ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಅಂಗೀಕರಿಸಲಾಗಿದೆ. ಕರೋನಾ ವೈರಸ್ನಿಂದಾಗಿ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ ನವೆಂಬರ್ ವರೆಗೆ ವಿಸ್ತರಿಸಿರುವ ನಿರ್ಧಾರಕ್ಕೂ ಸಂಪುಟ ಅನುಮೋದನೆ ನೀಡಿದೆ. ಇದಕ್ಕೂ ಮುನ್ನ ಜೂನ್ 24 ರಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಸಲಾಗಿದ್ದು, ಇದರಲ್ಲಿ 15 ಸಾವಿರ ಕೋಟಿ ರೂ.ಗಳ ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿತ್ತು. ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕ ಸಚಿವರು ಭಾಗವಹಿಸಿದ್ದರು. ಈ ಸಮಯದಲ್ಲಿ, ಎಲ್ಲಾ ಮಂತ್ರಿಗಳು ಸಹ ಫೇಸ್ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಅನುಸರಿಸುತ್ತಿರುವುದು ಗಮನಕ್ಕೆ ಬಂದಿದೆ.
Pradhan Mantri Garib Kalyan Yojana (PMGKY) aims to provide a safety net to the poor and vulnerable who had been hit the hardest by the pandemic: Union Minister Prakash Javadekar https://t.co/iElB0ydWx5
— ANI (@ANI) July 8, 2020
ಇಲ್ಲಿವೆ ಕೆಲ ಹೈಲೈಟ್ಸ್
- "ಪಿಎಂ ಆವಾಸ್ ಯೋಜನೆಯಡಿ 1.60 ಲಕ್ಷ ಮನೆಗಳನ್ನು ವಲಸೆ ಕಾರ್ಮಿಕರಿಗೆ ಬಾಡಿಗೆಗೆ ನೀಡಲಾಗುವುದು, ಸುಮಾರು 3.5 ಲಕ್ಷ ಜನರಿಗೆ ಅಗ್ಗದ ಬಾಡಿಗೆಗೆ ಮನೆಗಳು ಸಿಗಲಿವೆ" ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಇದರ ಅಡಿ ದೇಶದ ಒಟ್ಟು 107 ನಗರಗಳಲ್ಲಿ ಸಿದ್ಧವಾಗಿರುವ 108000 ಫ್ಲ್ಯಾಟ್ಗಳನ್ನು ವಲಸೆ ಕಾರ್ಮಿಕರಿಗೆ ಬಾಡಿಗೆಗೆ ನೀಡಲಾಗುವುದು.
- ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಪ್ರಕಾರ, ಇಪಿಎಫ್ಗೆ ಕೊಡುಗೆ ನೀಡುವಲ್ಲಿ ಸರ್ಕಾರದ ಸಹಭಾಗಿತ್ವವನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಲಾಗಿದೆ.
- ಉಜ್ವಲಾ ಯೋಜನೆಯಡಿ ಮೂರನೇ ಉಚಿತ ಸಿಲಿಂಡರ್ ತೆಗೆದುಕೊಳ್ಳುವ ಅವಧಿಯನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸುವ ನಿರ್ಧಾರಕ್ಕೂ ಸಂಪುಟ ಸಭೆ ಅನುಮೋದನೆ ನೀಡಿದೆ. ಸೆಪ್ಟೆಂಬರ್ ವರೆಗೆ ದೇಶದ ಒಟ್ಟು 7.4 ಕೋಟಿ ಬಡ ಮಹಿಳೆಯರಿಗೆ 3 ಉಚಿತ ಎಲ್ಪಿಜಿ ಸಿಲಿಂಡರ್ಗಳನ್ನು ನೀಡಲು ಅವಕಾಶವಿದ್ದು, ಈ ಯೋಜನೆಗೆ 13,500 ಕೋಟಿ ರೂ. ವೆಚ್ಚ ತಗುಲಲಿದೆ ಎಂದು ಜಾವಡೆಕರ್ ಹೇಳಿದ್ದಾರೆ.
- ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್, " ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ ನವೆಂಬರ್ ವರೆಗೆ ವಿಸ್ತರಿಸುವುದಾಗಿ ಈ ಮೊದಲು ಪ್ರಧಾನಿ ಪ್ರಧಾನಿ ಘೋಷಿಸಿದ್ದರು. ಇಂದು ನಡೆದ ಸಚಿವ ಸಂಪುಟ ಸಭೆ ಅದಕ್ಕೆ ಅನುಮೋದನೆ ನೀಡಿದೆ. ಹೀಗಾಗಿ ಈ ಯೋಜನೆ ಜುಲೈನಿಂದ ನವೆಂಬರ್ ವರೆಗೆ ಐದು ತಿಂಗಳವರೆಗೆ ಮುಂದುವರೆಯಲಿದೆ. ಈ ಯೋಜನೆಯ ಅಡಿ ದೇಶದ 81 ಕೋಟಿ ಜನರಿಗೆ ಪ್ರತಿ ವ್ಯಕ್ತಿಗೆ ಐದು ಕಿಲೋಗ್ರಾಂ ಧಾನ್ಯ ಮತ್ತು ತಿಂಗಳಿಗೆ ಒಂದು ಕಿಲೋಗ್ರಾಂ ದಾಲ್ ಸಿಗುತ್ತದೆ. ಕಳೆದ ಮೂರು ತಿಂಗಳಲ್ಲಿ 1.20 ಕೋಟಿ ಟನ್ ಆಹಾರ ಧಾನ್ಯಗಳನ್ನು ಈ ಯೋಜನೆಯ ಅಡಿ ವಿತರಿಸಲಾಗಿದ್ದು, ಮುಂದಿನ ಐದು ತಿಂಗಳಲ್ಲಿ 2.03 ಕೋಟಿ ಟನ್ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ "ಈ ಯೋಜನೆಗೆ ಒಟ್ಟು 149000 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಎಂಟು ತಿಂಗಳ ಅವಧಿಗೆ ದೇಶದ ಒಟ್ಟು 81 ಕೋಟಿ ಜನರಿಗೆ ಉಚಿತ ಧಾನ್ಯವನ್ನು ನೀಡಲಾಗಿದೆ ಹಾಗೂ ವಿಶ್ವದ ಯಾವುದೇ ದೇಶವು ಇಷ್ಟೊಂದು ದೊಡ್ಡ ಪ್ರಮಾಣದ ಯೋಜನೆಯನ್ನು ಹೊಂದಿಲ್ಲ ಎಂದು ಜಾವಡೆಕರ್ ಮಾಹಿತಿ ನೀಡಿದ್ದಾರೆ.
- ಇದಕ್ಕೂ ಮೊದಲು ಜೂನ್ 24 ರಂದು ನಡೆದಿದ್ದ ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ್ದ ಕೇಂದ್ರ ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಭಾರತೀಯ ಬಾಹ್ಯಾಕಾಶ, ಪ್ರಚಾರ ಹಾಗೂ ಪ್ರಾಧಿಕಾರಕ್ಕಾಗಿ ರಾಷ್ಟ್ರೀಯ ಕೇಂದ್ರವೊಂದನ್ನು ರಚಿಸಲಾಗಿದ್ದು, ಇದು ಅನುಕೂಲಕರ ನಿಯಂತ್ರಕ ವಾತಾವರಣದಲ್ಲಿ ನೀತಿಗಳನ್ನು ಪ್ರೋತ್ಸಾಹಿಸಲಿದೆ ಎಂದಿದ್ದರು. ಇದರಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಚಟುವಟಿಕೆ ಗಳನ್ನು ನಡೆಸಲು ಖಾಸಗಿ ಉದ್ಯಮಿಗಳಿಗೆ ಪ್ರೋತ್ಸಾಹನ ನೀಡಲಿದೆ ಎಂದಿದ್ದರು. ಇದೇ ವೇಳೆ ಈ ಸಚಿವ ಸಂಪುಟ ಸಭೆಯಲ್ಲಿ ಪಶು ಸಂಗೋಪನಾ ಇಲಾಖೆಯ ಮೂಲ ಸೌಕರ್ಯಾಭಿವೃದ್ಧಿಗಾಗಿ 15000 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿತ್ತು.