ಬೆಂಗಳೂರು: ಗುರುವಾರ ಸದನದಲ್ಲಿ ಬಹುಮತ ಸಾಬೀತಿಗೆ ಸ್ಪೀಕರ್ ಅವಕಾಶ ಕೊಡದ ಹಿನ್ನೆಲೆಯಲ್ಲಿ ಸ್ಪೀಕರ್ ವಿರುದ್ಧ ಹೇಳಿಕೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ, ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಕಾಂಗ್ರೆಸ್ ಏಜೆಂಟ್. ಇದೇ ಕಾರಣಕ್ಕಾಗಿ ಅವರು ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ವಿರುದ್ಧ ನೇರವಾಗಿ ಆರೋಪ ಮಾಡಿದ್ದರು. ಶೋಭಾ ಕರಂದ್ಲಾಜೆ ಅವರ ಆರೋಪಕ್ಕೆ ಕಿಡಿಕಾರಿರುವ ಸ್ಪೀಕರ್ ಅವರಿಂದ ನಾನು ಕಲಿಯುವುದು ಏನೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ನಾನು ಕಲಿಯುವುದು ಏನೂ ಇಲ್ಲ. ಅವರಿಗಿಂತ ಉತ್ತಮರು ನನಗೆ ತಿಳಿದಿದ್ದಾರೆ. ನಾನು ಅವರ ಬಳಿಯೇ ಕಲಿಯುತ್ತೇನೆ. ಅವರವರ ನಡತೆಗೆ ಅನುಗುಣವಾಗಿ ಅವರ ನಾಲಿಗೆ ನುಡಿಯುತ್ತದೆ. ಅವರು ಬೆಳೆದುಬಂದ ಹಾದಿ ಅವರ ಮಾತಿಗೆ ಕಾರಣ. ಅವರು ಸಂಸದೆ ಎಂಬ ಕಾರಣಕ್ಕೆ ಅವರನ್ನು ಗೌರವಿಸುತ್ತೇನೆ ಎಂದು ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಶುಕ್ರವಾರ ಮಧ್ಯಾಹ್ನ 1:30ರ ಒಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನಿರ್ದೇಶನ ನೀಡಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸ್ಪೀಕರ್, ಎಲ್ಲಾ ವಿಚಾರಗಳಿಗೆ ಸದನದಲ್ಲೇ ಉತ್ತರ ನೀಡುತ್ತೇನೆ ಎಂದರು.