ಬೆಂಗಳೂರು: ಹಲವು ದಶಕಗಳಿಂದ ವಿವಾದವಾಗಿಯೇ ಉಳಿದಿರುವ ಮಹಾದಾಯಿ ಸಮಸ್ಯೆಗೆ ಇತ್ಯರ್ಥ ಕಾಣದೆ ಕೇವಲ ಹಗ್ಗ ಜಗ್ಗಾಟ ಮತ್ತು ರಾಜಕೀಯ ಲೆಕ್ಕಾಚಾರಕ್ಕೆ ತುತ್ತಾಗಿ ಈ ಸಮಸ್ಯೆ ಕಗ್ಗಂಟಾಗಿ ಉಳಿದಿತ್ತು. ಈಗ ಈ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಜನವರಿ 7ರಂದು ದೆಹಲಿಗೆ ಮಾತುಕತೆಗೆ ಬನ್ನಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗೋವಾದ ಮುಖ್ಯಮಂತ್ರಿ ಮನೋಹರ ಪರಿಕ್ಕರ್`ಗೆ ಆಮಂತ್ರಣ ನೀಡಿದ್ದಾರೆ.
ಹಲವು ದಶಕಗಳಿಂದ ಮಹಾದಾಯಿ ಸಮಸ್ಯೆಯು ನೆನೆಗುದಿಗೆ ಬಿದ್ದು ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ತಾರ್ಕಿಕ ಅಂತ್ಯಕಾಣದೆ ಮುಂಬೈ ಕರ್ನಾಟಕದ ಜನರಲ್ಲಿ ಭ್ರಮನಿರಸ ಉಂಟು ಮಾಡಿತ್ತು. ಆದ್ದರಿಂದ ಈ ಭಾಗದ ಜನರು ಅದರಲ್ಲೂ ನರಗುಂದ-ನವಲಗುಂದ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಧರಣಿ ಸತ್ಯಾಗ್ರಹಕ್ಕೆ ಕುಳಿತಿದ್ದರು. ಈ ಭಾಗಲ್ಲಿ ಸಮಸ್ಯೆಯ ಇತ್ಯರ್ಥಕ್ಕಾಗಿ ಜನರಿಂದ ತೀವ್ರರೀತಿಯ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ.ಇನ್ನೇನು ಕೆಲವೇ ತಿಂಗಳಲ್ಲಿ ಕರ್ನಾಟಕ ಚುನಾವಣೆಗೆ ಹೋಗುವುದರಿಂದ ಈ ಭಾಗದ ಜನರ ಆಶೀರ್ವಾದಬೇಕಾದರೆ ಈ ಸಮಸ್ಯೆ ಪರಿಹಾರವಾಗಲೇಬೇಕು ಎಂಬುವುದನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿಯವರು ಕೊನೆಗೂ ಗೋವಾದ ಮುಖ್ಯಮಂತ್ರಿ ಮನೋಹರ ಪರಿಕ್ಕರರನ್ನು ಈ ವಿಷಯ ಚರ್ಚಿಸಲು ಮಾತುಕತೆಗೆ ಆಹ್ವಾನಿಸಿದ್ದಾರೆ.
ಆದ್ದರಿಂದ ಈ ಭಾಗ ಜನರಿಗೆ ಈಗಲಾದರೂ ಪರಿಹಾರ ಸಿಗುತ್ತಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಾಗಿದೆ. ಏನೇ ಆಗಲಿ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನಿಗಳು ಮಾತುಕತೆಗೆ ಗೋವಾ ಮುಖ್ಯಮಂತ್ರಿಗಳನ್ನು ಕರೆದಿರುವುದು ನಿಜಕ್ಕೂ ಇಲ್ಲಿಯವರೆಗಿನ ಅತಿ ದೊಡ್ಡ ಬೆಳವಣಿಗೆ ಎಂದು ಹೇಳಬಹುದು. ಇನ್ನೊಂದೆಡೆಗೆ ನ್ಯಾಯಾಧಿಕರಣವು ಸಹಿತ ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದೆ. ಆದ್ದರಿಂದ ಈ ಮಾತುಕತೆ ನಡೆಯಬೇಕಾದರೆ ಕೇಂದ್ರ ಸರ್ಕಾರದ ಮಧ್ಯಸ್ತಿಕೆ ಅತಿ ಅವಶ್ಯಕ ಸಂಗತಿ. ಕಾರಣ ಇದು ಅಂತರಾಜ್ಯ ನದಿ ವಿವಾದವಾಗಿರುವುದರಿಂದ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಸಮಸ್ಯೆಯ ಕುರಿತಾಗಿ ಸಭೆ ನಡೆಯಬೇಕಾಗಿದೆ. ಆದ್ದರಿಂದ ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರ ಈ ಮಧ್ಯಸ್ತಿಕೆ ಮಹತ್ತರ ಪಾತ್ರ ವಹಿಸಲಿದೆ ಎನ್ನಲಾಗುತ್ತಿದೆ. ಆದರೆ ಇದನ್ನು ಪ್ರಧಾನಿಗಳು ಪರಿಕ್ಕರ ರವರನ್ನು ಮನವಹಿಸಲು ಯಶಸ್ಸಾಗುತ್ತಾರಾ ಎನ್ನುವುದು ಪ್ರಶ್ನೆ.
ಒಂದು ಕಡೆ ಕರ್ನಾಟಕದಲ್ಲಿ ಅದರಲ್ಲೂ ಉತ್ತರಕರ್ನಾಟಕದಲ್ಲಿ ಬಿಜೆಪಿ ಜನರ ಬೆಂಬಲವನ್ನು ಉಳಿಸಿಕೊಳ್ಳಬೇಕಾದರೆ ಈ ಸಮಸ್ಯೆಯನ್ನು ಅದು ಬಗೆಹರಿಸಲೆಬೇಕಾದ ಸವಾಲು ಅದಕ್ಕೆ ಎದುರಾಗಿದೆ. ಕಾರಣ ಇತ್ತೀಚಿಗೆ ಬಿಜೆಪಿ ನಾಯಕರು ಮಹದಾಯಿ ವಿಷಯದಲ್ಲಿ ನಡೆದುಕೊಂಡ ರೀತಿಯಂತೂ ಈ ಭಾಗದ ಜನರನ್ನು ರೊಚ್ಚಿಗೆಬ್ಬಿಸುವಂತೆ ಮಾಡಿದೆ.ಆದ್ದರಿಂದ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಅರಿವಿರುವ ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ಮಹದಾಯಿಯನ್ನು ಕರ್ನಾಟಕಕ್ಕೆ ಹರಿಸುತ್ತಾರೋ ಅಥವಾ ಇಲ್ಲವೋ ಎನ್ನುವಂತಹ ಪ್ರಶ್ನೆಗಳಿಗೆ ನಾವು ಜನೆವರಿ 7 ರಂದು ಪರಿಕ್ಕರ ಮತ್ತು ಮೋದಿಯವರ ಮಾತುಕತೆಯವರೆಗೆ ಕಾದುನೋಡಬೇಕಾಗಿದೆ.