ಮುಂಬೈ: ಮಹಾರಾಷ್ಟ್ರ ಸರಕಾರವು ಮರಾಠ ಸಮುದಾಯಕ್ಕೆ ಸರಕಾರಿ ಉದ್ಯೋಗಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿನ ಪ್ರವೇಶಕ್ಕೆ ಡಿಸೆಂಬರ್ 1ರಿಂದ ಮೀಸಲಾತಿಯನ್ನು ದೃಢಪಡಿಸಿದೆ.
ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೂಚಿಸಿದಂತೆ ಮರಾಠರು ಶೇ.16 ರಷ್ಟು ಮೀಸಲಾತಿಯನ್ನು ಪಡೆಯಲಿದ್ದಾರೆ.ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಮರಾಠ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಡಿ. ಕೆ. ಜೈನ್ ರಿಗೆ ವರದಿ ಸಲ್ಲಿಸಿದೆ.
ಸರಕಾರಿ ಉದ್ಯೋಗಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿನ ಮೀಸಲಾತಿಗಾಗಿ ಮರಾಠ ಸಮುದಾಯದ ಬೇಡಿಕೆಗಳ ಕುರಿತಂತೆ ಅನುಕೂಲಕರ ಶಿಫಾರಸುಗಳನ್ನು ಮಾಡಿದೆ. ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ನೀಡಲಾದ ಕೋಟಾಗೆ ತೊಂದರೆಯಿಲ್ಲದೆ ವರದಿಯನ್ನು ಸಲ್ಲಿಸಲಾಗಿದೆ ಎಂದು ಪಿಟಿಐ ತಿಳಿಸಿದೆ.
ಇದಾದ ನಂತರ ಮಿಸಲಾತಿ ನೀಡಿರುವ ವಿಚಾರವನ್ನು ದೃಢೀಕರಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, "ಇಂದು ನಾವು ಹಿಂದುಳಿದ ಆಯೋಗದಿಂದ ಮರಾಠಾ ಮೀಸಲಾತಿ ಕುರಿತಾದ ವರದಿಯನ್ನು ಸ್ವೀಕರಿಸಿದ್ದೇವೆ. ನವೆಂಬರ್ ತಿಂಗಳಿನಲ್ಲಿ ನಾವು ಎಲ್ಲಾ ಕಾನೂನು ಕ್ರಮಗಳನ್ನು ಪೂರ್ಣಗೊಳಿಸುತ್ತೇವೆ ಮತ್ತು ಮರಾಠಾ ಮೀಸಲಾತಿಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.