ಮೈಸೂರು: ಮೈಸೂರಿನ ರಾಜ ವಂಶಸ್ಥರು ಹಿಂದಿನ ಕಾಲದಿಂದಲೂ ನವರಾತ್ರಿ ಆಚರಣೆಯ ಒಂಬತ್ತು ದಿವಸಗಳಲ್ಲೂ ಅರಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಒಂಬತ್ತನೆಯ ದಿನದಂದು ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ರಾಜರು ಚಿನ್ನದ ಅಂಬಾರಿಯಲ್ಲಿ ಕುಳಿತು 'ಬನ್ನಿಮಂಟಪಕ್ಕೆ' ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈಗ ಚಿನ್ನದ ಅಂಬಾರಿಯಲ್ಲಿ ರಾಜರ ಬದಲು ನಾಡದೇವತೆ ಚಾಮುಂಡೇಶ್ವರಿಯನ್ನು ಕೂರಿಸಿ 'ಬನ್ನಿಮಂಟಪಕ್ಕೆ' ಕರೆತರಲಾಗುತ್ತದೆ. ಇದೇ ಎಲ್ಲರ ನೆಚ್ಚಿನ 'ಜಂಬೂ ಸವಾರಿ'.
ನವ ರಾತ್ರಿ ಪ್ರಾರಂಭದ ಮೊದಲ ದಿನ ಶುಭ ಮುಹೂರ್ತದಲ್ಲಿ ಚಿನ್ನದ ಸಿಂಹಾಸನಕ್ಕೆ ಸಿಂಹದ ಮೂರ್ತಿಯನ್ನು ಜೋಡಣೆ ಮಾಡುವ ಕಾರ್ಯ ನೆರವೆರುವುದು. ನಂತರ ಮಹಾರಾಜ ಅರಮನೆಯ ಚಾಮುಂಡಿತೊಟ್ಟಿಯಲ್ಲಿ ಕಂಕಣಧಾರಣೆ ಮಹೋತ್ಸವದಲ್ಲಿ ಪಾಲ್ಗೊಳ್ಳುವರು. ಕಂಕಣ ಧಾರಣೆಯ ನಂತರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಸವಾರಿ ತೊಟ್ಟಿಗೆ ಆಗಮಿಸುವವು. ಆನಂತರದಲ್ಲಿ ಕಳಸ ಪೂಜೆ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಲಾಗುವುದು.
ಶುಭಘಳಿಗೆಯಲ್ಲಿ ಮೈಸೂರು ಒಡೆಯರ್ ಸಿಂಹಾಸನರೋಹಣ ಮಾಡುವ ಮೂಲಕ ಖಾಸಗಿ ದರ್ಬಾರು ಆರಂಭವಾಗುತ್ತದೆ. ಆನಂತರದಲ್ಲಿ ಚಾಮುಂಡಿತೊಟ್ಟಿಯಲ್ಲಿರುವ ಮೈಸೂರು ಅರಸರ ಕುಲದೇವತೆಯಾಗಿರುವ ಚಾಮುಂಡೇಶ್ವರಿಯ ಮೂರ್ತಿಯನ್ನು ಕನ್ನಡಿ ತೊಟ್ಟಿಗೆ ಸ್ಥಳಾಂತರಿಸಿ ವಿಶೇಷ ಪೂಜೆ ನೆರವೇರಿಸಲಾಗುವುದು.
ನವರಾತ್ರಿಯ ಏಳನೇ ದಿನ ಶುಭ ಮಹೂರ್ಥದಲ್ಲಿ ಅರಮನೆಯಲ್ಲಿ ಸರಸ್ವತಿ ಪೂಜೆ ನೆರವೇರುವುದು, ಅಲ್ಲದೆ ಅಂದಿನ ರಾತ್ರಿ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ ಸಹ ನಡೆಸಲಾಗುವುದು.
ನವರಾತ್ರಿಯ ಒಂಬತ್ತನೇ ದಿನ ಚಂಡಿಹೋಮ ಮಾಡಿ, ನಂತರದ ಶುಭ ಘಳಿಗೆಯಲ್ಲಿ ಪಟ್ಟದ ಆನೆ, ಕುದುರೆ, ಹಸು ಸೇರಿದಂತೆ ವಿವಿಧ ಆಯುಧಗಳನ್ನು ಕೋಡಿಸೋಮೇಶ್ವರ ದೇವಾಲಯಕ್ಕೆ ರವಾನಿಸಲಾಗುವುದು. ಕೋಡಿ ಸೋಮೇಶ್ವರ ದೇಗುಲದಲ್ಲಿ ಪೂಜೆ ನೆರವೇರಿಸಿದ ಬಳಿಕ ಅರಮನೆಯ ಕಲ್ಯಾಣಮಂಟಪದಲ್ಲಿ ಮಹಾರಾಜರಿಂದ ಆಯುಧಪೂಜೆ ನೆರವೇರುವುದು.
ಆಯುಧ ಪೂಜೆಯ ದಿನ ರಾತ್ರಿ ಖಾಸಗಿ ದರ್ಬಾರ್ ಮುಕ್ತಾಯವಾಗಲಿದ್ದು, ಚಿನ್ನದ ಸಿಂಹಾಸನವನ್ನು ಅಳವಡಿಸಿದ್ದ ಸಿಂಹದ ಮೂರ್ತಿಯನ್ನು ಬೇರ್ಪದಿಸಲಾಗುವುದು.
ಹತ್ತನೇ ದಿನ ಎಂದರೆ 'ದಶಮಿ'ಯ ದಿನದಂದೂ ಮಹಾರಾಜರು ಶಮಿವೃಕ್ಷದ ಸಮೀಪ ಶಮಿ ಉತ್ತರ ಪೂಜೆ ನೆರವೇರಿಸುವರು. ನಂತರ ಅರಮನೆಯ ಉತ್ತರ ದಿಕ್ಕಿನಲ್ಲಿರುವ ಭುವನೇಶ್ವರಿ ಅಮ್ಮನವರ ದೇವಾಲಯದಿಂದ ಮಹಾರಾಜರ ವಿಜಯಯಾತ್ರೆ ಆರಂಭವಾಗುತ್ತದೆ. ತದನಂತರ ಚಾಮುಂದೆಶ್ವರಿಯ ಮೂರ್ತಿಯನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ಸ್ಥಳಾಂತರಿಸಲಾಗುವುದು. ಆನಂತರದಲ್ಲಿ ನಡೆಯುವುದೇ "ಮೈಸೂರು ದಸರಾ", ಜಗದ್ವಿಖ್ಯಾತಿ "ಜಂಬೂ ಸವಾರಿ".