ನವದೆಹಲಿ: ತಮಿಳು ನಾಡು ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ಸಾವಿನ ಕುರಿತಂತೆ ನ್ಯಾಯಮೂರ್ತಿ ಆರ್ಮುಗಸ್ವಾಮಿ ನೇತೃತ್ವದ ತನಿಖಾ ಸಮಿತಿ ನಡೆಸುತ್ತಿದ್ದ ತನಿಖೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ಜಯಲಲಿತಾ ಅವರು 2016 ಡಿಸೆಂಬರ್ 5ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22ರಂದು ಜಯಲಲಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಜಯಲಲಿತಾ ಅವರ ಸಾವಿನ ಬಳಿಕ ಆಸ್ಪತ್ರೆಯಲ್ಲಿ ಅವರಿಗೆ ಯಾವ ಕಾರಣಕ್ಕೆ ಚಿಕಿತ್ಸೆ ನೀಡಲಾಯಿತು, ಸಾವಿಗೆ ಕಾರಣವೇನು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು, ಆರೋಪಗಳು ಹುಟ್ಟಿಕೊಂಡಿದ್ದವು. ಈ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಎ.ಆರ್ಮುಗಸ್ವಾಮಿ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ಸ್ಥಾಪಿಸಲಾಗಿತ್ತು.
ಆದರೆ ಆಸ್ಪತ್ರೆಯಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಸಾವಿನ ಕುರಿತು ನಡೆಯುತ್ತಿರುವ ವಿಚಾರಣೆಯನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 4ರಂದು ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಅರ್ಜಿ ತಿರಸ್ಕರಿಸಿ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಅಪೋಲೋ ಆಸ್ಪತ್ರೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಮುಖ್ಯ ನ್ಯಾಯಾಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ಇಂದು ಆಸ್ಪತ್ರೆಯ ಮನವಿಯನ್ನು ಆಲಿಸಿ, ತನಿಖೆಗೆ ತಡೆ ನೀಡಿದೆ.
ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ಅವರ ಖಾಸಗಿ ವೈದ್ಯರಾದ ಡಾ. ಕೆ.ಎಸ್.ಶಿವಕುಮಾರ್ ಸೇರಿದಂತೆ 100 ಕ್ಕೂ ಅಧಿಕ ಸಾಕ್ಷಿಗಳನ್ನು ಈವರೆಗೆ ವಿಚಾರಣೆ ನಡೆಸಲಾಗಿದೆ. ಅಲ್ಲದೆ, ಇತರರು ಅಪೊಲೊ ಆಸ್ಪತ್ರೆಯ ವಿಕಿರಣಶಾಸ್ತ್ರಜ್ಞೆ ಡಾ.ಮೀರಾ ಮತ್ತು ತುರ್ತು ವೈದ್ಯ ಥಾವಾ ಪಝಾನಿ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು.