ನವದೆಹಲಿ: ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 2015ರ ಜನವರಿಯಲ್ಲಿ ಆರಂಭಿಸಲಾದ 'ಸುಕನ್ಯಾ ಸಮೃದ್ಧಿ ಯೋಜನೆ'ಯನ್ನು ಮತ್ತಷ್ಟು ಜನರಿಗೆ, ಅದರಲ್ಲೂ ತೀರಾ ಕಡಿಮೆ ಆದಾಯ ಹೊಂದಿರುವವರಿಗೆ ಕೈಗೆಟುಕುವಂತೆ ಮಾಡಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಹೆಣ್ಣು ಮಕ್ಕಳ ಭವಿಷ್ಯ ಹಾಗೂ ಲಾಭದಾಯಕತೆ ದೃಷ್ಟಿಯಿಂದ ಭಾರಿ ಜನಪ್ರಿಯತೆ ಪಡೆದಿರುವ 'ಸುಕನ್ಯಾ ಸಮೃದ್ಧಿ ಖಾತೆ ನಿಯಮಗಳ-2016'ಕ್ಕೆ ತಿದ್ದುಪಡಿ ತರುವ ಮೂಲಕ ಯೋಜನೆಯ ಷರತ್ತುಗಳನ್ನು ಸಡಿಲಗೊಳಿಸಿರುವ ಸರ್ಕಾರ, ಈ ಯೋಜನೆಯಡಿ ವಾರ್ಷಿಕ ಕಡ್ಡಾಯವಾಗಿ ಕಟ್ಟಬೇಕಾಗಿದ್ದ ಕನಿಷ್ಠ ಠೇವಣಿ ಮೊತ್ತವನ್ನು ಈವರೆಗೂ ಇದ್ದ 1,000 ರೂ.ನಿಂದ 250 ರೂ.ಗೆ ಇಳಿಸಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಮುಖ ಅಂಶಗಳು
ಸುಕನ್ಯಾ ಸಮೃದ್ಧಿ ಖಾತೆಯನ್ನು ಯಾವುದೇ ಬ್ಯಾಂಕು ಅಥವಾ ಅಂಚೆ ಕಚೇರಿಗಳಲ್ಲಿ ತೆರೆಯಬಹುದಾಗಿದೆ.
* ನವಜಾತ ಶಿಶುವಿನಿಂದ ಹಿಡಿದು 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ 'ಸುಕನ್ಯಾ ಸಮೃದ್ಧಿ' ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ.
* ವರ್ಷಕ್ಕೆ ಕನಿಷ್ಠ ರೂ. 250 ರಿಂದ ಗರಿಷ್ಠ 1.5 ಲಕ್ಷದವರೆಗೆ ಡಿಪಾಸಿಟ್ ಮಾಡಬಹುದು.
* ಬಡ್ಡಿ ದರ ಶೇ. 8.1
* ಯಾವ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಲಾಗಿದೆಯೋ ಆಕೆಗೆ 18 ವರ್ಷ ಪೂರ್ಣಗೊಂಡ ನಂತರ, ಆಕೆಯು ತನ್ನ ಖಾತೆಯಲ್ಲಿ ಜಮಾ ಆದ ಹಣದಲ್ಲಿ ಅರ್ಧ ಭಾಗವನ್ನು ಉನ್ನತ ಶಿಕ್ಷಣ, ಮದುವೆಯ ಉದ್ದೇಶಕ್ಕೆ ಬಳಸಬಹುದು.
* ಇದೊಂದು ದೀರ್ಘಕಾಲಿನ ಉಳಿತಾಯ ಖಾತೆಯಾಗಿದೆ. ಈ ಖಾತೆ ಆರಂಭಗೊಂಡ ದಿನದಿಂದ 21 ವರ್ಷಗಳವರೆಗೆ ಚಾಲ್ತಿಯಲ್ಲಿ ಇರುತ್ತದೆ.