Manadha Kadalu: E.K. ಎಂಟರ್ ಟೈನರ್ಸ್ ಲಾಂಛನದಲ್ಲಿ ಈ.ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಯಶಸ್ವಿ "ಮುಂಗಾರು ಮಳೆ" ಚಿತ್ರದ ನಂತರ ಇದೇ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ "ಮನದ ಕಡಲು". ಇತ್ತೀಚೆಗಷ್ಟೇ ಈ ಚಿತ್ರದ "ಹೂ ದುಂಬಿಯ ಕಥೆಯ" ಹಾಡು ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಇದೇ ಹೊತ್ತಿನಲ್ಲಿ ಚಿತ್ರದ ಮತ್ತೊಂದು ಗೀತೆ "ತುರ್ರಾ" ಬಿಡುಗಡೆಯಾಗಿದೆ.
ನೆಲಮಂಗಲದ ಬಳಿಯಿರುವ ನಿರ್ಮಾಪಕ ಈ ಕೃಷ್ಣಪ್ಪ ರವರ ತೋಟದಲ್ಲಿ ಈ ಹಾಡು ಬಿಡುಗಡೆಯಾಯಿತು. ಯೋಗರಾಜ್ ಭಟ್ ಅವರೆ ಬರೆದಿರುವ ಈ ಹಾಡನ್ನು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಂಜಿತ್ ಹಗ್ಡೆ ಹಾಗೂ ಪ್ರಾರ್ಥನಾ ಹಾಡಿದ್ದಾರೆ. "ತುರ್ರಾ" ಹಾಡಿನ ಬಗ್ಗೆ ಚಿತ್ರತಂಡ ಹೇಳಿದ್ದು ಹೀಗೆ.
ನನ್ನ ಹಾಗೂ ವಿ.ಹರಿಕೃಷ್ಣ ಅವರ ಕಾಂಬೋದಲ್ಲಿ ಅರ್ಥವಿರುವ ಹಾಡುಗಳು ಸಾಕಷ್ಟು ಹಿಟ್ ಆಗಿದೆ. ಆದರೆ ಅರ್ಥವಿಲ್ಲದ ಅನರ್ಥದ ಹಾಡುಗಳು ಸೂಪರ್ ಹಿಟ್ ಆಗಿದೆ. ಆ ಅನರ್ಥದ ಹಾಡಗಳಿಗೆ ಈ "ತುರ್ರಾ" ಹಾಡು ಸೇರ್ಪಡೆಯಾಗಿದೆ. ನನ್ನ ಬಾಲ್ಯದಲ್ಲಿ ನಮ್ಮೂರಿನಲ್ಲಿ ಅಲಿಮಾ ಎಂಬ ಹುಚ್ಚ ಇದ್ದ. ಆತನಿಗೆ ಮಕ್ಕಳೆಂದರೆ ಪ್ರೀತಿ. ನಾವೆಲ್ಲಾ ಆತನ ಹಿಂದೆ ಸುತ್ತುತ್ತಿದ್ದೆವು. ಆತ "ಬೊಂಬುವೈ ಟುರ್ರವೈ'' ಎಂಬ ಪದ ಬಳಸುತ್ತಿದ್ದ. ಆ ಪದವೇ ಈ "ತುರ್ರಾ" ಹಾಡು ಬರೆಯಲು ಸ್ಪೂರ್ತಿ. ವಿ.ಹರಿಕೃಷ್ಣ ಅವರ ಧ್ವನಿ ಈ ಹಾಡಿಗೆ ಸೂಕ್ತವಾಗಿದೆ.
ಅವರ ಜೊತೆಗೆ ಸಂಜಿತ್ ಹೆಗ್ಡೆ ಹಾಗೂ ಪ್ರಾರ್ಥನಾ ಈ ಹಾಡನ್ನು ಹಾಡಿದ್ದಾರೆ. ಕನ್ನಡ ಕಲಾಭಿಮಾನಿಗಳು ಈ ಹಾಡನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಕೃಷ್ಣಪ್ಪ ಅವರ ಈ ತೋಟದಲ್ಲೇ ಚಿತ್ರ ಅರಂಭವಾಗಿದ್ದು, ಇವತ್ತು ಇದೇ ಸ್ಥಳದಲ್ಲೇ ಚಿತ್ರೀಕರಣ ಮುಕ್ತಾಯವಾಗಿ, ಕುಂಬಳಕಾಯಿ ಒಡೆಯಲಾಗಿದೆ ಹಾಗೂ ಎರಡನೇ ಹಾಡನ್ನು ಇಲ್ಲೇ ಬಿಡುಗಡೆ ಮಾಡಲಾಗಿದೆ ಎಂದರು ನಿರ್ದೇಶಕ ಯೋಗರಾಜ್ ಭಟ್.
