ಚೆನ್ನೈ: ಬಹುಕೋಟಿ ಗುಟ್ಕಾ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈನಾದ್ಯಂತ ತನಿಖಾ ಕಾರ್ಯಾಚರಣೆ ಆರಂಭಿಸಿರುವ ಸಿಬಿಐ, ತಮಿಳುನಾಡು ಆರೋಗ್ಯ ಮಂತ್ರಿ ಸಿ.ವಿಜಯಭಾಸ್ಕರ್ ಮನೆ ಸೇರಿದಂತೆ ಸುಮಾರು 40 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಟಿ.ಕೆ.ರಾಜೇಂದ್ರನ್ಮ್ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್.ಜಾರ್ಜ್ ಸೇರಿದಂತೆ ಇತರ ಪೋಲಿಸ್ ಅಧಿಕರಿಗಲ್ ಮೆನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ 2017ರ ಜುಲೈ 8ರಂದು ಗುಟ್ಕಾ ಹಗರಣ ಬೆಳಕಿಗೆ ಬಂದಿತ್ತು. ಅಂದು ಆದಾಯ ತೆರಿಗೆ ಇಲಾಖಾಧಿಕಾರಿಗಳು ತಮಿಳುನಾಡಿನ ಪಾನ್ ಮಸಾಲಾ ಮತ್ತು ಗುಟ್ಕಾ ಉತ್ಪಾದಕರ ಗೋದಾಮು, ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿ 250 ಕೋಟಿ ರೂ. ತೆರಿಗೆ ವಂಚನೆ ಹಗರಣವನ್ನು ಬಯಲುಗೊಳಿಸಿದ್ದರು. 2013ರಲ್ಲಿಯೇ ತಮಿಳುನಾಡಿನಲ್ಲಿ ತಂಬಾಕು ಮತ್ತು ಗುಟ್ಕಾಗಳನ್ನು ನಿಷೇಧಿಸಲಾಗಿತ್ತಾದರೂ, ಅಕ್ರಮವಾಗಿ ಗುಟ್ಕಾ ಮಾರಾಟ ಮಾಡಲಾಗುತ್ತಿತ್ತು.
ಏಪ್ರಿಲ್ ನಲ್ಲಿ ಮದ್ರಾಸ್ ಹೈಕೋರ್ಟ್ ಈ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ಅಂತೆಯೇ ಸಿಬಿಐ ತನಿಖೆಯನ್ನು ಆರಂಭಿಸಿ ತಮಿಳುನಾಡು ಸರ್ಕಾರ, ಕೇಂದ್ರ ಅಬಕಾರಿ ಇಲಾಖೆ ಮತ್ತು ಆಹಾರ ಭದ್ರತೆ ಇಲಾಖೆಯ ಅಧಿಕಾರಿಗಳ ವಿರುದ್ಧ ಈ ವರ್ಷ ಮೇ ತಿಂಗಳಲ್ಲಿ ಎಫ್ಐಆರ್ ದಾಖಲಿಸಿತ್ತು.