ಮಾಡಬೇಕು. ಗ್ಯಾರಂಟಿ ಯೋಜನೆಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸರಾಸರಿ ವರ್ಷಕ್ಕೆ 250 ಕೋಟಿ ಹಣ ಹೋಗುತ್ತಿದೆ.
ಈ ಜಿಲ್ಲೆಯಲ್ಲಿ ಆಗಬೇಕಿರುವ ಕಾರ್ಯಗಳ ಬಗ್ಗೆ ಚರ್ಚೆ ಮಾಡಲು ಬಜೆಟ್ ಮಂಡನೆಯಾಗುವುದರೊಳಗೆ ಅಧಿಕಾರಿಗಳು ಹಾಗೂ ರಾಮಲಿಂಗಾ ರೆಡ್ಡಿ ಅವರು ಚರ್ಚೆ ಮಾಡುತ್ತೇನೆ. ಮುಂದಿನ ಚುನಾವಣೆ ವೇಳೆಗೆ ನಮ್ಮ ಜನ ನಮ್ಮ ಕೆಲಸಗಳನ್ನು ಗುರುತಿಸಬೇಕು. ಈ ಭಾಗದ ಲೋಕಸಭಾ ಕ್ಷೇತ್ರದಲ್ಲಿ ಆರ್ ಆರ್ ನಗರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದ್ದು, ಅಲ್ಲಿ ಸಂಘಟನೆಗೆ ಏನು ಮಾಡಬೇಕೋ ಮಾಡುತ್ತಿದ್ದೇವೆ. ನಮಗೆ ಯಾರ ಮೇಲೂ ದ್ವೇಷ ಸಾಧಿಸುವ ಅಗತ್ಯವಿಲ್ಲ. ಕೆಲಸ ಮಾಡಿ ಜನರ ಹೃದಯ ಗೆಲ್ಲಬೇಕು” ಎಂದರು.
ನಿಮ್ಮಲ್ಲಿರುವ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಿ
"ನೀವುಗಳು ಸ್ಥಳೀಯ ಮಟ್ಟದಲ್ಲಿ ಇರುವ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಬೇಕು. ಲೋಕಸಭೆ ಚುನಾವಣೆಯಲ್ಲಿ ಜನರಿಗೆ ಸುರೇಶ್ ಮೇಲೆ ಬೇಸರವಾಗಿ ಸೋಲಾಗಿಲ್ಲ. ನಿಮ್ಮ ನಿಮ್ಮಲ್ಲಿರುವ ಕೋಪ, ಭಿನ್ನಾಭಿಪ್ರಾಯದಿಂದ ಸೋಲಾಗಿದೆ. ನಾನು ಹಾಗೂ ಯೋಗೇಶ್ವರ್ ಅವರ ಮಧ್ಯೆ ಎಷ್ಟೇ ಜಗಳವಿದ್ದರೂ ಪಕ್ಷ ಮುಖ್ಯ ಎಂದು ನಾವು ಎಲ್ಲವನ್ನು ಮರೆತು ಪಕ್ಷದ ಟಿಕೆಟ್ ನೀಡಿ ಚುನಾವಣೆ ಮಾಡಿದ್ದೇವೆ. ಚುನಾವಣೆಯಲ್ಲಿ ಸೋತ ಬಳಿಕ ನಾನು ಚನ್ನಪಟ್ಟಣವನ್ನು ಬಿಡಲಿಲ್ಲ. ನಮ್ಮ ನಾಯಕರನ್ನು ಹಗಲು ರಾತ್ರಿ ಬಿಡದೇ ಚನ್ನಪಟ್ಟಣದಲ್ಲಿ ಸಂಘಟನೆ ಮಾಡಲಾಯಿತು. ಆಗ ಯೋಗೇಶ್ವರ್ ಅವರಿಗೆ ಈ ಹಸ್ತವೇ ಗ್ಯಾರಂಟಿ ಎಂದು ಅರಿವಾಯಿತು. ಆಗ ಬೇಷರತ್ತಾಗಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ.
ಇಲ್ಲಿರುವ ನಮ್ಮ ನಾಯಕರು ದಿನಾ ಬೆಳಗ್ಗೆ ಬಂದು ವರ್ಗಾವಣೆ ಮಾಡಿಸಲು ಮುಂದಾಗಬೇಡಿ. ಚುನಾವಣೆ ಸಮಯದಲ್ಲಿ ಯಾರೂ ಬರಲಿಲ್ಲ, ಈಗ ಎಲ್ಲರೂ ಹುಡುಕಿಕೊಂಡು ಬರುತ್ತಿದ್ದಾರೆ. ನಿಮ್ಮ ಸ್ವಂತದವರು ಯಾರು, ಬೇರೆಯವರು ಯಾರು ಎಂದು ನಮಗೆ ತಿಳಿಯುತ್ತದೆ. ಇದಕ್ಕೆಲ್ಲ ನೀವು ತಲೆಹಾಕಬೇಡಿ. ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಬೇಕೋ ಮಾಡುತ್ತೇವೆ.
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿರುವವರೂ ಪ್ರತಿ ಬೂತ್ ನಲ್ಲಿ ಡಿಜಿಟಲ್ ಯೂತ್ ನೇಮಿಸಬೇಕು. ಈ ಕಾರ್ಯದದಲ್ಲಿ ಜಿಲ್ಲಾ ಕಾಂಗ್ರೆಸ್ ನವರಿಗೂ ತಿಳಿಸುತ್ತಿದ್ದೇನೆ. ಇಲ್ಲಿ ಆಗುತ್ತಿರುವ ಎಲ್ಲಾ ಕಾರ್ಯಗಳನ್ನು ಪ್ರಚಾರ ಮಾಡಬೇಕು. ಇಲ್ಲಿ ಯಾರೇ ಲಂಚ ಕೇಳಿದರೂ ನನ್ನ ಗಮನಕ್ಕೆ ತರಬೇಕು. ಈ ಜಿಲ್ಲೆಯಲ್ಲಿ ಶುದ್ಧ ಆಡಳಿತ ನಡೆಯಬೇಕು. ಇದಕ್ಕೆ ನಿಮ್ಮ ಸಹಕಾರ ಬೇಕು" ಎಂದು ತಿಳಿಸಿದರು.
ಕುಮಾರಸ್ವಾಮಿ ಅಧಿಕಾರದಲ್ಲಿ ಇದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ:
ಕಾರ್ಯಕ್ರಮದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸತ್ತುಹೋಗಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ನಿನಗೆ ಅಧಿಕಾರ ಇದ್ದಾಗ ನೀನು ಏನು ಮಾಡಿದೆ ಹೇಳಪ್ಪಾ? ಮಂಡ್ಯದಲ್ಲಿ ಗೆದ್ದು ಕೇಂದ್ರದಲ್ಲಿ ದೊಡ್ಡ ಮಂತ್ರಿಯಾಗಿದ್ದೀಯಲ್ಲಾ ಈಗ ನೀನು ಏನು ಮಾಡುತ್ತೀಯಾ ಎಂದು ಮೊದಲ ಹೇಳು. ನೀವು ಏನು ಮಾಡುತ್ತೀರೋ ಮಾಡಿ, ಅದಕ್ಕೆ ಅಗತ್ಯ ಸಹಕಾರ ನಾವು ನೀಡುತ್ತೇವೆ. ನೀವು ಬರೀ ದ್ವೇಷ ರಾಜಕಾರಣ ಮಾಡುತ್ತಿದ್ದೀರಿ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಬಾರದು ಎಂದು ಆಕ್ಷೇಪ ಮಾಡಿದ್ದೀರಿ. ನಿಮ್ಮಂತೆ ನಾವು ದ್ವೇಷ ರಾಜಕಾರಣ ಮಾಡುವುದಿಲ್ಲ. ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ರಾಜ್ಯಕ್ಕೆ ಬಂದು ಏನು ಹೇಳಿದ್ದಾರೆ ಎಂಬುದನ್ನು ತಲೆಯಲ್ಲಿ ಇಟ್ಟುಕೊಳ್ಳಿ” ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿಗೆ ಅಭಿವೃದ್ಧಿಗಿಂತ ದ್ವೇಷ ರಾಜಕಾರಣವೇ ಹೆಚ್ಚು
ಅಭಿವೃದ್ಧಿ ವಿಚಾರವಾಗಿ ಯಾರೂ ನನ್ನನ್ನು ಭೇಟಿ ಮಾಡುತ್ತಿಲ್ಲ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಒಂದೇ ದಿನದಲ್ಲಿ ಮೇಕೆದಾಟು ಯೋಜನೆಗೆ ಮೋದಿ ಅವರಿಂದ ಸಹಿ ಹಾಕಿಸುವುದಾಗಿ ಹೇಳಿದ್ದೆಯಲ್ಲಾ, ಯಾಕೆ ಮಾಡಿಸಿಲ್ಲಾ? ನಮ್ಮ ಸಚಿವ ಎಂ.ಬಿ ಪಾಟೀಲ್ ಅವರ ಬಳಿ ಹೋಗಿ ಬಂಡವಾಳ ಹೂಡಿಕೆದಾರರ ಸಮಾವೇಶದ ಬಗ್ಗೆ ಚರ್ಚೆ ಮಾಡಿಲ್ಲವೇ? ಅವರಿಗೆ ದ್ವೇಷದ ರಾಜಕಾರಣವೇ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿಯಲ್ಲ. ದ್ವೇಷದಿಂದ ಯಾರೂ ಯಾವುದೇ ಸಾಧನೆ ಮಾಡಿಲ್ಲ. ದೊಡ್ಡ ದೊಡ್ಡ ಚಕ್ರವರ್ತಿಗಳೇ ಕೆಳಗೆ ಬಿದ್ದಿದ್ದಾರೆ. ರಾಜಕಾರಣದಲ್ಲಿ ಯಾರೂ ಶಾಶ್ವತವಲ್ಲ” ಎಂದು ಕಿಡಿಕಾರಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.