ನಾನು ಸ್ಟುಡಿಯೋದಲ್ಲಿ ತುಂಬಾ ಹೊತ್ತು ಹಾಡಿರುವ ಹಾಡು ಇದೆ. ಲಿರಿಕಲ್ ಪೇಜ್ ಹಿಡಿದು ಹಾಡುವಾಗ ಪದಗಳನ್ನು ಹೇಳಲು ಬಹಳ ಹೊತ್ತಾಗುತ್ತಿತ್ತು. ಇಂತಹ ಕಷ್ಟದ ಹಾಗೂ ವಿರಳವಾದ ಪದಗಳನ್ನು ಬಳಸಿ ಯೋಗರಾಜ್ ಭಟ್ ಅವರು ಒಂದೊಳ್ಳೆ ಹಾಡು ಬರೆದಿದ್ದಾರೆ ಎಂದು ವಿ.ಹರಿಕೃಷ್ಣ ತಿಳಿಸಿದರು.
ನಮ್ಮ ಚಿತ್ರದ ಹಾಡು ಬಿಡುಗಡೆಗೆ ಇಲ್ಲಿಯವರೆಗೂ ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಮಾತನಾಡಿದ ನಿರ್ಮಾಪಕ ಈ ಕೃಷ್ಣಪ್ಪ, ಈ ಹಾಡು ಕೇಳಿದ ತಕ್ಷಣ ಇಷ್ಟವಾಯಿತು. ನಿರ್ದೇಶಕರಿಗೆ ಈ ಹಾಡು ಇರಲಿ ಎಂದು ಹೇಳಿದೆ. ಹರಿಕೃಷ್ಣ, ಸಂಜಿತ್ ಹೆಗ್ಡೆ ಹಾಗೂ ಪ್ರಾರ್ಥನಾ ಅವರ ಗಾಯನ ಮತ್ತು ಸುಮುಖ, ಅಂಜಲಿ, ರಂಗಾಯಣ ರಘು ಅವರ ಅಭಿನಯ ಹಾಗೂ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಬಹಳ ಚೆನ್ನಾಗಿದೆ ಎಂದರು.
ಯೋಗರಾಜ್ ಭಟ್ ಅವರು ಚಿತ್ರೀಕರಣದ ಸಮಯದಲ್ಲೂ ಇಂತಹ ಪದಗಳನ್ನು ಬಳಸುತ್ತಿರುತ್ತಾರೆ. ಈಗ ಆ ಪದಗಳನ್ನೇ ಬಳಸಿ ಹಾಡು ಬರೆದಿದ್ದಾರೆ. ಈ ಹಾಡು ತುಂಬಾ ಚೆನ್ನಾಗಿದೆ. ಈ ಜಾಗದಲ್ಲೇ ನಮ್ಮ ಚಿತ್ರ ಆರಂಭವಾಗಿದ್ದು, ಈಗ ಇದೇ ಜಾಗದಲ್ಲಿ ಹಾಡು ಬಿಡುಗಡೆಯಾಗಿರುವುದು ಖುಷಿಯಾಗಿದೆ ಎನ್ನುತ್ತಾರೆ ನಾಯಕ ಸುಮುಖ.
ಅನರ್ಥದ ಹಾಡನ್ನು ಪ್ರೇಕ್ಷಕರಿಗೆ ಅರ್ಥ ಮಾಡಿಸಲು ಯೋಗರಾಜ್ ಭಟ್ ಒಬ್ಬರಿಗೆ ಸಾಧ್ಯವೆಂದರು ಹಿರಿಯ ನಟ ದತ್ತಣ್ಣ. ನನಗೂ ಈ ಹಾಡು ಬಹಳ ಇಷ್ಟ ಎಂದರು ನಟಿ ರಾಶಿಕಾ ಶೆಟ್ಟಿ. ಸಹ ನಿರ್ಮಾಪಕ ಜಿ.ಗಂಗಾಧರ್, ಕಾರ್ಯಕಾರಿ ನಿರ್ಮಾಪಕ ಪ್ರತಾಪ್ ಹಾಗೂ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.