ಬೆಂಗಳೂರು: ರಾಜ್ಯದಲ್ಲಿ ಆಪರೇಶನ್ ಸಂಸ್ಕೃತಿ ಆರಂಭವಾಗಿದ್ದೇ ಸಿದ್ದರಾಮಯ್ಯ ಅವರಿಂದ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಆಪರೇಷನ್ ಕಮಲ ಅಂತಾ ಬಿಜೆಪಿ ವಿರುದ್ಧ ಆರೋಪ ಮಾಡಲಾಗುತ್ತಿದೆ. ಆದರೆ 1967 ರಲ್ಲಿ ಗಯಾರಾಂ ಎನ್ನುವ ಶಾಸಕ 15 ದಿನಗಳಲ್ಲಿ ಮೂರು ಬಾರಿ ಕಾಂಗ್ರೆಸ್ನಿಂದ ಹೋಗಿ ವಾಪಸ್ ಬಂದಿದ್ದರು. ಆಗ ಗಯಾರಾಂ ಆಯಾರಾಂ ಆಗಿದ್ದಾರೆ ಎಂದು ಇಂದಿರಾ ಗಾಂಧಿ ಹೇಳಿದ್ದರು. ಅಷ್ಟೇ ಯಾಕೆ, ಸಿದ್ದರಾಮಯ್ಯ ಕೂಡ ಆಪರೇಷನ್ ಸಂಸ್ಕೃತಿ ಮೂಲಕವೇ ಕಾಂಗ್ರೆಸ್ಗೆ ಬಂದಿದ್ದು ಎಂಬುದನ್ನು ಅವರೇ ಮರೆತಂದಿದೆ ಎಂದು ಯಡಿಯೂರಪ್ಪ ಟೀಕಿಸಿದರು.
ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್'ನಲ್ಲಿ ಅಸಮಾಧಾನ ಹೊಗೆ ಆಡುತ್ತಿದೆ ಎಂಬದಕ್ಕೆ ಇಂದು ಶಾಸಕಾಂಗ ಸಭೆಗೆ ಶಾಸಕರು ಲೇಟಾಗಿ ಬಂದದ್ದೇ ಕಾರಣ. 3 ಗಂಟೆಗೆ ಆರಂಭ ಆಗಬೇಕಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸಂಜೆ 5 ಗಂಟೆಗೆ ಆರಂಭವಾಯಿತು. ಹೀಗಾಗಿ ಬಿಜೆಪಿ ಬಗ್ಗೆ ಟೀಕೆ ಮಾಡುವುದಕ್ಕಿಂತ ಕಾಂಗ್ರೆಸ್ ತಮ್ಮ ಕೆಲಸ ಮಾಡಲಿ. ಇದು ಹೀಗೆ ಮುಂದುವರೆದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.