ಅಮಿತ್ ಶಾಗೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಇತಿಹಾಸದ ಪಾಠದ ಅಗತ್ಯವಿದೆ: ಸಿದ್ದರಾಮಯ್ಯ

ಅಮಿತ್ ಶಾ ಅವರು ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ಎಲ್ಲ ಅನಿಷ್ಠಗಳಿಗೆ ಹೊಣೆ ಮಾಡಿದ್ದಾರೆ. ಅವರಿಗೆ ಯಾರಾದರೂ ಈ ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಪಾಠ ಮಾಡಬೇಕಾಗಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Last Updated : Sep 18, 2019, 06:51 AM IST
ಅಮಿತ್ ಶಾಗೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಇತಿಹಾಸದ ಪಾಠದ ಅಗತ್ಯವಿದೆ: ಸಿದ್ದರಾಮಯ್ಯ title=

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಏಕ ಪಕ್ಷ ಪ್ರಸ್ತಾಪದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು, ಅಮಿತ್ ಶಾಗೆ ಯಾರಾದರೂ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಪಾಠ ಮಾಡಬೇಕಿದೆ ಎಂದಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಭ್ರಷ್ಟಾಚಾರ, ಅಸುರಕ್ಷಿತ ಗಡಿ, ಮಹಿಳಾ ದೌರ್ಜನ್ಯ … ಹೀಗೆ ಎಲ್ಲದ್ದಕ್ಕೂ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ಹೊಣೆಮಾಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು 1998 ರಿಂದ 2004 ರ ವರೆಗೆ ಅಧಿಕಾರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್‌ಡಿಎ ಆಡಳಿತವನ್ನು ದೂರಲು ಹೊರಟಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. 

ಬ್ಯಾಂಕ್ ಲೂಟಿ ಮಾಡಿ ದೇಶ ಬಿಟ್ಟು ಓಡಿಹೋಗಿದ್ದು ಇದೇ ಅವಧಿಯಲ್ಲಿ!
2014ರಿಂದ ದೇಶದಲ್ಲಿರುವುದು ಏಕಚಕ್ರಾಧಿಪತ್ಯ. ರಪೇಲ್ ಹಗರಣ, ಜಿಡಿಪಿ ಶೇ.5ಕ್ಕೆ ಇಳಿದಿದ್ದು, ನಿರುದ್ಯೋಗ 45 ವರ್ಷಗಳಲ್ಲಿಯೇ ಅತ್ಯಧಿಕವಾಗಿದ್ದು, ಬ್ಯಾಂಕ್ ಲೂಟಿ‌ ಮಾಡಿ ದೇಶ ಬಿಟ್ಟು ಓಡಿದ್ದು, ಕಾಶ್ಮೀರದಲ್ಲಿ ಉಗ್ರರ ದಾಳಿ 42% ಹೆಚ್ಚಿದ್ದು, ಮಹಿಳಾ ಅತ್ಯಾಚಾರ 22% ಹೆಚ್ಚಿದ್ದು… ಇದೇ ಅವಧಿಯಲ್ಲಿ ಅಲ್ಲವೇ? ಎಂದು ಲೇವಡಿ ಮಾಡಿದ್ದಾರೆ.

ಶಾ ಮಿತ್ರಪಕ್ಷಗಳಿಗೆ ವಿಚ್ಛೇದನದ ಸಂದೇಶ ಕಳುಹಿಸುತ್ತಿದ್ದಾರೆಯೇ? 
ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ವಿರೋಧಿಸುತ್ತಿರುವ ಅಮಿತ್ ಶಾ ಅವರು ಬಿಹಾರ, ಗೋವಾ, ಮಹಾರಾಷ್ಟ್ರ ಮತ್ತು ಈಶಾನ್ಯ ರಾಜ್ಯಗಳ ಮಿತ್ರಪಕ್ಷಗಳಿಗೆ ವಿಚ್ಛೇದನದ ಸಂದೇಶ ಕಳುಹಿಸುತ್ತಿದ್ದಾರೆಯೇ? ಅಲ್ಲಿರುವುದು ಬಹುಪಕ್ಷೀಯ ಸರ್ಕಾರವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಎಲ್ಲಾ ಅನಿಷ್ಠಗಳಿಗೆ ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಹೊಣೆಯೇ?
ಗೃಹಸಚಿವ ಅಮಿತ್ ಶಾ ಏಕತ್ವದ ವ್ಯಸನಗ್ರಸ್ತರಾಗಿದ್ದಾರೆ. ಬಹುಭಾಷೆಗಳನ್ನು ಮೂಲೆಗೆ ತಳ್ಳುವ ಪ್ರಯತ್ನದ ನಂತರ ಈಗ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ಎಲ್ಲ ಅನಿಷ್ಠಗಳಿಗೆ ಹೊಣೆ ಮಾಡಿದ್ದಾರೆ. ಅವರಿಗೆ ಯಾರಾದರೂ ಈ ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಪಾಠ ಮಾಡಬೇಕಾಗಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಇತ್ತೀಚೆಗಷ್ಟೇ ನಡೆದ 'ಹಿಂದಿ ದಿವಸ್' ಕಾರ್ಯಕ್ರಮದಲ್ಲಿ ಏಕ ದೇಶ, ಏಕ ಭಾಷೆಗೆ ಸಂಬಂಧಿಸಿದಂತೆ ಅಮಿತ್ ಶಾ ನೀಡಿದ ಹೇಳಿಕೆಯಿಂದಾಗಿ ದಕ್ಷಿಣ ಭಾರತದ ಜನತೆ ರೊಚ್ಚಿಗೆದ್ದಿದ್ದು, ಬಲವಂತದ ಹಿಂದಿ ಹೇರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
 

Trending News