ಫಾರೂಖಾಬಾದ್: ಗೊರಖ್ಪುರ್ ನಲ್ಲಿ ನಡೆದ 290 ಕ್ಕೂ ಅಧಿಕ ಮಕ್ಕಳು ಮರಣಹೊಂದಿದ ದುರ್ಘಟನೆಯ ನಂತರ ಉತ್ತರಪ್ರದೇಶದ ಫರೂಕಾಬಾದ್ ನ ಮತ್ತೊಂದು ಆಸ್ಪತ್ರೆಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.
ಫಾರ್ರುಖಬಾದ್ ನ ರಾಮ್ ಮನೋಹರ್ ಲೋಹಿಯಾ ರಾಜಕೀಯ ಚಿಕಿತ್ಸಾಲಯ ಆಸ್ಪತ್ರೆಯಲ್ಲಿ ಆಮ್ಲಜನಕ ಮತ್ತು ಔಷಧಿ ಪೂರೈಕೆಯ ಕೊರತೆಯಿಂದಾಗಿ ಸುಮಾರು 49 ಮಕ್ಕಳು ಒಂದು ತಿಂಗಳಿನಲ್ಲಿ ಮೃತಪಟ್ಟಿದ್ದಾರೆ.
ಜುಲೈ 21 ಮತ್ತು ಆಗಸ್ಟ್ 20 ರ ನಡುವೆ ಮರಣ ಹೊಂದಿದ ಮಕ್ಕಳ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಆದೇಶಿಸಿದ್ದಾರೆ. ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಮತ್ತು ನಿರ್ಲಕ್ಷ್ಯದ ಕಾರಣದಿಂದಾಗಿ ಮರಣ ಸಂಭವಿಸಿದೆ ಎಂದು ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ.
ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಮತ್ತು ಆಸ್ಪತ್ರೆ ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಸಿಎಂಓ, ಸಿಎಂಎಸ್ ಮತ್ತು ಹಲವಾರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆಯನ್ನು ಮುಂದುವರಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಫರೂಕಾಬಾದ್ ಪೊಲೀಸ್ ಅಧೀಕ್ಷಕ ದಯಾನಂದ ಮಿಶ್ರಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಶಿಶುಗಳ ತೂಕದಲ್ಲಿ ಇಳಿಕೆ ಉಂಟಾಗಿ ಈ ಅವಘಡ ಸಂಭವಿಸಿದೆ ಎಂದು ಹೇಳುವ ಮೂಲಕ ಆಸ್ಪತ್ರೆಯ ಅಧಿಕಾರಿಗಳು ಈ ಎಲ್ಲಾ ಆರೋಪಗಳನ್ನು ನಿರಾಕರಿಸುವ ಯತ್ನ ಮಾಡಿದ್ದಾರೆ.ಕಳೆದ ತಿಂಗಳು ಗೋರಖ್ಪುರದ ಬಿಆರ್ಡಿ ಮೆಡಿಕಲ್ ಕಾಲೇಜಿನಲ್ಲಿ ಮಕ್ಕಳ ಮಾರಣಹೋಮ ನಡೆದಿತ್ತು. ಈ ದುರ್ಘಟನೆಯಲ್ಲಿ 70ಕ್ಕಿಂತಲೂ ಹೆಚ್ಚು ಮಕ್ಕಳು ಅದರಲ್ಲೂ ಹೆಚ್ಚಾಗಿ ಶಿಶುಗಳು ಮೃತಪಟ್ಟಿದ್ದರು.