ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ. 50:50 ಸೂತ್ರದನ್ವಯ ಸರ್ಕಾರ ರಚಿಸಬೇಕೆಂದು ಶಿವಸೇನಾ ಪಟ್ಟು ಹಿಡಿದಿರುವ ಬೆನ್ನಲ್ಲೇ ಈಗ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿರುವುದು ರಾಜಕೀಯ ವಲಯದಲ್ಲಿ ಕೂತೂಹಲ ಮೂಡಿಸಿದೆ.
'ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯರಿ ಅವರು ಇಂದು ಏಕೈಕ ದೊಡ್ಡ ಪಕ್ಷದ ಚುನಾಯಿತ ಸದಸ್ಯರಾದ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ತಮ್ಮ ಪಕ್ಷದ ಇಚ್ಛೆ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸುವಂತೆ ಕೇಳಿಕೊಳ್ಳಲಾಗಿದೆ 'ಎಂದು ರಾಜ್ಯಪಾಲರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ
ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆಗಳು ಅಕ್ಟೋಬರ್ 21 ರಂದು ನಡೆದವು ಮತ್ತು ಅಕ್ಟೋಬರ್ 24 ರಂದು ಫಲಿತಾಂಶಗಳನ್ನು ಘೋಷಿಸಲಾಯಿತು. ಆದಾಗ್ಯೂ, 15 ದಿನಗಳು ಕಳೆದರೂ, ಯಾವುದೇ ಒಂದು ಪಕ್ಷ ಅಥವಾ ಪಕ್ಷಗಳ ಮೈತ್ರಿ ಸರ್ಕಾರ ರಚಿಸಲು ಮುಂದೆ ಬಂದಿಲ್ಲ" ಎಂದು ರಾಜ್ಯಪಾಲರ ಕಚೇರಿ ಹೇಳಿದೆ.
ಇತ್ತೀಚಿಗೆ ದೇವೇಂದ್ರ ಫಡ್ನವೀಸ್ ಶಿವಸೇನಾ ವಿರುದ್ಧ ವಾಗ್ದಾಳಿ ನಡೆಸಿ ವಿರೋಧ ಪಕ್ಷಗಳು ಟೀಕಿಸದ ರೀತಿಯಲ್ಲಿ ಶಿವಸೇನಾ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿದ್ದ ನಡೆ ತಮಗೆ ನೋವನ್ನು ತರಿಸಿದೆ ಎಂದು ಹೇಳಿದರು. 'ಅವರ ಹೇಳಿಕೆಗಳನ್ನು ಗಮನಿಸಿದರೆ, ವಿಶೇಷವಾಗಿ ಪ್ರಧಾನ ಮಂತ್ರಿಯ ವಿರುದ್ಧದ ಹೇಳಿಕೆಗಳಿಂದ ದಿಗ್ಭ್ರಮೆಗೊಂಡಿದ್ದೇವೆ ಮತ್ತು ಅದು ನಮ್ಮನ್ನು ನೋಯಿಸುತ್ತದೆ. ಬಿಜೆಪಿಯಿಂದ ಯಾರೂ ಬಾಳ್ ಠಾಕ್ರೆ ಅಥವಾ ಉದ್ಧವ್ ಠಾಕ್ರೆ ಅವರನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ ಸೇನಾ ಪಟ್ಟು ಬಿಡದೆ ಮೋದಿ-ಜಿ ಮೇಲೆ ದಾಳಿ ಮಾಡಿದ ರೀತಿ, ನಮ್ಮ ಪ್ರತಿಸ್ಪರ್ಧಿಗಳು ಸಹ ಮಾಡಲಿಲ್ಲ ನಾವು ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಇದೆಲ್ಲವು ಮೈತ್ರಿಕೂಟವನ್ನು ಮುಂದುವರೆಸಲು ಶಿವಸೇನೆ ಆಸಕ್ತಿ ಹೊಂದಿಲ್ಲ ಎಂದು ತೋರುತ್ತದೆ' ಎಂದು ಫಡ್ನವೀಸ್ ಹೇಳಿದ್ದರು.