ನವದೆಹಲಿ: ಮ್ಯಾಂಚೆಸ್ಟರ್ನಲ್ಲಿ ಬುಧವಾರದಂದು ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋತ ನಂತರ ಭಾರತ ವಿಶ್ವಕಪ್ ನಿಂದ ನಿರ್ಗಮಿಸಿದೆ. ಆದಾಗ್ಯೂ, ವಿರಾಟ್ ಕೊಹ್ಲಿ ನೇತೃತ್ವದ ತಂಡ, ಸಿಬ್ಬಂದಿ ಮತ್ತು ಭಾರತೀಯ ಆಟಗಾರರ ಕುಟುಂಬಗಳು ವಿಶ್ವಕಪ್ ಫೈನಲ್ ವರೆಗೆ ಇಂಗ್ಲೆಂಡ್ ನಲ್ಲೆ ಉಳಿಯಲಿದ್ದಾರೆ ಎಂದು ವರದಿಯಾಗಿದೆ.
ಭಾನುವಾರದಂದು ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಅಂತಿಮ ಹಣಾಹಣಿ ನಡೆಯಲಿದೆ. ಹೆಚ್ಚಿನ ಆಟಗಾರರು ಜುಲೈ14 ರವರೆಗೆ ಮ್ಯಾಂಚೆಸ್ಟರ್ನಲ್ಲಿರುತ್ತಾರೆ ನಂತರ ಅಲ್ಲಿಂದ ಹೊರಡುತ್ತಾರೆ ಎಂದು ಐಎಎನ್ಎಸ್ ವರದಿ ಮಾಡಿದೆ. ಫೈನಲ್ನಲ್ಲಿ ಭಾರತವಿಲ್ಲದಿದ್ದರೂ ಸಹ, ಇಂಗ್ಲೆಂಡ್ ನಲ್ಲಿ ನೆಲೆಸಿರುವ ತಂಡದ ಬೆಂಬಲಿಗರು ವಿಶ್ವಕಪ್ 2019 ರ ಫೈನಲ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ.
ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಸೋಲಿನ ಹೊರತಾಗಿಯೂ ಫೈನಲ್ ಪಂದ್ಯದ ಎಲ್ಲಾ ಟಿಕೆಟ್ಗಳು ಮಾರಾಟವಾಗಿವೆ. ಶೇ 90ರಷ್ಟು ಅಭಿಮಾನಿಗಳು ತಿಂಗಳುಗಳ ಮೊದಲೇ ಟಿಕೆಟ್ ಬುಕ್ ಮಾಡಿರುವುದರಿಂದ ಲಾರ್ಡ್ಸ್ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ ಎನ್ನಲಾಗಿದೆ.ಇಲ್ಲಿನ ಟಿಕೆಟ್ ಗಳನ್ನು ವಿವಿಧ ಬೆಲೆ ವಿಭಾಗಗಳಾದ ಕಂಚು (95 ಪೌಂಡ್), ಬೆಳ್ಳಿ (195), ಚಿನ್ನ (295) ಮತ್ತು ಪ್ಲಾಟಿನಂ (395) ಗುರುತುಗಳ ಮೂಲಕ ಮಾರಾಟ ಮಾಡಲಾಗಿದೆ.