ಮುಂಬೈ: ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ತಂದೆ ತಮಗೆ "ತಮ್ಮ ಮಗನ ಬಗ್ಗೆ ಗರ್ವವಿದೆ" ಎಂದು ಹೇಳಿದ್ದಾರೆ. ಮಾಜಿ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್ ಮಗನ ಬಗ್ಗೆ ಮನದಾಳದ ಮಾತುಗಳನ್ನಾಡಿದ್ದು, ಪಾಕ್ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ವಾಪಸ್ ಬರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಬುಧವಾರ ಪತನಗೊಂಡ ಬಳಿಕ ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಈಗ ಇಡೀ ವಿಶ್ವದ ಕೇಂದ್ರ ಬಿಂದುವಾಗಿದ್ದಾರೆ. ಅಲ್ಲದೆ, ಕೂಡಲೇ ಅವರನ್ನು ಭಾರತಕ್ಕೆ ಮರಳಿ ಕಳುಹಿಸುವಂತೆ ಪಾಕ್ ಜನತೆ ಸಹಿತ ಎಲ್ಲರೂ ಒತ್ತಾಯಿಸಿದ್ದಾರೆ. ಈ ವೇಳೆ ಮಗನ ಬಗ್ಗೆ ಮನಮಿಡಿಯುವ ಮಾತುಗಳನ್ನಾಡಿರುವ ಅವರ ತಂದೆ ಮಾಜಿ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್, "ಸ್ನೇಹಿತರೆ, ನಿಮ್ಮೆಲ್ಲರ ಕಾಳಜಿಗೆ, ಪ್ರಾರ್ಥನೆಗಳಿಗೆ ಧನ್ಯವಾದಗಳು. ದೇವರ ದಯೆಯಿಂದ ಅಭಿನಂದನ್ ಜೀವಂತವಾಗಿದ್ದಾನೆ, ಮಾನಸಿಕವಾಗಿಯೂ ದೃಢವಾಗಿದ್ದಾನೆ. ಅಭಿನಂದನ್ ಸೆರೆ ಸಿಕ್ಕಿದ್ದರೂ ಒಬ್ಬ ನಿಜವಾದ ಯೋಧನಂತೆ ವರ್ತಿಸುತ್ತಿದ್ದಾರೆ. ಪಾಕ್ ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ವಿಡಿಯೋವನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಧೈರ್ಯವಾಗಿ ಆತ ಮಾತಾಡಿರುವ ರೀತಿ ನೋಡಿ... ಆತನ ಬಗ್ಗೆ ನಮಗೆ ಗರ್ವವಿದೆ" ಎಂದಿದ್ದಾರೆ.
ನನಗೆ ಗೊತ್ತು ನಿಮ್ಮೆಲ್ಲಾರ ಆಶೀರ್ವಾದದ ಕೈಗಳು ಆತನ ಮೇಲಿದೆ. ಆತನ ಬಿಡುಗಡೆಗೆ ನೀವೆಲ್ಲಾ ಕೋರುತ್ತಿದ್ದೀರಾ. ಆತನಿಗೆ ಯಾವುದೇ ಹಿಂಸೆಯಾಗದಿರಲಿ ಹಾಗೂ ಸುರಕ್ಷಿತವಾಗಿ ಮರಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಕಷ್ಟದ ಸಂದರ್ಭದಲ್ಲಿ ನಮ್ಮ ಕುಟುಂಬಕ್ಕೆ ಬೆಂಬಲ ಸೂಚಿಸುತ್ತಿರುವ ಹಾಗೂ ಅಭಿನಂದನ್ ಬಿಡುಗಡೆಗಾಗಿ ಪ್ರಾರ್ಥಿಸುತ್ತಿರುವ ಎಲ್ಲರಿಗೂ ನಾನು ಆಭಾರಿ ಎಂದು ಅವರು ತಿಳಿಸಿದ್ದಾರೆ.