ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ಪುಟ್ ಪಾತ್ ಮೇಲೆ ಅಕ್ರಮವಾಗಿ ತಲೆ ಎತ್ತಿದ್ದ ಸಣ್ಣಪುಟ್ಟ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಗುರುವಾರ ಬೆಳಿಗ್ಗೆ ಜಿಲ್ಲಾಡಳಿತ ನಡೆಸಿದೆ.
ಪುಟ್ ಪಾತ್ ಹಾಗೂ ಸರ್ಕಾರಿ ಜಾಗದಲ್ಲಿ ತಲೆಎತ್ತಿದ್ದ 250 ಅಂಗಡಿಗಳನ್ನು ಸುಮಾರು 5 ಜೆಸಿಬಿಗಳ ಮೂಲಕ ಪೋಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಗಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ಮೇರೆಗೆ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ವ್ಯಾಪಾರಸ್ಥರು ಅಂಗಡಿ ತೆರವುಗೊಳಿಸದಂತೆ ಅಂಗಲಾಚುತ್ತಿರುವ ದೃಶ್ಯ ಮನಕಲಕುವಂತಿದೆ.
ಚಾಮುಂಡಿ ಬೆಟ್ಟದ ರಸ್ತೆ ಪಕ್ಕದಲ್ಲೇ ಅನಧಿಕೃತವಾಗಿ ಅಂಗಡಿಗಳನ್ನ್ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಭಕ್ತಾದಿಗಳಿಗೆ ತೊಂದರೆಯಾಗಿದೆ. ಅಲ್ಲದೆ, ರಸ್ತೆಯನ್ನೆಲ್ಲಾ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದು, ಸುಂದರ ವಾತಾವರಣ ಹಾಳಾಗಿರುವುದರಿಂದ ಕೂಡಲೇ ಅದನ್ನು ತೆರವುಗೊಳಿಸುವಂತೆ ಸಚಿವ ಸೋಮಣ್ಣ ಅವರು ಡಿಸಿಪಿ ಮುತ್ತುರಾಜ್ ಅವರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ತರವು ಕಾರ್ಯಾಚರಣೆ ನಡೆಸಲಾಗಿದೆ.