ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ತಮ್ಮ ಟ್ವಿಟ್ಟರ್ ಅಧಿಕೃತ ಖಾತೆ ಬಯೋನಲ್ಲಿ 'ಕಾಂಗ್ರೆಸ್ ಅಧ್ಯಕ್ಷ' ಎಂಬುದನ್ನು ತೆಗೆದು 'ಕಾಂಗ್ರೆಸ್ ಸದಸ್ಯ' ಎಂದು ರಾಹುಲ್ ಗಾಂಧಿ ಬದಲಾಯಿಸಿದ್ದಾರೆ.
ಸದ್ಯ ಟ್ವಿಟ್ಟರ್ ನಲ್ಲಿ, "ಇದು ರಾಹುಲ್ ಗಾಂಧಿ ಅವರ ಅಧಿಕೃತ ಖಾತೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯ, ಸಂಸದ" ಎಂದು ರಾಹುಲ್ ಗಾಂಧಿ ಬಯೋನಲ್ಲಿ ನಮೂದಿಸಲಾಗಿದೆ.
ಇದಕ್ಕೂ ಮುನ್ನ, "ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದೇನೆ; ಅಂತೆಯೇ ನಾನೀಗ ಪಕ್ಷದ ಅಧ್ಯಕ್ಷನಲ್ಲ, ಹಾಗಾಗಿ ಪಕ್ಷ ಬೇಗನೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು" ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ ಬೆನ್ನಲ್ಲೇ ಟ್ವಿಟ್ಟರ್ ಬಯೋ ಬದಲಾಯಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಸಂಪೂರ್ಣ ಜವಾಬ್ದಾರಿ ಹೊತ್ತ ರಾಹುಲ್ ಗಾಂಧಿ, ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ತಿಳಿಸಿದ್ದರು. ಆದರೆ ಪಕ್ಷ ಅದನ್ನು ಅನ್ಗೀಕರಿಸಿರಲಿಲ್ಲ. ಕಾಂಗ್ರೆಸ್ ನಾಯಕರೂ ಸಹ ರಾಹುಲ್ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಒತ್ತಾಯಿಸಿದ್ದರು.
ಆದರೆ ತಮ್ಮ ನಿಲುವಿಗೆ ಬದ್ಧರಾದ ರಾಹುಲ್ ಗಾಂಧಿ ಇಂದು ಮತ್ತೊಮ್ಮೆ ರಾಜೀನಾಮೆ ಖಚಿತಪಡಿಸಿದ್ದಾರೆ. ಸದ್ಯ ರಾಹುಲ್ ಗಾಂಧಿ ತಾವು ಕಾಂಗ್ರೆಸ್ ಪಕ್ಷದ ಸಾಮಾನಿ ಸದಸ್ಯ ಎಂದು ಹೇಳಿದ್ದು, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಚುನಾಯಿತ ಸಂಸದರಾಗಿದ್ದಾರೆ.