ಧಾರವಾಡ : ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಮತ್ತು ವಿಷಯಗಳು ಅತ್ಯಧಿಕವಾಗಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇವುಗಳ ಮೂಲಕ ಕಾನೂನುಬಾಹಿರ ಮತ್ತು ಸುಳ್ಳು ಸುದ್ದಿಗಳು ಹರಡುವುದನ್ನು ನಿಯಂತ್ರಿಸಲು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಕೋಶವನ್ನು ಧಾರವಾಡ ಜಿಲ್ಲಾ ಚುನಾವಣಾ ನಿಯಂತ್ರಣ ಕೇಂದ್ರದಲ್ಲಿ ತೆರೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಂರ್ತಜಾಲದಲ್ಲಿ ಪ್ರಕಟಗೊಳ್ಳುವ ಸುದ್ದಿಗಳು, ಪ್ರಸಕ್ತ ವಿದ್ಯಮಾನಗಳು ಮತ್ತು ಓಟಿಟಿ ಪ್ಲಾಟ್‍ಫಾರಂನಲ್ಲಿ (ಉತ್ತೇಕ್ಷಿತ) ಸುದ್ದಿಗಳು ಹರಡುವುದನ್ನು ಪರಿಶೀಲಿಸಿ, ಉಲ್ಲಂಘನೆ ಆಗುವ ವರದಿಗಳನ್ನು ನಿಯಂತ್ರಿಸಲು ವಿಷಯ ಪರಿಣಿತ ಅಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಸೋಷಿಯಲ್ ಮೀಡಿಯಾ ಘಟಕವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ- ಧಾರವಾಡದ ಪ್ರತಿ ಹಳ್ಳಿಗೂ ಒಂದೂವರೆ ವರ್ಷದಲ್ಲಿ ಮಲಪ್ರಭಾ ನೀರು ಕೊಟ್ಟೇ ಕೊಡುವೆ: ಸಚಿವ ಪ್ರಹ್ಲಾದ ಜೋಶಿ ಭರವಸೆ
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದು, ಹಾಗೂ ಚುನಾವಣೆ ನೀತಿ ಸಂಹಿತೆ ಉಲಂಘನೆ ಮಾಡಿ ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವವರ ಮೇಲೆ ನಿಗಾ ಇಡಲು ಸಾಮಾಜಿಕ ಜಾಲತಾಣ ಕೋಶವನ್ನು ಜಿಲ್ಲೆಯಲ್ಲಿ ರಚನೆ ಮಾಡಲಾಗಿದ್ದು, ಅದು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದೆ.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ತಾಂತ್ರಿಕ ಸಮಾಲೋಚಕರು, ನುರಿತ ಶಿಕ್ಷಕರು ಸೇರಿದಂತೆ ಸುಮಾರು 20 ಜನರ ತಂಡವು ಈ ಕಾರ್ಯನಿರ್ವಹಿಸುತ್ತಿದ್ದು, ಸೋಶಿಯಲ್ ಮೀಡಿಯಾ ಪ್ಲಾಟ್‍ಪಾರ್ಮ್ ಮೇಲೆ ನಿರಂತರ ನಿಗಾವಹಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಕೋಶವು ಸಾಮಾಜಿಕ ಜಾಲತಾಣಗಳಾದ ಪೇಸ್‍ಬುಕ್, ವಾಟ್ಸಪ್, ಟ್ವಿಟರ್, ಟೆಲಿಗ್ರಾಂ, ಯೂಟ್ಯೂಬ್, ವೆಬ್ ಚಾನೆಲ್‍ಗಳಲ್ಲಿ ಪ್ರಸಾರವಾಗುವ ಎಲ್ಲಾ ಬಗೆಯ ಸುದ್ದಿ ಮತ್ತು ಆಡಿಯೋ, ವಿಡಿಯೋ ಸಂದೇಶಗಳ ಮೇಲೆ ಹದ್ದಿನ ಕಣ್ಣು ಇಡುವ ಮೂಲಕ ಸುಳ್ಳು ಸುದ್ದಿಗಳ ನಿಯಂತ್ರಣ ಮಾಡಲಿದೆ.
ಇದನ್ನೂ ಓದಿ- ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ನಡುಕ ಉಂಟಾಗಿದೆ; ನಾವು ಎಲ್ಲಿಯೂ ಮೈ ಮರೆಯಬಾರದು ಎಂದ ಎಚ್‌ಡಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಪ್ರಕರಣಗಳು ಕಂಡು ಬಂದಲ್ಲಿ, ಸಂಬಂಧಪಟ್ಟ ಸುದ್ದಿ ಅಥವಾ ವಿಡಿಯೋ ಪ್ರಸಾರದ ಮೂಲವನ್ನು ಪತ್ತೆ ಹಚ್ಚಿ, ಸಂಬಂಧಿಸಿದ ಲಿಂಕ್, ಸ್ಕ್ರಿನ್‍ಶಾಟ್‍ಗಳ ದಾಖಲೆ ಸಹಿತ, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಪಡಿಸುವವರ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆ ಹಾಗೂ ಪೋಲೀಸ್ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.